ಅನ್ನ ಬೇಕು ಅಂದ್ರೆ ಕನ್ನಡ ಕಲೀಬೇಕು ಎಂಬ ವಾತಾವರಣ ಉಂಟಾಗಬೇಕು: ಗೊ.ರು. ಚನ್ನಬಸಪ್ಪ
ಕನ್ನಡಪರ ಹೋರಾಟಗಾರರು ಇಲ್ಲದೇ ಹೋಗಿದ್ದರೆ ಕನ್ನಡ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿತ್ತು. ಆ ಕಾಲದಿಂದಲೂ ಕನ್ನಡ ಪರ ಹೋರಾಟಗಾರರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ದೂರದರ್ಶನದಲ್ಲಿ ಉರ್ದು ವಾರ್ತೆ ಪ್ರಸಾರ ಆರಂಭಿಸಿದಾಗ ತೀವ್ರ ಪ್ರತಿಭಟನೆ ಮಾಡಿದ್ದರು. ಪ್ರಾದೇಶಿಕ ಭಾಷೆಗೆ ಧಕ್ಕೆ ಬಂದಾಗ ಸ್ಥಳೀಯರು ಹೋರಾಟ ಮಾಡಲೇಬೇಕು. ಈಗಲೂ ನಾಡು ನುಡಿ ಹಿತರಕ್ಷಣೆಗೆ ಮುಂದೆ ಇರುತ್ತಾರೆ: ಗೊ.ರು. ಚನ್ನಬಸಪ್ಪ
ರಾಜೇಶ್ ಶೆಟ್ಟಿ
ಮಂಡ್ಯ(ಡಿ.20): 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಗೊ.ರು. ಚನ್ನಬಸಪ್ಪ ಅವರು ನಾಡು ನುಡಯ ಸಮಸ್ಯೆಯ, ಕೈಗೊಳ್ಳಬೇಕಾದ ಕ್ರಮಗಳು ಇತ್ಯಾದಿ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.
ಸಮ್ಮೇಳನಾಧ್ಯಕ್ಷರ ಭಾಷಣದಲ್ಲಿ ಏನೇನು ಪ್ರಸ್ತಾಪ ಮಾಡುತ್ತಿದ್ದೀರಿ?
ನೆಲ ಜಲ, ಕನ್ನಡ ಮಾಧ್ಯಮ, ವಲಸೆ ಸಮಸ್ಯೆಗಳ ಕುರಿತು ಪ್ರಸ್ತಾಪ ಮಾಡುತ್ತಿದ್ದೇನೆ. ಉದ್ಯೋಗ ಮೀಸಲಾತಿ ಕುರಿತು ಧ್ವನಿ ಎತ್ತಿದ್ದೇನೆ. ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳನ್ನು ಪಟ್ಟಿ ಮಾಡಿದ್ದೇನೆ.
ಸಾಹಿತ್ಯ ಸಮ್ಮೇಳನದ ಉದ್ದೇಶ ಸಾಕಾರವಾಗುತ್ತಿದೆಯೇ?
ಆಗಿನಿಂದ ಈಗಿನವರೆಗೆ ಸಾಹಿತ್ಯ ಸಮ್ಮೇಳಮನದ ಉದ್ದೇಶದಲ್ಲಿ ಬದಲಾವಣೆ ಆಗಿಲ್ಲ. ಕಾರ್ಯನಿರ್ವಹಣೆಯಲ್ಲಿಯೂ ಬದಲಾವಣೆ ಆಗಿಲ್ಲ. ಸಾಹಿತಿಗಳು, ವಿದ್ವಾಂಸರು ಒಂದೆಡೆ ಸೇರುವ ಹಬ್ಬ ಇದು. ಬೇರೆ ಬೇರೆ ಭಾಗದ ಸಾಹಿತಿಗಳು, ಸಾಹಿತ್ಯಾಸಕ್ತರು ಒಂದೆಡೆ ಸೇರುವ ವೇದಿಕೆ. ವಿಚಾರ ವಿನಿಮಯಲ್ಲ, ಕನ್ನಡ ನಾಡು ನುಡಿಗೆ ಸಂಬಂಧಿಸಿದ ವಿಚಾರಗಳ ಗಂಭೀರ ಚರ್ಚೆಗೆ ಮಹತ್ವದ ವೇದಿಕೆ. ಇದರಲ್ಲಿ ಭಾಗವಹಿಸುವ ಜನರಿಗೆ ಈ ವಿಚಾರಗಳ ಕುರಿತು ಅರಿವು ಉಂಟಾದರೆ ಉದ್ದೇಶ ನೆರವೇರುತ್ತದೆ.
ಇಂದಿನಿಂದ ಮಂಡ್ಯದಲ್ಲಿ ಅಕ್ಷರ ಜಾತ್ರೆ: 30 ವರ್ಷಗಳ ಬಳಿಕ ನುಡಿ ಜಾತ್ರೆಯ ಆತಿಥ್ಯ ಉಣಬಡಿಸಲು ಸಜ್ಜಾದ ಸಕ್ಕರೆ ನಗರಿ!
ಈ ಕಾಲಕ್ಕೆ ಸಾಹಿತ್ಯ ಸಮ್ಮೇಳನ ಎಷ್ಟು ಪ್ರಸ್ತುತ?
ಈ ಕಾಲಕ್ಕೆ ಅಂತಲ್ಲ, ಎಲ್ಲಾ ಕಾಲಕ್ಕೂ ಪ್ರಸ್ತುತ. ಈಗ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಚಾರಗಳಲ್ಲಿ ಪ್ರಸರಿಸಲು ಸಾಧ್ಯವಿದೆ. ವಿಚಾರಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಿದೆ. ಅದಕ್ಕಿಂತ ಹೆಚ್ಚಾಗಿ ಸಮ್ಮೇಳನ ಒಂದು ಅನುಭವ. ಭಾವನಾತ್ಮಕವಾಗಿ ಹತ್ತಿರವಾಗುವ ಅವಕಾಶ.
ಕಾಲಕ್ಕೆ ತಕ್ಕಂತೆ ಸಮ್ಮೇಳನ ಎಷ್ಟು ಬದಲಾಗಬೇಕು?
ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕಾದದ್ದು ನಿಯಮ. ಈ ಕುರಿತು ಪರಿಷತ್ ಚಿಂತನ ಮಂಥನ, ನಿರ್ಧಾರ ಮಾಡಬೇಕು. ತಜ್ಞರನ್ನು ಒಟ್ಟುಗೂಡಿಸಿ ಚರ್ಚೆ ನಡೆಸಿ ಈ ಕಾಲಕ್ಕೆ ತಕ್ಕ ಬದಲಾವಣೆಯನ್ನು ಮಾಡಿಕೊಳ್ಳಬೇಕು.
ಅದದೇ ಗೋಷ್ಠಿಗಳು ನಡೆಯುತ್ತವೆ ಎಂಬ ಮಾತಿನ ಕುರಿತು ನಿಮಗೆ ಏನನ್ನಿಸುತ್ತದೆ?
ಮೊದಲು ಪ್ರಾಚೀನ ಕವಿ ಕಾವ್ಯ ಚಿಂತನೆ ಮುಂತಾದ ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದ್ದವು. ಈಗ ಮಹಿಳಾ ಸಮಾನತೆ ಇತ್ಯಾದಿ ಚರ್ಚೆ ನಡೆಯುತ್ತವೆ. ಇನ್ನು ಎಲ್ಲಾ ಕಾಲಕ್ಕೂ ಚರ್ಚೆ ನಡೆಸುವ ಅವಶ್ಯಕತೆ ಇರುವ ಕೆಲವು ವಿಚಾರಗಳಿವೆ. ಅದನ್ನು ಮತ್ತೆ ಮತ್ತೆ ಚರ್ಚೆ ಮಾಡಬೇಕಾಗುತ್ತದೆ. ಉದಾಹರಣೆಗೆ ಸರೋಜಿನಿ ಮಹಿಷಿ ವರದಿ ಇನ್ನೂ ಜಾರಿಗೆ ಬಂದಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಒತ್ತಾಯಿಸಲು ಏನಾದರೂ ಮಾಡಲೇಬೇಕಲ್ಲವೇ. ಎಲ್ಲಿಯವರೆಗೂ ಸಮಸ್ಯೆ ಇರುತ್ತದೋ ಅಲ್ಲಿಯವರೆಗೆ ಆ ಕುರಿತ ಚರ್ಚೆಯೂ ಇರುತ್ತದೆ.
ನಿರ್ಣಯಗಳು ಜಾರಿಗೆ ಬರುವುದಿಲ್ಲ, ಆ ಕುರಿತು ಏನು ಕ್ರಮ ಕೈಗೊಳ್ಳಬಹುದು?
ಕೆಲವು ನಿರ್ಣಯಗಳು ಜಾರಿಗೆ ಬಂದರೂ ಬಹುತೇಕ ನಿರ್ಣಯಗಳು ಜಾರಿಗೆ ಬರುವುದಿಲ್ಲ. ನಾನು ಸಾಹಿತ್ಯ ಪರಿಷತ್ ಅಧ್ಯಕ್ಷನಾಗಿದ್ದಾಗ ಸಾಹಿತ್ಯ ಸಮ್ಮೇಳನದ ನಿರ್ಣಯ ಅನುಷ್ಠಾನಕ್ಕೆ ಅಂತಲೇ ಒಂದು ಸಮಿತಿ ಮಾಡಿದ್ದೆ. ಆ ಸಮಿತಿ ನಿರ್ಣಯಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಬೇಕಿತ್ತು. ಸರ್ಕಾರಕ್ಕೆ ಪದೇ ಪದೇ ನೆನಪಿಸುವ ಕೆಲಸ ಮಾಡಬೇಕು. ನನ್ನ ಅವಧಿಯ ಬಳಿಕ ಆ ಸಮಿತಿ ಏನಾಯಿತೋ ತಿಳಿದಿಲ್ಲ. ಸರ್ಕಾರ ಕೂಡ ಪರಿಷತ್ತಿನ ಧ್ವನಿಯನ್ನು ಉದಾಸೀನ ಮಾಡಬಾರದು. ಹಗುರವಾಗಿ ಕಾಣಬಾರದು.
ಕನ್ನಡ ಅನೇಕ ಸವಾಲುಗಳನ್ನು ಎದುರಿಸುತ್ತಿವೆ, ಏನು ಪರಿಹಾರ?
ಕನ್ನಡ ಒಂದು ಭಾಷೆಯಾಗಿ ಗಟ್ಟಿಯಾಗಿದೆ. ಆದರೆ ಬಳಕೆ ಕಡಿಮೆಯಾಗಿದೆ. ಅನ್ಯ ಭಾಷೆಗಳ ಪ್ರಭಾವ ಜೋರಾಗಿದೆ. ಕನ್ನಡ ಕಲಬೆರಕೆ ಆಗುತ್ತಿದೆ. ಕನ್ನಡವನ್ನು ಶುದ್ಧರೂಪದಲ್ಲಿ ಉಳಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನ ಜಾಗೃತಿ ಆಗಬೇಕಿದೆ. ಈಗಾಗಲೇ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಹೆಜ್ಜೆ ಇಟ್ಟಿದೆ. ಇಲ್ಲಿ ಬಂದು ನೆಲೆಸುವ ಅನ್ಯ ಭಾಷಿಕರಿಗೆ ಕನ್ನಡ ಅನಿವಾರ್ಯವಾಗಬೇಕು. ಅವರಿಗೆ ಪರೀಕ್ಷೆ ಥರ ಏನಾದರೂ ವ್ಯವಸ್ಥೆ ಮಾಡಬೇಕು.
ಕನ್ನಡ ನೆಲದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯನ್ನಾಗಿ ಹೇಗೆ ಮಾಡಬಹುದು?
ಎಲ್ಲರೂ ಕನ್ನಡದಲ್ಲಿಯೇ ಮಾತನಾಡುವ ಕೆಲಸ ಆಗಬೇಕು. ಶಾಲಾ ಅಧ್ಯಾಪಕರು, ಪೋಷಕರು, ಅಕಾಡೆಮಿಗಳು, ವಿಶ್ವವಿದ್ಯಾನಿಲಯಗಳ ಕನ್ನಡ ವಿಭಾಗಗಳು ಅಲ್ಲಲ್ಲಿ ಕನ್ನಡ ಶಿಬಿರಗಳನ್ನು ಆಯೋಜಿಸಿ ಕನ್ನಡದ ಕುರಿತು ಆಸಕ್ತಿ ಹುಟ್ಟಿಸಬೇಕು. ಅನ್ನ ಬೇಕು ಅಂದ್ರೆ ಕನ್ನಡ ಕಲೀಬೇಕು ಅನ್ನೋ ಥರ ಆಗಬೇಕು.
ಹಿಂದಿ ಹೇರಿಕೆ ವಿರೋಧ ಮಾತು ಜೋರಾಗಿದೆ, ನಿಮ್ಮ ಅಭಿಪ್ರಾಯವೇನು?
ಹಿಂದಿ, ತಮಿಳು, ತೆಲುಗೆ ಹೀಗೆ ಎಲ್ಲಾ ಭಾಗಗಳ ವಲಸಿಗರು ಇಲ್ಲಿ ಬಂದಿದ್ದಾರೆ. ಕೇಂದ್ರ ಸರ್ಕಾರ ಅಧ್ಯಯನ ನಡೆಸಿ ವಲಸಿಗರಿಗಾಗಿಯೇ ಒಂದು ನೀತಿ ರೂಪಿಸಬೇಕು. ಇಲ್ಲದಿದ್ದರೆ ಭಾಷೆ, ವ್ಯವಹಾರ ವಿಚಾರದಲ್ಲಿ ಘರ್ಷಣೆ ಉಂಟಾಗುತ್ತದೆ. ಇಲ್ಲಿಗೆ ಬರುವವರು ಸ್ಥಳೀಯರೇ ಆಗಿಬಿಡಬೇಕು. ಯಾವುದೇ ಭಾಷೆಯನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ಯಾವ ಅಡ್ಡಿಯೂ ಇಲ್ಲ. ಆದರೆ ಒಂದು ಭಾಷೆಯ ಮೇಲೆ ಇನ್ನೊಂದು ಭಾಷೆ ಹೇರುವುದು ಸಂವಿಧಾನ ವಿರೋಧಿ. ಹಾಗಾಗಕೂಡದು. ಅಲ್ಲದೇ ನಮ್ಮಲ್ಲಿ ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿಯೇ ಕೊಡಬೇಕು. ಮಕ್ಕಳು ಚಿಕ್ಕಂದಿನಲ್ಲಿ ಕನ್ನಡವನ್ನೇ ಕಲಿಯಬೇಕು. ಅವರು ಮತ್ತೊಂದು ಭಾಷೆಯನ್ನು ತುರುಕಬಾರದು.
ಸದ್ಯದ ಜಗತ್ತಲ್ಲಿ ಎಡ-ಬಲ ಚರ್ಚೆಗಳೇ ಜೋರಾಗಿವೆ, ಇದಕ್ಕೆ ಏನಂತೀರಿ?ಸಾಹಿತ್ಯಕ್ಕೆ ಎಡ ಬಲ ಇಲ್ಲ. ವೈಚಾರಿಕತೆಗೆ ಇದೆ. ಒಂದು ಅಭಿಪ್ರಾಯಕ್ಕೆ ವಿರೋಧ ಅಭಿಪ್ರಾಯ ಇದ್ದೇ ಇರುತ್ತದೆ. ಆದರೆ ಆ ಅಭಿಪ್ರಾಯ ಜನ ಹಿತದಿಂದ ಉಂಟಾಗಿರಬೇಕು. ವ್ಯಕ್ತಿ ಪ್ರಜ್ಞೆ ಸಂಘರ್ಷಕ್ಕೆ ಕಾರಣವಾಗುತ್ತದೆ. ಸಮಷ್ಟಿ ಪ್ರಜ್ಞೆ ಇರುವುದು ಒಳ್ಳೆಯದು. ಸಮಷ್ಟು ಪ್ರಜ್ಞೆಯಿಂದ ಮೂಡಿದ ಅಭಿಪ್ರಾಯಗಳು ಮಾನವ ಕ್ಷೇಮದ ಉದ್ದೇಶದಿಂದ ಬಂದಿರುತ್ತವೆ. ಹಾಗಾಗಿ ಸಿದ್ಧಾಂತದ ವಿಚಾರದಲ್ಲಿ ಸಮಷ್ಟಿ ಪ್ರಜ್ಞೆಯಿಂದ ಅಭಿಪ್ರಾಯ ಮಂಡಿಸಬೇಕು.
ಸಾಹಿತ್ಯ ಪರಿಷತ್ತು ಕಟ್ಟಿ ಬೆಳೆಸಿದವರು ನೀವು, ಈಗ ಪರಿಷತ್ತು ಹೇಗಿದೆ ಅಂತ ಅನ್ನಿಸುತ್ತಿದೆ?
ಅದರ ಕೆಲಸ ಅದು ಮಾಡುತ್ತಿದೆ. ಸ್ವಲ್ಪ ಹಾದಿ ತಪ್ಪಿದರೆ ಜನರೇ ಎಚ್ಚರಗೊಂಡು ದಾರಿ ತೋರಿಸುತ್ತಾರೆ. ಕೆಲವೊಮ್ಮೆ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಬರುತ್ತದೆ. ಎಲ್ಲಾ ಸಮಯದಲ್ಲಿ ಹಾಗೆ ಆಗುವುದಿಲ್ಲ. ನಾನು ಇತ್ತೀಚೆಗೆ ಅಷ್ಟಾಗಿ ಪರಿಷತ್ತಿನ ಆಗುಹೋಗುಗಳನ್ನು ಗಮನಿಸಿಲ್ಲ.
ಹೊಸ ತಲೆಮಾರಿನ ಬರಹಗಾರರನ್ನು ಒಳಗೊಳ್ಳುವ ಪ್ರಯತ್ನವನ್ನು ಪರಿಷತ್ತು ಯಾಕೆ ಮಾಡುತ್ತಿಲ್ಲ?
ಮಾಡಬೇಕು. ಅವರನ್ನು ಕರೆಯಬೇಕು. ಅವರ ವಿಚಾರ ಮಂಡನೆಗೆ ಅವಕಾಶ ಕೊಡಬೇಕು. ನಾನು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಆಗಿದ್ದಾಗ ಕೆಲವು ಸಾಹಿತಿಗಳು ಸಾಹಿತ್ಯ ಸಮ್ಮೇಳನ ಬಹಿಷ್ಕಾರ ಮಾಡಿ ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಲು ಸಿದ್ಧರಾಗಿದ್ದರು. ಆಗ ನಾವು ಅವರ ಮನ ಒಲಿಸಿ ಪರಿಷತ್ತಿನಲ್ಲಿಯೇ ಬಂಡಾಯ ಸಮ್ಮೇಳನ ಮಾಡುವಂತೆ ಕೇಳಿಕೊಂಡಿದ್ದೆವು. ಅವರು ಒಪ್ಪಿದ್ದರು. ಬರಗೂರು, ಚಂಪಾ ಎಲ್ಲಾ ಬಂದಿದ್ದರು. ಎಲ್ಲವೂ ಕಾರ್ಯನಿರ್ವಹಣೆಯ ಮೇಲೆ ನಿಂತಿದೆ. ನಾವು ಯಾರನ್ನೂ ದ್ವೇಷ ಮಾಡಬಾರದು. ಎಲ್ಲರನ್ನೂ ಒಳಗೊಳ್ಳಬೇಕು.
ಜನಪದ ಸಾಹಿತ್ಯ ಕ್ಷೇತ್ರವನ್ನು ಸಕ್ರಿಯ ಮಾಡಲು ಸಾಧ್ಯವೇ?
ಜನಪದ ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಕೆಲಸ ಆಗಬೇಕಿದೆ. ಆದರೆ ಆ ನಿಟ್ಟಿನಲ್ಲಿ ಅಧ್ಯಯನ ನಡೆದಿಲ್ಲ. ನಮ್ಮ ಶಿಷ್ಟ ಸಾಹಿತಿಗಳು ಜನಪದ ಸಾಹಿತ್ಯವನ್ನು ದೂರವೇ ಇಟ್ಟಿದ್ದಾರೆ. ಜನಪದ ಸಾಹಿತಿಗಳಿಗೆ ಅಜ್ಞಾನಿಗಳು, ಮೂಢನಂಬಿಕೆಯವರು ಎಂದೆಲ್ಲಾ ಪಟ್ಟ ಕಟ್ಟಿದ್ದಾರೆ. ಆದರೆ ಅವರ ಜೀವನಾನುಭವ ಬಹಳ ದೊಡ್ಡದು. ಅವರ ಅನುಭವವನ್ನು ತಳ್ಳಿ ಹಾಕಲಾಗದು. ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತದೆ. ಜನಪದದಲ್ಲಿರುವ ವಸ್ತುಗಳನ್ನು ಉಳಿಸುವುದು ಸಾಧ್ಯವಿಲ್ಲ. ಆದರೆ ಜನಪದದ ಮೌಲ್ಯವನ್ನು ಉಳಿಸಿ ಬೆಳೆಸಬೇಕು. ಆ ಕಾಲದ ಯಂತ್ರಗಳು ಕಣ್ಮರೆಯಾಗಬಹುದು. ಆದರೆ ಮೌಲ್ಯಗಳು ಹಾಗೇ ಉಳಿಯಬೇಕು.
ಓದು ಬರಹ ಹೇಗಿದೆ?
ಈಗ ಓದು ಬರಹ ಕಡಿಮೆಯಾಗಿದೆ. ಆದರೆ ಇತ್ತೀಚೆಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪುತ್ರಿ ಉಪಿಂದರ್ ಸಿಂಗ್ ರಚನೆಯ ‘ಪೊಲಿಟಿಕಲ್ ವೈಲೆನ್ಸ್ ಇನ್ ಏನ್ಷೆಂಟ್ ಇಂಡಿಯಾ’ ಎಂಬ ಕೃತಿಯನ್ನು ಓದಿ ಇಷ್ಟಪಟ್ಟು ಅನುವಾದ ಮಾಡಿದ್ದೇನೆ. ಅದು ‘ಪ್ರಾಚೀನ ಭಾರತದಲ್ಲಿ ರಾಜಕೀಯ ಹಿಂಸಾಚಾರ’ ಎಂಬ ಶೀರ್ಷಿಕೆಯಲ್ಲಿ ಸಾಹಿತ್ಯ ಸಮ್ಮೇಳನದಲ್ಲಿಯೇ ಬಿಡುಗಡೆಗೊಳ್ಳಲಿದೆ. ಸಾಹಿತ್ಯ ಪರಿಷತ್ತು ಈ ಕೃತಿಯನ್ನು ಪ್ರಕಟ ಮಾಡಿದೆ.
ತಾರುಣ್ಯದ ಮಂದಿಗೆ ನಿಮ್ಮ ಸಲಹೆಗಳೇನು?
ಈಗ ಬದುಕಿನ ರೀತಿ ಬದಲಾಗಿದೆ. ಅನುಕರಣೆ ಸಂಸ್ಕೃತಿ ಆಳುತ್ತಿದೆ. ನಮ್ಮ ತಾರುಣ್ಯದ ಮಂದಿ ಕನ್ನಡ ಭಾಷೆ, ಸಂಸ್ಕೃತಿಯನ್ನು ಅರಿಯಬೇಕು. ಸ್ವಂತಿಕೆ ಹೊಂದಬೇಕು. ಸ್ವಂತಿಕೆಯಿಂದ ಅಸ್ಮಿತೆ ದೊರೆಯುತ್ತದೆ.
ಕನ್ನಡಪರ ಹೋರಾಟಗಾರರ ಕುರಿತು ಯಾವ ಅಭಿಪ್ರಾಯ ಹೊಂದಿದ್ದೀರಿ?
87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಲವು ಹೊಸತನಗಳು: ಸಚಿವ ಚಲುವರಾಯಸ್ವಾಮಿ
ಕನ್ನಡಪರ ಹೋರಾಟಗಾರರು ಇಲ್ಲದೇ ಹೋಗಿದ್ದರೆ ಕನ್ನಡ ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿತ್ತು. ಆ ಕಾಲದಿಂದಲೂ ಕನ್ನಡ ಪರ ಹೋರಾಟಗಾರರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ದೂರದರ್ಶನದಲ್ಲಿ ಉರ್ದು ವಾರ್ತೆ ಪ್ರಸಾರ ಆರಂಭಿಸಿದಾಗ ತೀವ್ರ ಪ್ರತಿಭಟನೆ ಮಾಡಿದ್ದರು. ಪ್ರಾದೇಶಿಕ ಭಾಷೆಗೆ ಧಕ್ಕೆ ಬಂದಾಗ ಸ್ಥಳೀಯರು ಹೋರಾಟ ಮಾಡಲೇಬೇಕು. ಈಗಲೂ ನಾಡು ನುಡಿ ಹಿತರಕ್ಷಣೆಗೆ ಮುಂದೆ ಇರುತ್ತಾರೆ. ಕೆಲವೊಮ್ಮೆ ತಪ್ಪಿ ತಪ್ಪುಹೆಜ್ಜೆ ಆಗಿರಬಹುದು. ಆಥರ ಆಗದಂತೆ ತಿಳಿವಳಿಕೆ ಹೇಳಬೇಕು. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಉಂಟಾಗಬಾರದಷ್ಟೇ. ಉಳಿದಂತೆ ಅವರು ಸಮಷ್ಟಿಗಾಗಿ ಹೋರಾಡುತ್ತಿದ್ದಾರೆ. ಬಹಳಷ್ಟು ಮಂದಿಯ ಮೇಲೆ ಮೊಕದ್ದಮೆಗಳು ಕೂಡ ಬಿದ್ದಿವೆ. ಆ ಮೊಕದ್ದಮೆಗಳು ಇನ್ನೂ ಇದ್ದರೆ ಅದನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಪ್ರಾರ್ಥನೆ ಮಾಡುತ್ತೇನೆ.
ಈ ಸಲದ ಸಮ್ಮೇಳನದಲ್ಲಿ ಬಾಡೂಟ ಒದಗಿಸಬೇಕು ಎಂಬ ವಾದ ಕೇಳಿಬಂತು..
ನೀವೊಂದು ಮನೆಗೆ ಅತಿಥಿಗಳಾಗಿ ಹೋಗುತ್ತೀರಿ. ಆಗ ಅಲ್ಲಿ ಅವರು ಒದಗಿಸಿದ ಊಟ ಮಾಡುತ್ತೀರಿ. ಇಂಥದ್ದೇ ಊಟ ಬೇಕು ಎಂದು ಕೇಳುವುದಿಲ್ಲ. ಸ್ವಾಗತ ಸಮಿತಿ ಆಹಾರ ವ್ಯವಸ್ಥೆ ಮಾಡುತ್ತದೆ. ಅದಕ್ಕೆ ವಿರೋಧ ಮಾಡಬಾರದು. ಆಹಾರ ಸಂಪೂರ್ಣ ವೈಯಕ್ತಿಕ ವಿಚಾರ. ಅದರಲ್ಲಿ ವಿವಾದ ಸಲ್ಲದು. 1994ರಲ್ಲಿ ಮಂಡ್ಯ ಸಾಹಿತ್ಯ ಸಮ್ಮೇಳನ ಜರುಗಿದಾಗ ನಾನು ಪರಿಷತ್ತು ಅಧ್ಯಕ್ಷನಾಗಿದ್ದೆ. ಮಂಡ್ಯದ ಮಂದಿ ತುಂಬಾ ಚೆನ್ನಾಗಿ ನಡೆಸಿಕೊಟ್ಟಿದ್ದರು. ಈಗಲೂ ಅಷ್ಟೇ, ಮಂಡ್ಯದ ಗೆಳೆಯರು ಗೌರವಕ್ಕೆ ಧಕ್ಕೆ ಬಾರದಂತೆ ಕಾರ್ಯಕ್ರಮ ನಡೆಯುವಂತೆ ನೋಡಿಕೊಳ್ಳುತ್ತಾರೆ ಎಂಬ ಭರವಸೆ ನನಗಿದೆ. ನಾನು ಅವರಲ್ಲಿ ಸಹಕರಿಸಬೇಕು ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ.