ನಾನು ಬಡವರ ಬದುಕು ಕಟ್ಟುತ್ತಿದ್ದರೆ ಕಾಂಗ್ರೆಸ್ ನನ್ನ ಗೋರಿ ತೋಡುತ್ತಿತ್ತು: ಪ್ರಧಾನಿ ಮೋದಿ
‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯದಲ್ಲಿ ಮೋದಿ ಬ್ಯುಸಿಯಾಗಿದ್ದಾಗ ಕಾಂಗ್ರೆಸ್ ಪಕ್ಷ ಮೋದಿಯ ಸಮಾಧಿ ತೋಡುವ ಕೆಲಸದಲ್ಲಿ ನಿರತವಾಗಿತ್ತು’ ಎಂದು ಪ್ರತಿಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಎಂ.ಅಫ್ರೋಜ್ ಖಾನ್
ಮದ್ದೂರು (ಮಾ.13): ‘ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾರ್ಯದಲ್ಲಿ ಮೋದಿ ಬ್ಯುಸಿಯಾಗಿದ್ದಾಗ ಕಾಂಗ್ರೆಸ್ ಪಕ್ಷ ಮೋದಿಯ ಸಮಾಧಿ ತೋಡುವ ಕೆಲಸದಲ್ಲಿ ನಿರತವಾಗಿತ್ತು’ ಎಂದು ಪ್ರತಿಪಕ್ಷದ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಂಡ್ಯದಲ್ಲಿ ಭಾನುವಾರ 1.8 ಕಿ.ಮೀ. ರೋಡ್ ಶೋ ನಡೆಸಿ, ಬಳಿಕ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ‘ರಾಜ್ಯದ ಮೊದಲ ಎಕ್ಸ್‌ಪ್ರೆಸ್ ವೇ’ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿ, ಮೈಸೂರು-ಕುಶಾಲನಗರ ಚತುಷ್ಪಥ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಬಹಿರಂಗ ಸಮಾವೇಶದಲ್ಲಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿ ಹಾಗೂ ಜನತೆಯ ಪ್ರಗತಿಗೆ ಡಬಲ್ ಎಂಜಿನ್ ಸರ್ಕಾರ ಪ್ರಯತ್ನಿಸುತ್ತಿರುವಾಗ ಕಾಂಗ್ರೆಸ್ ಮತ್ತು ಅದರ ಮಿತ್ರರು ಏನು ಮಾಡುತ್ತಿದ್ದರು? ಮೋದಿ ಸಮಾಧಿಯ ಗುಂಡಿ ತೋಡುವ ಬಗ್ಗೆ ಕನಸು ಕಾಣುತ್ತಿದ್ದರು. ಈ ಮೋದಿ ಬಡವರ ಜೀವನ ಉದ್ಧಾರ ಮಾಡಲು ವ್ಯಸ್ತನಾಗಿದ್ದರೆ, ಕಾಂಗ್ರೆಸ್ ಅದೇ ಮೋದಿಯ ಗುಂಡಿ ತೋಡುವ ಕೆಲಸದಲ್ಲಿ ತೊಡಗಿತ್ತು. ಮೋದಿಯ ಸಮಾಧಿ ಗುಂಡಿ ತೋಡುವ ಕನಸನ್ನು ಕಾಣುತ್ತಿರುವ ಕಾಂಗ್ರೆಸ್ ವ್ಯಕ್ತಿಗಳಿಗೆ, ಕೋಟ್ಯಂತರ ತಾಯಂದಿರು, ಸೋದರಿಯರು, ಪುತ್ರಿಯರು ಹಾಗೂ ಜನತೆಯ ಆಶೀರ್ವಾದ ಮೋದಿಗೆ ಅತಿದೊಡ್ಡ ರಕ್ಷಣೆಯಾಗಿದೆ ಎಂಬುದೇ ಗೊತ್ತಿಲ್ಲ ಎಂದು ಹರಿಹಾಯ್ದರು.
ಪ್ರತಿ ಮನೆಗೂ ಮೋದಿ ಸರ್ಕಾರದ ಸವಲತ್ತು ತಲುಪಿದೆ: ಬಿ.ಎಸ್.ಯಡಿಯೂರಪ್ಪ
ಬಡವರ ಜೀವನ ಸುಧಾರಣೆಗೆ ಕ್ರಮ: 2014ಕ್ಕೂ ಮೊದಲಿದ್ದ ಕಾಂಗ್ರೆಸ್ ಸರ್ಕಾರ ಬಡವರು ಹಾಗೂ ಬಡವರ ಕಲ್ಯಾಣದ ಬಗ್ಗೆ ಸಂವೇದನೆ ತೋರಿಸಲಿಲ್ಲ. ಕಾಂಗ್ರೆಸ್‌ಗೆ ಎಂದೂ ಬಡವರ ದುಃಖ, ದುಮ್ಮಾನಗಳ ಪರಿಚಯ ಇರಲಿಲ್ಲ. ಬಡವರ ಕಲ್ಯಾಣಕ್ಕಾಗಿ ವಿನಿಯೋಗವಾಗಬೇಕಿದ್ದ ಸಾವಿರಾರು ಕೋಟಿ ರು.ಗಳನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡಿತು. ಆದರೆ, ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ರೈತರು, ಬಡವರ ಜೀವನವನ್ನು ಸುಧಾರಣೆಗೊಳಿಸುವ ಹಾಗೂ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೈವೇ ನಿರ್ಮಾಣದ ಜೊತೆಗೆ ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕಾರ್ಯದಲ್ಲಿ ತೊಡಗಿದೆ ಎಂದರು.
2014ರಲ್ಲಿ ನೀವು ನನಗೆ ಮತ ನೀಡಿ, ಸೇವೆ ಮಾಡುವ ಅವಕಾಶ ನೀಡಿದಿರಿ. ನಂತರ ದೇಶದಲ್ಲಿ ಬಡವರ ಪರವಾದ ಹಾಗೂ ಬಡವರ ದುಃಖ, ದುಮ್ಮಾನ ಅರಿಯುವ ಸಂವೇದನಾ ಶೀಲ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂತು. ಕಳೆದ 9 ವರ್ಷಗಳಲ್ಲಿ ಈ ಬಿಜೆಪಿ ಸರ್ಕಾರ ಬಡವರ ಜೀವನದಲ್ಲಿ ಕಷ್ಟಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ತಮ್ಮ ಕೆಲಸಕ್ಕಾಗಿ ಬಡವರು ಸರ್ಕಾರಿ ಕಚೇರಿಗೆ ಎಡತಾಕಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಬಡವರ ಮನೆ ಬಾಗಿಲಿಗೆ ಯೋಜನೆಯ ಸವಲತ್ತು ತಲುಪಿಸುವ ಕೆಲಸ ಮಾಡುತ್ತಿದೆ. ವಂಚಿತರಾದವರಿಗೆ ಅಭಿಯಾನದ ಮೂಲಕ ಯೋಜನೆಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಈ ವರ್ಷದಲ್ಲಿ ನೀಡಿದ 6ನೇ ಕರ್ನಾಟಕ ಭೇಟಿ ಇದಾಗಿತ್ತು. ಈ ವೇಳೆ ಅವರು 8,480 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ 117 ಕಿ.ಮೀ.ಉದ್ದದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಸೇರಿ 12 ಸಾವಿರ ಕೋಟಿ ರು.ಗೂ ಅಧಿಕ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮೈಸೂರಿಗೆ ವಿಮಾನದಲ್ಲಿ ಬಂದಿಳಿದು ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಮಂಡ್ಯಕ್ಕೆ ಪ್ರಧಾನಿ ಆಗಮಿಸಿದರು. ದೇಶದ ಪ್ರಧಾನಿಯೊಬ್ಬರು ಮಂಡ್ಯಕ್ಕೆ ಆಗಮಿಸಿದ್ದು 4 ದಶಕಗಳಲ್ಲಿ ಇದೇ ಮೊದಲು. ಮಂಡ್ಯದ ಪ್ರವಾಸಿ ಮಂದಿರ ವೃತ್ತದಿಂದ ನಂದಾ ಸರ್ಕಲ್‌ವರೆಗೆ 1.8 ಕಿ.ಮೀ. ದೂರ ಮೋದಿ ರೋಡ್ ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪ್ರಧಾನಿ ಅವರಿಗೆ ಪುಷ್ಪವೃಷ್ಟಿಗರೆದರು.
'ಕಾಂಗ್ರೆಸ್ ಗ್ಯಾರಂಟಿ' ಮತ್ತೆ ಮುಳುಗುವುದು ಖಚಿತ: ಸಚಿವ ಸಿ.ಸಿ.ಪಾಟೀಲ್
ಮೋದಿ ಅವರ ಕಾರು ಹೂವಿನಿಂದ ತುಂಬಿ ಹೋಗಿತ್ತು. ಪ್ರಧಾನಿ ಅವರು ಅದೇ ಹೂವನ್ನು ಜನರತ್ತ ಎಸೆದು ಹುರಿದುಂಬಿಸಿದರು. ರೋಡ್ ಶೋ ಬಳಿಕ ಎಕ್ಸ್‌ಪ್ರೆಸ್ ವೇಯಲ್ಲಿ ಮೋದಿ ಇಳಿದರು. ಈ ವೇಳೆ ಈ ಭಾಗದ ಜನಪದ ಕಲಾ ತಂಡಗಳು ಅವರಿಗೆ ಅದ್ಧೂರಿ ಸ್ವಾಗತ ಕೋರಿದವು. ಅಲ್ಲಿಂದ ಗೆಜ್ಜಲಗೆರೆ ತಲುಪಿದ ಮೋದಿ, ವಿವಿಧ ಕಾಮಗಾರಿಗೆ ಚಾಲನೆ ನೀಡಿ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಪ್ರಹ್ಲಾದ ಜೋಶಿ, ರಾಜ್ಯದ ಸಚಿವರಾದ ಗೋಪಾಲಯ್ಯ, ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಸಂಸದರಾದ ಸುಮಲತಾ ಅಂಬರೀಷ್ ಹಾಗೂ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.