Asianet Suvarna News Asianet Suvarna News

ಬಿಬಿಎಂಪಿ ಜಂಟಿ ಆಯುಕ್ತರ ವರ್ಗಾವಣೆ ಮುಂದೂಡಲು ಒತ್ತಡ..?

ಕೆಲವು ಶಾಸಕರಿಂದ ಸರ್ಕಾರದ ಮೇಲೆ ಒತ್ತಡ ಹೇರಿಕೆ|ವರ್ಗಾವಣೆ ಮಾಡಿದರೆ ಕೊರೋನಾ ನಿಯಂತ್ರಣ ಕಷ್ಟಎಂಬ ವಾದ| ಹೈಕೋರ್ಟ್‌ ಸೂಚನೆ ನಡುವೆಯೂ ವರ್ಗ ಮಾಡದಂತೆ ಲಾಬಿ| ಶಾಸಕರ ಒತ್ತಡದಿಂದ ವರ್ಗಾವಣೆ ವಿಳಂಬ| 

Pressure to Postpone Transfer of BBMP Joint Commissioner
Author
Bengaluru, First Published Aug 28, 2020, 11:17 AM IST

ಬೆಂಗಳೂರು(ಆ.28): ಎರವಲು ಸೇವೆಯಡಿ ಬಿಬಿಎಂಪಿ ವಿವಿಧ ವಲಯಗಳಲ್ಲಿ ಜಂಟಿ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಕೆಲವು ಅಧಿಕಾರಿಗಳನ್ನು ಮಾತೃ ಇಲಾಖೆಗೆ ವರ್ಗಾಯಿಸಬೇಕೆಂಬ ಹೈಕೋರ್ಟ್‌ ಸೂಚನೆ ನಡುವೆಯೂ ನಗರದ ಕೆಲವು ಶಾಸಕರು ಈ ಅಧಿಕಾರಿಗಳ ವರ್ಗಾವಣೆ ಮುಂದೂಡುವಂತೆ ಸರ್ಕಾರದ ಮಟ್ಟದಲ್ಲಿ ಒತ್ತಡ ಹೇರುತ್ತಿದ್ದಾರೆ ಎಂದು ಹೇಳಲಾಗಿದೆ.

ಜಂಟಿ ಆಯುಕ್ತರನ್ನು ಈಗ ಮಾತೃ ಇಲಾಖೆಗೆ ವರ್ಗಾವಣೆ ಮಾಡಿದರೆ ವಲಯ ಮಟ್ಟದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಕಷ್ಟವಾಗುತ್ತದೆ. ಹೀಗಾಗಿ ಇನ್ನೂ ಕೆಲವು ತಿಂಗಳ ಮಟ್ಟಿಗೆ ವರ್ಗಾವಣೆ ಮುಂದೂಡುವಂತೆ ಶಾಸಕರು ಸರ್ಕಾರದ ಹಂತದಲ್ಲಿ ಒತ್ತಡ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

'ವದಂತಿಗಳಿಗೆ ಕಿವಿಕೊಡಬೇಡಿ, ಮಾಸ್ಕ್‌ ಧರಿಸುವುದು ಕಡ್ಡಾಯ'

ಎರವಲು ಸೇವೆಯಡಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಜಂಟಿ ಆಯುಕ್ತ ಮತ್ತು ಉಪ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಕೆಎಎಸ್‌ ಮಾಡದ ಅಧಿಕಾರಿಗಳನ್ನು ಮಾತೃ ಸಂಸ್ಥೆಗೆ ಹಿಂದಿರುಗಿಸಬೇಕು ಎಂದು ಬಿಬಿಎಂಪಿಯ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಹೈಕೋರ್ಟ್‌ ಮೊರೆ ಹೋಗಿತ್ತು. ವೃಂದ ಮತ್ತು ನೇಮಕಾತಿ ನಿಯಮಾವಳಿ -2020ರ ಅನುಸಾರ ಈ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕರೆಸಿಕೊಳ್ಳುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.
ವೃಂದ ಮತ್ತು ನೇಮಕಾತಿ ನಿಯಮಾವಳಿ -2020ರ ಅನ್ವಯ ಜಂಟಿ ಆಯುಕ್ತ ಹುದ್ದೆಗೆ ಶೇ.90ರಷ್ಟು ಕೆಎಎಸ್‌ ಮತ್ತು ಶೇ.10 ರಷ್ಟು ಕೆಎಂಎಎಸ್‌ ಅಧಿಕಾರಿಗಳ ನೇಮಕಕ್ಕೆ ಅವಕಾಶವಿದೆ. ಈ ನಿಯಮಾನುಸಾರ ಅರ್ಹತೆ ಇಲ್ಲದ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಾಸ್‌ ಕರೆಸಿಕೊಳ್ಳುವಂತೆ ಬಿಬಿಎಂಪಿ ಆಡಳಿತ ವಿಭಾಗವು ಸರ್ಕಾರಕ್ಕೆ ಪತ್ರ ಬರೆದಿದೆ. ಈ ನಡುವೆ ಹೈಕೋರ್ಟ್‌ ಗಡುವು ಮುಗಿಯುತ್ತಿರುವುದರ ನಡುವೆಯೂ ಶಾಸಕರು ಈ ಅಧಿಕಾರಿಗಳ ವರ್ಗಾವಣೆ ಮುಂದೂಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕುತ್ತಿದಾರೆ ಎನ್ನಲಾಗಿದೆ.

ಯಾರಿವರು ಅಧಿಕಾರಿಗಳು?:

ದಾಸರಹಳ್ಳಿ ವಲಯದ ಕೆ. ನರಸಿಂಹ ಮೂರ್ತಿ, ಪಶ್ಚಿಮ ವಲಯದ ಎನ್‌. ಚಿದಾನಂದ್‌, ದಕ್ಷಿಣ ವಲಯದ ವೀರಭದ್ರಸ್ವಾಮಿ ಹಾಗೂ ಬೊಮ್ಮನಹಳ್ಳಿಯ ಎಂ.ರಾಮಕೃಷ್ಣ ಜಂಟಿ ಆಯುಕ್ತರ ವರ್ಗಾವಣೆ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಆದರೆ, ಶಾಸಕರ ಒತ್ತಡದಿಂದ ವರ್ಗಾವಣೆ ವಿಳಂಬವಾಗುತ್ತಿದೆ. ಅಲ್ಲದೆ, ಪಾಲಿಕೆ ಆರೋಗ್ಯ ವಿಭಾಗದ ಜಂಟಿ ಆಯುಕ್ತ ಸರ್ಫರಾಜ್‌ ಖಾನ್‌, ಯಲಹಂಕ ವಲಯದ ಉಪ ಆಯುಕ್ತ ಎಸ್‌. ಜಿ. ರಾಜಶೇಖರ್‌, ರಾಜರಾಜೇಶ್ವರಿನಗರದ ಕೆ.ಶಿವೇಗೌಡ ಹಾಗೂ ಪೂರ್ವ ವಲಯದ ಎನ್‌.ರಾಜು ಅವರ ಹೆಸರುಗಳೂ ಸರ್ಕಾರದ ವರ್ಗಾವಣೆ ಪಟ್ಟಿಯಲ್ಲಿವೆ ಎಂದು ತಿಳಿದು ಬಂದಿದೆ.
 

Follow Us:
Download App:
  • android
  • ios