Asianet Suvarna News Asianet Suvarna News

ಒಂದೇ ದಿನ 1.14 ಲಕ್ಷ ಫಲಾನುಭವಿಗಳಿಗೆ ಸವಲತ್ತು: ಸಿಎಂ ಬೊಮ್ಮಾಯಿ

ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ನಿಗಮಗಳಡಿ ಹಲವು ಕಾರ‍್ಯಕ್ರಮಕ್ಕೆ 900 ಕೋಟಿ ರು. ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 

Privilege for 1.14 lakh Beneficiaries on a Single Day in Karnataka grg
Author
First Published Mar 12, 2023, 1:00 AM IST

ಬೆಂಗಳೂರು(ಮಾ.12):  ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ನಿಗಮಗಳಡಿ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ, ಸಾಲ ಮಂಜೂರಾತಿ, ಹೊಲಿಗೆ ತರಬೇತಿ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಒಟ್ಟಾರೆ 1.14 ಲಕ್ಷ ಫಲಾನುಭವಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬರೋಬ್ಬರಿ 900 ಕೋಟಿ ರು. ಅನುದಾನವನ್ನು ಶನಿವಾರ ಬಿಡುಗಡೆ ಮಾಡಿದರು.

ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವಿವಿಧ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಹಲವು ನಿಗಮಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆಗೆ ಅನುದಾನ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಇವತ್ತು ಒಂದೇ ಬಾರಿಗೆ ಸರ್ಕಾರ ವಿವಿಧ ನಿಗಮಗಳಡಿ ಜಾರಿಗೊಳಿಸಿರುವ ಯೋಜನೆಗಳಿಗೆ ಆಯ್ಕೆಯಾಗಿರುವ ಬರೋಬ್ಬರಿ 1.14 ಲಕ್ಷ ಫಲಾನುಭವಿಗಳಿಗೆ ಯೋಜನೆ ಸೌಲಭ್ಯ, ಸವಲತ್ತುಗಳನ್ನು ನೀಡಲು 900 ಕೋಟಿ ರು. ಹಣವನ್ನು ಬಿಡುಗಡೆ ಮಾಡಿದ್ದೇನೆ. ಯಾರಿಗೋಸ್ಕರ ಈ ಶಕ್ತಿ ಸೌಧ ಕಟ್ಟಲಾಗಿದೆಯೋ ಆ ಜನಸಾಮಾನ್ಯರು ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅದರ ಲಾಭವನ್ನು ಪಡೆಯುತ್ತಿರುವುದು ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆ’ ಎಂದರು.

ಕಾಂಗ್ರೆಸ್ ನಾಯಿಗಳು ಮೋದಿ, ಬೊಮ್ಮಾಯಿಯನ್ನು ಕೆಟ್ಟದ್ದಾಗಿ ಬೈಯುತ್ತವೆ: ಈಶ್ವರಪ್ಪ

‘ಇವತ್ತು ನಮ್ಮ ಸರ್ಕಾರ ಮಾಡುತ್ತಿರುವ ಕಾರ್ಯವನ್ನು 75 ವರ್ಷಗಳಿಂದ ಮಾಡಿಕೊಂಡು ಬಂದಿದ್ದರೆ ನಮಗೆ ಇದರ ಅವಶ್ಯಕತೆಯೇ ಬರುತ್ತಿರಲಿಲ್ಲ. ಉನ್ನತ ಶಿಕ್ಷಣಕ್ಕೆ ದೊಡ್ಡ ಪ್ರಮಾಣದಲ್ಲಿ ಅನುದಾನ ಬಳಕೆ ಮಾಡಬಹುದಿತ್ತು. ಎಲ್ಲರಿಗೂ ಸೂರು, ಸ್ವಯಂ ಉದ್ಯೋಗ ಸಿಕ್ಕಿದ್ದರೆ ಮನೆ ಕಟ್ಟುವ, ಉದ್ಯೋಗ ಕಲ್ಪಿಸುವ ಅವಕಾಶವಿರುತ್ತಿರಲಿಲ್ಲ. ಇದರ ಮುಂದಿನ ಹಂತದ ಬೆಳವಣಿಗೆ ಕಡೆ ಗಮನ ಹರಿಸಬಹುದಿತ್ತು. ಆದರೆ, ಇದ್ಯಾವುದೂ ಆಗಲಿಲ್ಲ. ಸರ್ಕಾರ ನೀಡುವ ಕಾರ್ಯಕ್ರಮಗಳು ಜನರ ಹಕ್ಕೇ ಹೊರತು ಉಪಕಾರವಲ್ಲ’ ಎಂದರು.

5 ತಿಂಗಳಲ್ಲಿ ಗಂಗಾ ಕಲ್ಯಾಣ ಅನುಷ್ಠಾನ:

ಗಂಗಾ ಕಲ್ಯಾಣ ಯೋಜನೆಯಡಿ 19 ಸಾವಿರ ಫಲಾನುಭವಿಗಳಿಗೆ ಬೇರೆ ಬೇರೆ ನಿಗಮಗಳ ವತಿಯಿಂದ ಐದೇ ತಿಂಗಳಲ್ಲಿ ಕೊಳವೆಬಾವಿ ಮಂಜೂರು ಮಾಡಲಾಗಿದೆ. ಐದೇ ತಿಂಗಳಲ್ಲಿ ಆಗುವ ಇಂತಹ ಯೋಜನೆಗಳನ್ನೂ ಹಿಂದೆ ಪಂಚವಾರ್ಷಿಕ ಯೋಜನೆಯಂತೆ ಐದು ವರ್ಷ ಮಾಡುತ್ತಿದ್ದರು. ನಾವು ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನವನ್ನು ವರ್ಗಾಯಿಸುವ ಕೆಲಸ ಮಾಡುತ್ತಿದ್ದೇವೆ. ಇದು ಪ್ರಧಾನಿ ಮೋದಿ ಅವರ ಕೊಡುಗೆ. ಮೊದಲ ಕಂತಿನಲ್ಲಿ 75 ಸಾವಿರ ಹಣವನ್ನ ನೇರವಾಗಿ ಖಾತೆಗಳಿಗೆ ವರ್ಗಾಯಿಸಲಾಗಿದೆ. ಗುತ್ತಿಗೆದಾರನಿಗೆ ಸಹಾಯ ಮಾಡೋ ಕೆಲಸ ನಾವು ಮಾಡಿಲ್ಲ ಎಂದರು.

ಸಿಎಂ ಬೊಮ್ಮಾಯಿ ಬಗ್ಗೆ ಬಂತು ಆಲ್ಬಂ ಸಾಂಗ್

ಗಂಗಾ ಕಲ್ಯಾಣದ ಜತೆಗೆ 50 ಕನಕದಾಸ ಹಾಸ್ಟೆಲ್‌ ನಿರ್ಮಾಣ, ಸ್ವಯಂ ಉದ್ಯೋಗ, ಹೊಲಿಗೆ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳಡಿ ಸೌಲಭ್ಯಗಳನ್ನು ನೀಡಲಾಗಿದೆ. ಅವಶ್ಯಕತೆಗೆ ಅನುಸಾರವಾಗಿ 33 ಸಾವಿರ ಮಕ್ಕಳಿಗೆ ವಿದ್ಯಾರ್ಥಿನಿಲಯದ ಸೌಕರ್ಯ ಕಲ್ಪಿಸಲಾಗಿದೆ. ಈ ವರ್ಷ ಹೆಚ್ಚುವರಿಯಾಗಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಹಾಸ್ಟೆಲ… ವ್ಯವಸ್ಥೆ ಕಲ್ಪಿಸಲಾಗಿದೆ. ವಿದ್ಯಾಸಿರಿ ಯೋಜನೆ ಹಾಗೂ ಹಾಸ್ಟೆಲ್‌ ಮೂಲಕ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹಳ್ಳಿಗಳಲ್ಲಿ ಹಿಂದುಳಿದ ವರ್ಗದವರಿಗೆ ಕಾಯಕ ಕಾರ್ಯಕ್ರಮದ ಮೂಲಕ 50 ಸಾವಿರ ರು.ವರೆಗೆ ಸಹಾಯಧನ, ಸಾಲಸೌಲಭ್ಯ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳ ಆಯೋಗ ರಚಿಸಿ ಆ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ ನಾಯಕ ಡಿ.ದೇವರಾಜ ಅರಸು ಅವರನ್ನು ನೆನೆಯಬೇಕು. ಇದರಿಂದಲೇ ಅವರೆಲ್ಲರಿಗೂ ಇಂದು ಅನೇಕ ಸೌಲಭ್ಯಗಳು ದೊರೆಯುತ್ತಿವೆ ಎಂದರು.

ನಮ್ಮ ಸರ್ಕಾರ ಎಸ್ಸಿಎಸ್ಟಿ, ಹಿಂದುಳಿದವರ ಪರವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ವಿದ್ಯಾನಿಧಿ ಯೋಜನೆಯನ್ನು ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲಾಗಿದೆ. ಹಲವು ವರ್ಷಗಳಿಂದ ಗುತ್ತಿಗೆ, ನೇರಪಾವತಿಯಡಿ ಸೇವೆ ಸಲ್ಲಿಸುತ್ತಿದ್ದ ಸಫಾಯಿ ಕರ್ಮಚಾರಿಗಳು ಸೇರಿದಂತೆ ಒಟ್ಟು 24 ಸಾವಿರ ಪೌರ ಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಸ್ಮಶಾನ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡಿದೆ. ಕುರಿಗಾಹಿಗಳಿಗೆ 350 ಕೋಟಿ ರು. ವೆಚ್ಚದಲ್ಲಿ ಸಹಾಯ, 50 ಸಾವಿರ ಲಮಾಣಿ ಜನಾಂಗಕ್ಕೆ ಹಕ್ಕು ಪತ್ರ ನೀಡಲಾಗಿದೆ. ಕುರುಬರಹಟ್ಟಿ, ಗೊಲ್ಲರ ಹಟ್ಟಿ, ಲಮಾಣಿ ಸಮುದಾಯಕ್ಕೆ ಒಂದು ವಾರದೊಳಗೆ ಇನ್ನೂ 1 ಲಕ್ಷ ಜನರಿಗೆ ಹಕ್ಕು ಪತ್ರ ನೀಡಲಾಗುವುದು. ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ 1 ಸಾವಿರ ರು. ಕೊಡುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರೂಪಾಲಿ ನಾಯಕ್‌, ಎಂ.ಕೃಷ್ಣಪ್ಪ ಮತ್ತಿತರರಿದ್ದರು.

Follow Us:
Download App:
  • android
  • ios