ಬಾಗಲಕೋಟೆ :  ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಹ್ವಾನ ನೀಡದೆ ಇರುವುದಕ್ಕೆ ಸಚಿವ ಜಮೀರ ಅಹ್ಮದಖಾನ್‌ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ನರೇಂದ್ರ ಮೋದಿ ಓರ್ವ ಹಿಟ್ಲರ್‌ ಎಂದು ಟೀಕಿಸಿದ್ದಾರೆ. 

ಬಾದಾಮಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಕೇವಲ ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ಯಾವ ರಾಜ್ಯದಲ್ಲೂ ಯಾವ ನಾಯಕರನ್ನು ಲೆಕ್ಕಕ್ಕೆ ಇಟ್ಟಿಲ್ಲ. ಇದನ್ನು ನೋಡಿದರೆ ಹಿಟ್ಲರ್‌ ವರ್ತನೆಯಂತೆ ಅನಿ​ಸು​ತ್ತದೆ ಎಂದಿದ್ದಾರೆ.

ಆಡಿಯೋ ವಿಷಯದಲ್ಲಿ ನಡೆದಿರುವ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ಆಡಿಯೋವನ್ನು ಎಫ್‌ಎಸ್‌ಎಲ್‌ ವರದಿಗೆ ಕಳುಹಿಸಿ ಕೊಡ​ಲಾ​ಗಿದೆ. ಎರಡು ದಿನದೊಳೆಗೆ ಸತ್ಯಾಸತ್ಯತೆ ಹೊರ ಬರಲಿದೆ. ಈ ವಿಷಯದಲ್ಲಿ ಯಡಿಯೂರಪ್ಪನವರ ಧ್ವನಿ ಸ್ಪಷ್ಟವಾಗಿದೆ ಎಂಬುದು ಸಿಎಂ ಕುಮಾರಸ್ವಾಮಿಗೆ ಗೊತ್ತಿದೆ ಎಂದರು.

ಮತ್ತೆ ಸಿಎಂ ಆಗ​ಬೇ​ಕೆ​ನ್ನುವ ಯಡಿಯೂರಪ್ಪನವರ ಕನಸು ಈಡೇ​ರದು. ಪ್ರತಿ ಕ್ಷಣವೂ ನಾನು ಸಿಎಂ ಆಗುವೇ ಎನ್ನುವ ಅವರ ಹೇಳಿಕೆಗೆ ಇದೀಗ ಬೆಲೆ ಇಲ್ಲ. ಕುಮಾರಸ್ವಾಮಿ ಅವರೇ ಐದು ವರ್ಷಗಳ ಕಾಲ ಮುಖ್ಯಮಂತ್ರಿಗಳಾಗಲಿ​ದ್ದಾರೆ. ಆರು ತಿಂಗಳಿನಿಂದಲೂ ಆಪರೇಶನ್‌ ಕಮಲ ಮಾಡುವ ಪ್ರಯತ್ನಕ್ಕೆ ಬೆಲೆಕೊಡಬೇಕಾಗಿಲ್ಲ ಎಂದರು.

ಕಾಂಗ್ರೆಸ್ಸಿನ ಅತೃಪ್ತ 4 ಶಾಸಕರನ್ನು ಅನರ್ಹಗೊಳಿಸಲು ಪಕ್ಷ ತೀರ್ಮಾನಿಸಿದ್ದು, ಸ್ಪೀಕರ್‌ ಗಮನಕ್ಕೆ ಈ ವಿಷಯ ತರಲಾಗುವುದು. ನಿಯಮದ ಪ್ರಕಾರ ಸ್ಪೀಕರ್‌ ಕ್ರಮಕೈಗೊಳ್ಳುತ್ತಾರೆ ಎಂದರು.