ರಾಷ್ಟ್ರಪತಿ ಚುನಾವಣೆಯ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಈ ತಿಂಗಳ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಯಿದ್ದು, ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯ ಮತದಾರರೂ ಆಗಿರುವ ಶಾಸಕರನ್ನು ಉದ್ದೇಶಿಸಿ ಮತ ಯಾಚಿಸಲಿದ್ದಾರೆ.

ಬೆಂಗಳೂರು (ಜು.06): ರಾಷ್ಟ್ರಪತಿ ಚುನಾವಣೆಯ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು ಅವರು ಈ ತಿಂಗಳ 10ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಅಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯುವ ಸಾಧ್ಯತೆಯಿದ್ದು, ಮುರ್ಮು ಅವರು ರಾಷ್ಟ್ರಪತಿ ಚುನಾವಣೆಯ ಮತದಾರರೂ ಆಗಿರುವ ಶಾಸಕರನ್ನು ಉದ್ದೇಶಿಸಿ ಮತ ಯಾಚಿಸಲಿದ್ದಾರೆ. ಜತೆಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರನ್ನೂ ಭೇಟಿ ಮಾಡುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ದ್ರೌಪದಿ ಮುರ್ಮು ಅವರು ಸರಳತೆಯನ್ನು ಮೈಗೂಡಿಸಿಕೊಂಡವರು. ಬುಡಕಟ್ಟು ಜನಾಂಗಕ್ಕೆ ಸೇರಿದ ಅವರು, ಎರಡು ದಶಕಕ್ಕೂ ಹೆಚ್ಚು ಕಾಲ ರಾಜಕೀಯ ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿ ಮೇಲೇರುತ್ತಲೇ ಬಂದಿದ್ದಾರೆ. ಶಿಕ್ಷಣದ ನಂತರ ಒಡಿಶಾ ಸರಕಾರದ ನೀರಾವರಿ ಇಲಾಖೆಯಲ್ಲಿ ನೌಕರಿ, ಆನಂತರ ಶಿಕ್ಷಕಿ ಹುದ್ದೆ ನಿರ್ವಹಿಸಿದ ಅನುಭವ ಅವರಿಗಿದೆ. ಇದರ ಮಧ್ಯೆಯೇ 1997ರಲ್ಲಿ ಅವರು ಒಡಿಶಾದ ರಾಯ್ರಂಗಪುರ ನಗರಾಡಳಿತ ಸಂಸ್ಥೆಯ ಸದಸ್ಯರಾಗಿ ಚುನಾಯಿತರಾದರು. ಅದೇ ವರ್ಷ ನಗರಾಡಳಿತ ಸಂಸ್ಥೆಯ ಉಪಾಧ್ಯಕ್ಷೆಯಾಗಿದ್ದರು.

ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ರೈತ, ಒಟ್ಟು 56 ಅಭ್ಯರ್ಥಿಗಳ ಸ್ಪರ್ಧೆ!

ಒಡಿಶಾ ರಾಜ್ಯ ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ರಾಯ್ರಂಗಪುರ ಕ್ಷೇತ್ರದಿಂದ ಕಣಕ್ಕೆ ಇಳಿದು ಆರಿಸಿ ಬಂದರು. ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ದ್ರೌಪದಿ ಸಚಿವೆಯೂ ಆಗಿದ್ದರು. 2007ರಲ್ಲಿ ಅತ್ಯುತ್ತಮ ಶಾಶಕಿ ಪ್ರಶಸ್ತಿಯೂ ಅವರಿಗೆ ಲಭಿಸಿತ್ತು. 2009ರಿಂದ ಅವರು ಬಿಜೆಪಿಯ ರಾಜ್ಯ ಪರಿಶಿಷ್ಟ ಪಂಗಡ ಮೋರ್ಚಾದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು ಎಂದು ತಿಳಿಸಿದ್ದಾರೆ.

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾದ ಪ್ರಧಾನಿ ಮೋದಿ!

2013ರಲ್ಲಿ ಬಿಜೆಪಿಯ ಪರಿಶಿಷ್ಟ ಪಂಗಡ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದರು. ನಂತರ 2015ರಲ್ಲಿ ಜಾರ್ಖಂಡ್ ರಾಜ್ಯಪಾಲೆಯಾಗಿ ಅವರನ್ನು ಆಯ್ಕೆ ಮಾಡಲಾಯಿತು. ಅಲ್ಲಿನ ಮೊದಲ ಮಹಿಳಾ ರಾಜ್ಯಪಾಲರು ಎಂಬ ಹೆಗ್ಗಳಿಕೆ, ರಾಜ್ಯಪಾಲರ ಹುದ್ದೆಗೆ ಏರಿದ ಒಡಿಶಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜಾರ್ಖಂಡ್‌ನ ರಾಜ್ಯಪಾಲರಾಗಿ ಪೂರ್ಣಾವಧಿಯನ್ನು ಪೂರೈಸಿದ ಮೊದಲಿಗರು ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ ಎಂದು ತಿಳಿಸಿದ್ದಾರೆ.