ಬಿಬಿಎಂಪಿ 5 ಭಾಗ ಮಾಡಲು ಸರ್ಕಾರದ ಸಿದ್ಧತೆ: ವರ್ಷಾಂತ್ಯದೊಳಗೆ ಚುನಾವಣೆ ಎಂದ ಡಿಕೆಶಿ
ಬಿಬಿಎಂಪಿಯನ್ನು 5 ಭಾಗವಾಗಿ ವಿಂಗಡಣೆ ಮಾಡುವ ಪ್ರಕ್ರಿಯೆಯನ್ನೂ ನಡೆಸಿದ್ದು, ಅದಕ್ಕೆ ಸಂಬಂಧಿಸಿದಂತೆ ಈಗಿರುವ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತಂದು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.
ಬೆಂಗಳೂರು (ಜೂ.12): ಕಳೆದ ಮೂರೂವರೆ ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಸೊರಗಿರುವ ಬಿಬಿಎಂಪಿಗೆ ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಸುವುದಾಗಿ ಸರ್ಕಾರ ಹೇಳಿದೆ. ಅದರ ಜತೆಜತೆಗೆ ಬಿಬಿಎಂಪಿಯನ್ನು 5 ಭಾಗವಾಗಿ ವಿಂಗಡಣೆ ಮಾಡುವ ಪ್ರಕ್ರಿಯೆಯನ್ನೂ ನಡೆಸಿದ್ದು, ಅದಕ್ಕೆ ಸಂಬಂಧಿಸಿದಂತೆ ಈಗಿರುವ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತಂದು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.
2020ರ ಸೆಪ್ಟೆಂಬರ್‌ನಲ್ಲಿ ಕೊನೆಯಾಗಿದ್ದ ಬಿಬಿಎಂಪಿ ಜನಪ್ರತಿನಿಧಿಗಳ ಅವಧಿ, ಅದಾದ ನಂತರದಿಂದ ಅಧಿಕಾರಿಗಳದ್ದೇ ಆಡಳಿತವಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಬಿಬಿಎಂಪಿಯ 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸಲಾಗಿತ್ತು. ಜತೆಗೆ ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು. ಈ ಕಾರಣದಿಂದಾಗಿ ಮೂರು ವರ್ಷಗಳ ಕಾಲ ಚುನಾವಣೆ ಮುಂದೂಡಲಾಯಿತು. ಅದಾದ ನಂತರ ಕಾಂಗ್ರೆಸ್ ಸರ್ಕಾರ ಬಂದಾಗ 243 ವಾರ್ಡ್‌ಗಳನ್ನು 225ಕ್ಕೆ ಇಳಿಕೆ ಮಾಡಲಾಯಿತು.
ಆಸ್ತಿ ತೆರಿಗೆ ಬಾಕಿ ಒಟಿಎಸ್‌ಗೆ ಜು.31 ಕಡೇ ದಿನ: 50% ದಂಡ ರಿಯಾಯಿತಿ
ಆದರೆ, ಬಿಬಿಎಂಪಿ ಚುನಾವಣೆಯನ್ನು ಮಾತ್ರ ಮಾಡಲಿಲ್ಲ. ಇದೀಗ ಬಿಬಿಎಂಪಿ ಚುನಾವಣೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ಈ ವರ್ಷದ ಅಂತ್ಯದೊಳಗೆ ಚುನಾವಣೆ ಮಾಡಿಯೇ ಸಿದ್ಧ ಎಂದೂ ಸಚಿವರು ಹೇಳುತ್ತಿದ್ದಾರೆ. ಅದರ ನಡುವೆಯೇ, ಬಿಬಿಎಂಪಿ ಪುನಾರಚನೆಗೆ ರಚಿಸಲಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್.ಪಾಟೀಲ್ ನೇತೃತ್ವದ ತ್ರಿಸದಸ್ಯ ಸಮಿತಿಯಿಂದ ಬಿಬಿಎಂಪಿ ವಿಭಜನೆ ಕುರಿತಂತೆ ವರದಿ ಪಡೆಯಲೂ ಮುಂದಾಗಿದೆ.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಿಬಿಎಂಪಿ ವಿಂಗಡಣೆಗೆ ಸಂಬಂಧಿಸಿದಂತೆ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ರಚಿಸಿತ್ತು. ಆಗ ಸಮಿತಿಯು ಬಿಬಿಎಂಪಿಯನ್ನು 5 ವಿಭಾಗ ಮಾಡುವಂತೆ ವರದಿಯನ್ನೂ ನೀಡಿತ್ತು. ಅದಾದ ನಂತರ ಸರ್ಕಾರ ಬದಲಾದ ಕಾರಣ ವರದಿ ಜಾರಿಯಾಗಲಿಲ್ಲ. ಕಳೆದ ವರ್ಷ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಾಗ ಬಿ.ಎಸ್.ಪಾಟೀಲ್ ನೇತೃತ್ವದಲ್ಲಿ ಮತ್ತೆ ಸಮಿತಿ ರಚಿಸಿ, ಬಿಬಿಎಂಪಿ ಪುನಾರಚನೆಗೆ ವರದಿ ನೀಡುವಂತೆ ಸೂಚಿಸಲಾಗಿತ್ತು. ಈಗ ಆ ಸಮಿತಿಯು ಮತ್ತೊಂದು ವರದಿ ನೀಡಲು ಸಿದ್ಧವಾಗಿದ್ದು, ಶೀಘ್ರದಲ್ಲಿ ಅದನ್ನು ಪಡೆದು ಬಿಬಿಎಂಪಿ ವಿಂಗಡಣೆಗೆ ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.
ಮಳೆಗಾಲದ ಅಧಿವೇಶನದಲ್ಲಿ ಕಾಯ್ದೆ ಮಂಡನೆ: ಬಿಬಿಎಂಪಿ ವಿಭಜನೆಗೆ ಸಂಬಂಧಿಸಿದಂತೆ ಈಗಿರುವ ಬಿಬಿಎಂಪಿ ಕಾಯ್ದೆ 2020ಕ್ಕೆ ತಿದ್ದುಪಡಿ ತಂದು ಜುಲೈನಲ್ಲಿ ನಡೆಯಲಿರುವ ಮಳೆಗಾಲದ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಅಲ್ಲಿ ಒಪ್ಪಿಗೆ ಪಡೆದು, ನಂತರ ಅದನ್ನೇ ಮುಂದಿಟ್ಟುಕೊಂಡು ಬಿಬಿಎಂಪಿ ಚುನಾವಣೆ ಮುಂದೂಡಲು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ. ಒಂದು ವೇಳೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡದಿದ್ದರೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿಯೇ ಚುನಾವಣೆ ನಡೆಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಮದಕ್ಕೆ ಕರುಣೆ ಇಲ್ಲ.. ನಿನ್ನ ಕರ್ಮ ನಿನ್ನನ್ನು ಸುಡುತ್ತದೆ: ಪರೋಕ್ಷವಾಗಿ ದರ್ಶನ್‌ಗೆ ಪಂಚ್ ಕೊಟ್ಟ ಜಗ್ಗೇಶ್!
ಪಾಲಿಕೆ ಚುನಾವಣೆಗೆ ಸಿದ್ಧತೆ: ಡಿಸಿಎಂಈ ವರ್ಷದ ಅಂತ್ಯದೊಳಗೆ ಬಿಬಿಎಂಪಿ ಚುನಾವಣೆ ನಡೆಸುವ ಗುರಿ ಹೊಂದಿದ್ದು, ಅದಕ್ಕೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ಚುನಾವಣೆ ಮಾಡಲು ಮೀಸಲಾತಿ ನಿಗದಿ ಸೇರಿದಂತೆ ಇನ್ನಿತರ ಪ್ರಕ್ರಿಯೆ ನಡೆಸಲಾಗುತ್ತಿದೆ. ಆದಷ್ಟು ಶೀಘ್ರದಲ್ಲಿ ಚುನಾವಣೆ ಮಾಡುತ್ತೇವೆ. ಇನ್ನು ಬಿಬಿಎಂಪಿ ವಿಭಜನೆಯ ಪ್ರಸ್ತಾವನೆ ಹಿಂದಿನಿಂದಲೂ ಇದ್ದು, ಆ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಏನೇ ಇದ್ದರೂ ಆದಷ್ಟು ಬೇಗ ಚುನಾವಣೆ ಮಾಡುತ್ತೇವೆ. ಇಲ್ಲದಿದ್ದರೆ ಸುಪ್ರೀಂಕೋರ್ಟ್ ಬಿಡುವುದಿಲ್ಲ ಎಂದರು.