ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಲಬುರಗಿಯಲ್ಲಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರದ ವಿರುದ್ಧ ವಾಕ್‌ಪ್ರಹಾರ ನಡೆಸಿದರು.

ಕಲಬುರಗಿ (ಮಾ.16): ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಕಲಬುರಗಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಬೃಹತ್‌ ಸಮಾವೇಶದಲ್ಲಿ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ರಾಜ್ಯ ಸರ್ಕಾರದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳಗಿದೆ, ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಹೆಚ್ಚಾಗುತ್ತಿದೆ. ಹೈಕಮಾಂಡ್‌ಗೆ ಇಲ್ಲಿಂದಲೇ ಹಣ ಕಳಿಸ್ತಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದಾರೆ. ಇದೇ ವೇಳೆ ಸದನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಹೇಳಿರುವ ಮಾತನ್ನು ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, ನಿಮ್ಮ ನಾಯಕರೇ ಸಂಸತ್ತಿನಲ್ಲಿ ಅಬ್‌ ಕೀ ಬಾರ್‌ 400 ಪಾರ್‌ ಎಂದು ಹೇಳಿದ್ದಾರೆ. 

ಇದಕ್ಕೂ ಮುನ್ನ ಕನ್ನಡದಲ್ಲಿಯೇ ಮಾತು ಆರಂಭಿಸಿದ ಮೋದಿ, ಬಸವೇಶ್ವರ ನಾಡು ಕಲಬುರಗಿ ಜನತೆ ನಮಸ್ಕಾರಗಳು ಎಂದು ಹೇಳಿದರು. ಈ ಬಿಸಿಲಿ ಎಷ್ಟು ಜನ ಬಂದಿದ್ದಾರೆ. ರೋಡ್ ಶೋ ನಲ್ಲಿ ನನಗೆ ಜನ ಆಶೀರ್ವಾದ ಮಾಡಲು ಬಂದಿದ್ದೀರಿ. ಇನ್ನೂ ಎಲೆಕ್ಷನ್ ಘೋಷಣೆ ಆಗಿಲ್ಲ. ಅದಕ್ಕೂ ಮುನ್ನವೇ ಜನರೇ ಈ ಬಾರಿ ಎನ್‌ಡಿಎ 400 + ದಾಟಲಿದೆ ಎಂದು ಹೇಳುತ್ತಿದ್ದಾರೆ. ಪೂರ್ತಿ ವಿಶ್ವಾಸದಿಂದ ಹೇಳ್ತೀನಿ. ನಾಲ್ಕು ರಾಜ್ಯ ಸುತ್ತಿದ್ದೇನೆ.. ತಮಿಳುನಾಡು ತೆಲಂಗಾಣ ಕೇರಳ ಕರ್ನಾಟಕ ಹೋಗಿದ್ದೇನೆ‌.. ಎಲ್ಲಾ ರೀತಿಯ ಜನ ಬೆಂಬಲ ಸೂಚಿಸುತ್ತಿದ್ದಾರೆ. ಬಿಜೆಪಿಗೆ ಬೆಂಬಲಿಸಲು ಜನ ಸಂಕಲ್ಪ ಮಾಡಿದ್ದಾರೆ. ದಕ್ಷಿಣದಲ್ಲಿ ಬಿಜೆಪಿಗೆ ಬೆಂಬಲ ಸಿಗುತ್ತಿದೆ ಎಂದು ಹೇಳಿದ್ದಾರೆ.