ಬೆಂಗಳೂರು(ಆ.01): ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ 60 ವರ್ಷದ ರೋಗಿಯೊಬ್ಬರಿಗೆ ಖಾಸಗಿ ಆಸ್ಪತ್ರೆ ಸಿಬ್ಬಂದಿ ಮೂರೂವರೆ ಲಕ್ಷ ಬಿಲ್‌ ಪಾವತಿಸುವಂತೆ ಒತ್ತಡ ಹೇರುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಜು.24ರಂದು ವೃದ್ಧರು ಚಿಕಿತ್ಸೆಗಾಗಿ ಸ್ಪರ್ಶ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ರೋಗಿಯನ್ನು ಡಿಸ್ಜಾರ್ಜ್‌ ಮಾಡಲು 3.50 ಲಕ್ಷ ಪಾವತಿಸಲು ಸೂಚಿಸಲಾಗಿದೆ. ವೃದ್ಧರ ಮಕ್ಕಳು ಈಗಾಗಲೇ 2 ಲಕ್ಷ ಬಿಲ್‌ ಪಾವತಿಸಿದ್ದಾರೆ. ಆದರೆ, ಉಳಿದ ಮೊತ್ತ ಪಾವತಿಸಲು ಆಸ್ಪತ್ರೆ ಸಿಬ್ಬಂದಿ ಒತ್ತಡ ಹಾಕಲಾಗುತ್ತಿದೆ. ನಾವು ಕ್ವಾರಂಟೈನ್‌ನಲ್ಲಿದ್ದೇವೆ. ಹಣ ಹೊಂದಿಸಲು ಪರದಾಡುತ್ತಿದ್ದೇವೆ ಎಂದು ವೃದ್ಧರ ಕುಟುಂಬಸ್ಥರು ಮನವಿ ಮಾಡಿದರೂ ಆಸ್ಪತ್ರೆ ಸಿಬ್ಬಂದಿ ಒಪ್ಪುತ್ತಿಲ್ಲ ಎನ್ನಲಾಗಿದೆ. ಬಿಬಿಎಂಪಿ ದರದಲ್ಲೇ ಚಿಕಿತ್ಸೆ ಬೇಕು ಅಂದರೆ ಬೇರೆ ಆಸ್ಪತ್ರೆಗೆ ಹೋಗಿ ಎಂದು ಹಣ ಕಟ್ಟಲು ಒತ್ತಾಯಿಸುತ್ತಿದ್ದಾರೆ ಎಂದು ವೃದ್ಧರ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

'ಬೆಡ್‌ ಇಲ್ಲ': ಮಂಗಳೂರಲ್ಲೂ ಶುರುವಾಯ್ತು ಹೊಸ ಗೋಳು, ಪ್ರಭಾವಿಗಳಿಗಷ್ಟೇ ಸೌಲಭ್ಯ

ಒಂದೇ ಕಟ್ಟಡದ 30 ಜನರಿಗೆ ಕೊರೋನಾ ಪಾಸಿಟಿವ್‌!

ಮಹಾಲಕ್ಷ್ಮಿ ಲೇಔಟ್‌ನಲ್ಲಿ ಒಂದೇ ಬಹುಮಹಡಿ ಕಟ್ಟಡದ 30 ಜನರಿಗೆ ಕೊರೋನಾ ದೃಢಪಟ್ಟಿದೆ. ಕಳೆದ ಮೂರು ದಿನಗಳ ಹಿಂದೆ ಇಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿತ್ತು. ಬಳಿಕ ಬಿಬಿಎಂಪಿ ಸಿಬ್ಬಂದಿ ಸೋಂಕಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಅನಂತರ 30 ಜನರಿಗೆ ಸೋಂಕು ತಗುಲಿದೆ. ಅಲ್ಲದೇ ಅದರ ಪಕ್ಕದ ಬಿಲ್ಡಿಂಗ್‌ನಲ್ಲಿ ಮತ್ತೆ ಐವರಿಗೆ ಕೊರೋನಾ ಸೋಂಕು ದೃಢವಾಗಿದೆ. ಆದರೆ, ಈಗಾಗಲೇ ಪಾಸಿಟಿವ್‌ ಬಂದವರಿಂದ ಸೋಂಕು ಹರಡಿದೆಯೋ ಅಥವಾ ಇತರರ ಸಂಪರ್ಕದಿಂದ ಸೋಂಕು ಬಂದಿದೆಯೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದರಿಂದ ಸುತ್ತಮುತ್ತಲಿನ ನಿವಾಸಿಗಳಲ್ಲಿ ಸೋಂಕು ಹರಡುವ ಆತಂಕ ಎದುರಾಗಿದೆ.