'ಎಣ್ಣೆ' ಪ್ರಿಯರಿಗೆ ಕಾದಿದೆ ಆಘಾತ: ಮದ್ಯದ ಬೆಲೆ ಶೀಘ್ರ ದುಬಾರಿ?
ಬಜೆಟ್‌ನಲ್ಲಿ ಘೋಷಿಸಿದ್ದಂತೆ ರಾಜ್ಯ ಸರ್ಕಾರ ಮದ್ಯದ ದರ ಪರಿಷ್ಕರಿಸಲು ಮುಂದಾಗಿದ್ದು, ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಶೀಘ್ರದಲ್ಲೇ ಅಸ್ತು ಎನ್ನುವ ಸಾಧ್ಯತೆ ಇದೆ.
ಬೆಂಗಳೂರು (ಜೂ.13): ಬಜೆಟ್‌ನಲ್ಲಿ ಘೋಷಿಸಿದ್ದಂತೆ ರಾಜ್ಯ ಸರ್ಕಾರ ಮದ್ಯದ ದರ ಪರಿಷ್ಕರಿಸಲು ಮುಂದಾಗಿದ್ದು, ಅಬಕಾರಿ ಇಲಾಖೆಯ ಪ್ರಸ್ತಾವನೆಗೆ ಶೀಘ್ರದಲ್ಲೇ ಅಸ್ತು ಎನ್ನುವ ಸಾಧ್ಯತೆ ಇದೆ. ಫೆ.16ರಂದು ರಾಜ್ಯ ಬಜೆಟ್ ಮಂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ನೆರೆ ರಾಜ್ಯಗಳ ಮದ್ಯದ ಬೆಲೆಗೆ ಅನುಗುಣವಾಗಿ ಐಎಂಎಲ್ ಹಾಗೂ ಬಿಯರ್‌ಗಳ ಬೆಲೆಗಳನ್ನು ಪರಿಷ್ಕರಿಸುವುದಾಗಿ ಘೋಷಿಸಿದ್ದರು. ಅದರಂತೆ ಅಬಕಾರಿ ಇಲಾಖೆಯು ಅಧ್ಯಯನ ನಡೆಸಿ ಬೆಲೆ ಹೆಚ್ಚಳದ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸಿತ್ತು.
ಆದರೆ ಲೋಕಸಭಾ ಚುನಾವಣೆಯಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಪ್ರಸ್ತಾಪವನ್ನು ಸರ್ಕಾರ ತಡೆ ಹಿಡಿದಿತ್ತು. ಇದೀಗ ಚುನಾವಣೆ ಪೂರ್ಣಗೊಂಡಿರುವುದರಿಂದ ಶೀಘ್ರದಲ್ಲೇ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಲಿದೆ. ಇದರಿಂದಾಗಿ ವಾರ್ಷಿಕವಾಗಿ ಬೊಕ್ಕಸಕ್ಕೆ 500 ಕೋಟಿ ರು. ಹೆಚ್ಚುವರಿ ಆದಾಯ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಕಾರ್ಮಿಕರ ಮದ್ಯದ ದರವೂ ಹೆಚ್ಚಳ: ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಮದ್ಯದ ಹಲವು ಸ್‌ಲ್ಯಾಬ್ ಗಳು, ಅದರಲ್ಲೂ ಕಾರ್ಮಿಕರು ಹೆಚ್ಚಾಗಿ ಸೇವಿಸುವ ಮದ್ಯಗಳ ಬೆಲೆ ಕಡಿಮೆ ಇದೆ. ಇಂತಹ ಮದ್ಯಗಳ ಬೆಲೆ ಇದೀಗ ನಮ್ಮಲ್ಲಿ 2 ರಿಂದ 5 ರು. ಹೆಚ್ಚಳವಾಗಲಿದೆ.
ಬಿಬಿಎಂಪಿ 5 ಭಾಗ ಮಾಡಲು ಸರ್ಕಾರದ ಸಿದ್ಧತೆ: ವರ್ಷಾಂತ್ಯದೊಳಗೆ ಚುನಾವಣೆ ಎಂದ ಡಿಕೆಶಿ
ನೆರೆಯ ರಾಜ್ಯಗಳಲ್ಲಿ ದುಬಾರಿ ಬೆಲೆಯ ಮದ್ಯಗಳ ಬೆಲೆ ಹೆಚ್ಚಾಗಿದ್ದು, ಇವುಗಳ ಬೆಲೆ ರಾಜ್ಯದಲ್ಲಿ ಸ್ವಲ್ಪ ಕಡಿಮೆಯಾಗುವ ಸಂಭವವಿದೆ. ಅಬಕಾರಿ ಇಲಾಖೆಯಲ್ಲಿ ಕಳೆದ ಸಾಲಿಗಿಂತ 2,525 ಕೋಟಿ ರು. ಅಧಿಕ ರಾಜಸ್ವ ಸಂಗ್ರಹಣೆ ಗುರಿಯನ್ನು ಹೊಂದಲಾಗಿದೆ' ಎಂದು ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಈ ಗುರಿಯು ಬಹುತೇಕ ಬೆಲೆ ಹೆಚ್ಚಳದಿಂದಲೇ ಸಂಗ್ರಹವಾಗುವ ಸಾಧ್ಯತೆ ಇದೆ.