ಬೆಂಗಳೂರಿನ ಐಡೆಂಟಿಟಿ ಬದಲಿಸಲಿದೆ ಬೋಯಿಂಗ್, ಪ್ರಧಾನಿ ಮೋದಿ ವಿಶ್ವಾಸ!
ಬೆಂಗಳೂರಿನ ಐಡೆಂಟಿಟಿಯನ್ನು ಬೋಯಿಂಗ್ ಇನ್ನಷ್ಟು ಬಲಪಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಹೊರಗೆ ಬೋಯಿಂಗ್‌ನ ಅತಿದೊಡ್ಡ ಕೇಂದ್ರವನ್ನು ದೇವನಹಳ್ಳಿಯಲ್ಲಿ ಸ್ಥಾಪಿಸಲಾಗಿದ್ದು, ಇದರ ಉದ್ಘಾಟನೆಯನ್ನು ಪ್ರಧಾನಿ ಮೋದಿ ನೆರವೇರಿಸಿದರು.
ಬೆಂಗಳೂರು (ಜ.19): ಬೋಯಿಂಗ್ ಫೆಸಿಲಿಟಿ ಕೇವಲ ಒಂದು ಕಂಪನಿ ಮಾತ್ರವಲ್ಲ. ಬೆಂಗಳೂರಿನ ಐಡೆಂಟಿಟಿಯನ್ನು ಸಂಪೂರ್ಣವಾಗಿ ಇದು ಬದಲಿಸುವ ವಿಶ್ವಾಸ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆಕಾಂಕ್ಷೆಗಳನ್ನು ನಾವೀನ್ಯತೆ ಮತ್ತು ಸಾಧನೆಯೊಂದಿಗೆ ಸಂಪರ್ಕಿಸುವ ನಗರ ಬೆಂಗಳೂರು. ಬೆಂಗಳೂರು ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಜಾಗತಿಕ ಬೇಡಿಕೆಯೊಂದಿಗೆ ಸಂಪರ್ಕಿಸುತ್ತದೆ. ಈ ಹೊಸ ಬೋಯಿಂಗ್ ಕ್ಯಾಂಪಸ್ ಬೆಂಗಳೂರಿನ ಗುರುತನ್ನು ಇನ್ನಷ್ಟು ಬಲಪಡಿಸುತ್ತದೆ. ಇದು ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಬೋಯಿಂಗ್‌ನ ಅತಿದೊಡ್ಡ ಸೌಲಭ್ಯವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಬೆಂಗಳೂರಿನ ದೇವನಹಳ್ಳಿಯಲ್ಲಿ 1600 ಕೋಟಿ ರೂಪಾಯಿ ವೆಚ್ಚದಲ್ಲಿ 43 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಿರುವ ಬೋಯಿಂಗ್ ಘಟಕವನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು.
ಇಂದು ಭಾರತದ ಮಹಿಳೆಯರು ಗಣಿತ ಮತ್ತು ತಂತ್ರಜ್ಞಾನದಲ್ಲಿ ಮುಂದೆ ಇದ್ದಾರೆ. ಭಾರತದ ಏವಿಯೇಷನ್ ಸೆಕ್ಟರ್ ನಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ತಯಾರಿಕೆಯಿಂದ ಹಿಡಿದು ಸರ್ವೀಸ್‌ವರೆಗೂ ನಾವು ಸ್ವಾವಲಂಬಿಯಾಗಿದ್ದೇವೆ. ಜಗತ್ತಿನ ಏವಿಯೇಷನ್ ಸೆಕ್ಟರ್ ನಲ್ಲಿ ಭಾರತ ಮುಂದೆ ಬಂದಿದೆ. ನಾವು ಅಧಿಕಾರಕ್ಕೆ ಬರುವ ಮುಂಚೆ 70 ವಿಮಾನ ನಿಲ್ದಾಣವಿತ್ತು ಈಗ 150 ಕ್ಕೆ ಬಂದು ತಲುಪಿದ್ದೇವೆ. ಭಾರತದಲ್ಲಿ ಉದ್ಯಮಿಗಳು ಇನ್ನೂ ಹೆಚ್ಚು ಹೆಚ್ಚು ಅವಕಾಶ ಬಯಸುತ್ತಿದ್ದಾರೆ. ವಿಮಾನದಲ್ಲಿ ಸಂಚರಿಸುವ ದೇಶೀಯ ಪ್ರಯಾಣಿಕರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಭಾರತ ವೈಮಾನಿಕ ರಂಗದಲ್ಲಿ 10 ವರ್ಷದ ಹಿಂದೆ ಹೇಗಿತ್ತು? ಕೇವಲ 10 ವರ್ಷಗಳಲ್ಲಿ ವೈಮಾನಿಕ ರಂಗದಲ್ಲಿ ನಮ್ಮ ದೇಶ ಮುಂಚೂಣಿಯಲ್ಲಿದೆ. ಉಡಾನ್ ಯೋಜನೆ ಮೂಲಕ ವೈಮಾನಿಕ ಸೇವೆಗಳು ಜನರಿಗೆ ಸುಲಭವಾಗಿ ಈಗ ಕೈಗೆಟುಕುತ್ತಿವೆ. ಹೊಸ ವಿಮಾನ ನಿಲ್ದಾಣಗಳ ನಿರ್ಮಾಣ ಅಷ್ಟೇ ಅಲ್ಲ ಅವುಗಳ ಕಾರ್ಯಕ್ಷಮತೆ, ಗುಣಮಟ್ಟವೂ ಹೆಚ್ಚಿದೆ. ವೈಮಾನಿಕ ರಂಗ ವೇಗವಾಗಿ ಬೆಳೆಯುತ್ತಿದೆ..ಈ ಮೂಲಕ ಭಾರತದ ಆರ್ಥಿಕತೆಯ ದಿಕ್ಕು ಬದಲಾಗುತ್ತಿದೆ. ಉದ್ಯೋಗವಕಾಶಗಳೂ ಹೆಚ್ಚಾಗಿವೆ ಎಂದರು.
ಸಿಎಂಗೆ ವೇದಿಕೆಯಲ್ಲೇ ಟಾಂಗ್ ನೀಡಿದ ಮೋದಿ: ಟ್ವಿಟ್ ಮೂಲಕ ಪಿಎಂ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದ ಸಿಎಂಗೆ ವೇದಿಕೆಯಲ್ಲೇ ಮೋದಿ ಟಾಂಗ್ ನೀಡಿದರು. ತಮ್ಮ ಸರ್ಕಾರ ಬಂದ ಮೇಲೆ ಏನೆಲ್ಲಾ ಬದಲಾವಣೆ ಆಗಿದೆ ಎಂಬ ಅಭಿವೃದ್ಧಿ ಮಂತ್ರವನ್ನು ಜಪಿಸುವ ವೇಳೆ ದೇಶದಲ್ಲಿ ಸುಭದ್ರ ಸರ್ಕಾರ ಇದೆ ಎಂದು ಮೋದಿ ಹೇಳಿದರು. ಸುಭದ್ರ ಸರ್ಕಾರದ ಇದೆ ಎಂದಾಗ ನೆರದಿದ್ದ ಸಭೀಕರು ಚಪ್ಪಾಳೆ ಹೊಡೆದರು. ಅಷ್ಟಕ್ಕೆ ಸುಮ್ಮನಾಗದ ಮೋದಿ ನೋಡಿ ಹೇಗೆ ಸಿಎಂ ಆಶ್ಚರ್ಯಕರವಾಗಿ ನೋಡ್ತಿದ್ದಾರೆ ಎಂದು ಟಾಂಗ್ ನೀಡಿದರು.
ಭಾರತ ಒಂದು ಅಸಾಧಾರಣ ಯಶಸ್ಸಿನ ಕಥೆ; ಮೋದಿ ಸರ್ಕಾರದ ಸಾಧನೆಗಳಿಂದ ಅನೇಕರಿಗೆ ಲಾಭ: ಅಮೆರಿಕ ಶ್ಲಾಘನೆ
ಮೋದಿ ಭಾಷಣ ಮುಗಿದ ನಂತರ ಪಿಎಂ ಮೋದಿ, ಸಿಎಂ ಸಿದ್ದರಾಮಯ್ಯ ಮತ್ತು ಆರ್ ಅಶೋಕ್ ಕೆಲ ಕ್ಷಣ ಮಾತುಕತೆ ನಡೆಸಿದರು. ಈ ವೇಳೆ ಪ್ರಧಾನಿ ಮೋದಿ ಅವರಿಗೆ ಬರ ಪರಿಹಾರ ವಿಚಾರವಾಗಿ ಸಿದ್ಧರಾಮಯ್ಯ ಮತ್ತೊಮ್ಮೆ ಮೌಖಿಕವಾಗಿ ಮನವಿ ಮಾಡಿದರು. ಮನವಿ ಕೊಟ್ಟಿದ್ದೀರಿ ಅದು ನನ್ನ ಗಮನದಲ್ಲಿದೆ. ನಾನು ಅದನ್ನು ಮಾಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಅಯೋಧ್ಯೆಯ ರಾಮಮಂದಿರ ನೆನಪಿನ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ