14 ಲಕ್ಷ ಲಸಿಕೆ 2 ದಿನದಲ್ಲಿ ವಿಮಾನದಲ್ಲಿ ರಾಜ್ಯಕ್ಕೆ ಆಗಮನ ನಿರೀಕ್ಷೆ | ಬಳಿಕ ಹಂತಹಂತವಾಗಿ ಜಿಲ್ಲೆ, ತಾಲೂಕುಗಳಿಗೆ ಸಾಗಿಸಲು ವ್ಯವಸ್ಥೆ
ಬೆಂಗಳೂರು(ಜ.09): ರಾಜ್ಯಕ್ಕೆ ಮುಂದಿನ ಎರಡು-ಮೂರು ದಿನಗಳಲ್ಲಿ 13.90 ಲಕ್ಷ ಕೊರೋನಾ ಲಸಿಕೆ ಡೋಸೆಜ್ (ಬಾಟಲ್) ಬರಲಿದೆ. ಇವುಗಳ ದಾಸ್ತಾನು ಹಾಗೂ ಲಸಿಕೆ ವಿತರಣಾ ಕೇಂದ್ರಗಳಿಗೆ ಸಾಗಣೆ ಮಾಡುವುದು ಸೇರಿದಂತೆ ಎಲ್ಲಾ ರೀತಿಯಲ್ಲೂ ಆರೋಗ್ಯ ಇಲಾಖೆ ಸಿದ್ಧತೆ ನಡೆಸಿದೆ.
ಮೊದಲ ಹಂತದಲ್ಲಿ ಬರಲಿರುವ ಲಸಿಕೆ ದಾಸ್ತಾನು ಮಾಡಲು ರಾಜ್ಯದ ಬಳಿ ಒಟ್ಟು 2855 ಕೋಲ್ಡ್ ಚೈನ್ ಪಾಯಿಂಟ್‌ಗಳಿವೆ. ಇವುಗಳ ಮೂಲಕ 29,451 ಲಸಿಕಾ ಕೇಂದ್ರಗಳಿಗೆ ಲಸಿಕೆ ರವಾನೆ ಮಾಡಬಹುದು. ಇದಕ್ಕಾಗಿ 1,00,008 ವ್ಯಾಕ್ಸಿನೇಟರ್‌ಗಳು ಸಜ್ಜಾಗಿದ್ದಾರೆ. ಒಟ್ಟು ಪ್ರಸ್ತುತ ಇರುವ ದಾಸ್ತಾನು ಸಾಮರ್ಥ್ಯದಲ್ಲಿ 19.98 ಲಕ್ಷ ಲಸಿಕೆಗಳನ್ನು ದಾಸ್ತಾನು ಮಾಡಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಕ್ಕಳಲ್ಲಿದೆ ವಿಶೇಷ ಕೊರೋನಾ ನಿರೋಧಕ ಶಕ್ತಿ!
ರಾಜ್ಯದ ಬಳಿ 10 ವಾಕ್ ಇನ್ ಕೂಲರ್ಸ್ ಮತ್ತು 4 ವಾಕ್ ಇನ್ ಫ್ರೀಜರ್‌ಗಳಿವೆ. 24 ಲಕ್ಷ ಸಿರಿಂಜ್‌ಗಳು ಈಗಾಗಲೇ ಕೇಂದ್ರದಿಂದ ರಾಜ್ಯಕ್ಕೆ ತಲುಪಿವೆ. ರಾಜ್ಯದ ಬಳಿ 3201 ಐಸ್ ರೆಫ್ರಿಜರೇಟರ್, 3,312 ಕೋಲ್ಡರ್ ಬಾರ್‌ಗಳು, 46,591 ವ್ಯಾಕ್ಸಿನ್ ಕ್ಯಾರಿಯರ್, 2.2 ಲಕ್ಷಕ್ಕೂ ಅಧಿಕ ಐಸ್ ಪ್ಯಾಕ್‌ಗಳು ಲಭ್ಯವಿವೆ.
ವಿಮಾನದ ಮೂಲಕ ಲಸಿಕೆ:
ಕೇಂದ್ರದಿಂದ ಬೆಂಗಳೂರು ಹಾಗೂ ಬೆಳಗಾವಿಯ ರಾಜ್ಯ ಮಟ್ಟದ ಉಗ್ರಾಣಗಳಿಗೆ ಲಸಿಕೆ ವಿಮಾನದ ಮೂಲಕ ಬರಬಹುದು. ಸ್ಥಳೀಯವಾಗಿ ಶೀತಲೀಕರಣ (ಫ್ರೀಜರ್) ಟ್ರಕ್ ಹಾಗೂ ಮಿನಿ ಟ್ರಕ್‌ಗಳ ಮೂಲಕ ಪ್ರಾದೇಶಿಕ ಲಸಿಕೆ ಉಗ್ರಾಣಗಳಿರುವ ಚಿತ್ರದುರ್ಗ, ಮೈಸೂರು, ಮಂಗಳೂರು, ಕಲಬುರಗಿ ಮತ್ತು ಬಾಗಲಕೋಟೆ ಸೇರಿ ಐದು ಕಡೆಗೆ ಸಾಗಿಸಲಾಗುವುದು. ಈ ಪ್ರಾದೇಶಿಕ ಉಗ್ರಾಣದಿಂದ ಪ್ರತಿಯೊಂದು ಜಿಲ್ಲೆಯಲ್ಲಿರುವ ಡೀಪ್ ಫ್ರೀಜರ್‌ಗಳಲ್ಲಿ ಲಸಿಕೆಯನ್ನು ಸಂಗ್ರಹಿಸಿಕೊಂಡು ತಾಲೂಕು, ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶೀತಲೀಕರಣದ ವಾಹನದಲ್ಲಿ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಲಸಿಕೆ ವಿತರಣೆ ಹೇಗೆ?:
ಮೊದಲ ಹಂತದಲ್ಲಿ ಲಸಿಕೆ ಪಡೆದುಕೊಳ್ಳುವವರ ಮಾಹಿತಿಯನ್ನು ಕೋ-ವಿನ್ ಆ್ಯಪ್‌ಗೆ ಅಪ್ಲೋಡ್ ಮಾಡಿ ನೋಂದಣಿ ಮಾಡಬೇಕು. ಈ ವೇಳೆ ವಿಳಾಸದ ದಾಖಲಾತಿ ಸಲ್ಲಿಕೆ ಮಾಡಿ, ಸಂಬಂಧಿಸಿದ ಅರ್ಜಿ ತುಂಬಬೇಕು. ಅರ್ಜಿಯಲ್ಲಿ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಮೊಬೈಲ್ ಸಂಖ್ಯೆ ಸೇರಿದಂತೆ ಪ್ರಾಥಮಿಕ ಮಾಹಿತಿ ನೀಡಬೇಕು.
ಫಲಾನುಭವಿಗೆ ಯಾವ ದಿನಾಂಕದಂದು, ಯಾವ ಆರೋಗ್ಯ ಕೇಂದ್ರಕ್ಕೆ, ಎಷ್ಟುಗಂಟೆಗೆ ಬರಬೇಕು. ಗುರುತಿನ ಚೀಟಿ ಕಡ್ಡಾಯ ಎಂಬಿತ್ಯಾದಿ ಮಾಹಿತಿಯ ಸಂದೇಶ ಬರುತ್ತದೆ. ಅದರಂತೆ ಆರೋಗ್ಯ ಕೇಂದ್ರಕ್ಕೆ ತೆರಳಬೇಕು.
ದಾಖಲೆ ಪರಿಶೀಲನೆ:
ಲಸಿಕೆ ಪಡೆಯಲು ಬರುವ ಫಲಾನುಭವಿಗಳ ಪಟ್ಟಿಯು ಆರೋಗ್ಯ ಇಲಾಖೆ ಸಿಬ್ಬಂದಿ ಬಳಿ ಲಭ್ಯವಿರುತ್ತದೆ. ಲಸಿಕೆ ಕೇಂದ್ರದ ಪ್ರವೇಶದ್ವಾರದಲ್ಲಿಯೇ ಫಲಾನುಭವಿಗಳ ಪಟ್ಟಿಯಲ್ಲಿ ನೋಂದಣಿ ಖಾತ್ರಿ ಮಾಡಿಕೊಂಡು, ಗುರುತಿನ ಚೀಟಿ ಪರಿಶೀಲನೆ ನಡೆಸಿ ಒಳಗೆ ಕಳುಹಿಸಲಾಗುತ್ತದೆ. ಆರಂಭದಲ್ಲಿ ವಿಶ್ರಾಂತಿ ಕೊಠಡಿಯಲ್ಲಿ ಕುಳಿತುಕೊಳ್ಳುವುದಕ್ಕೆ ಸೂಚಿಸಲಾಗುತ್ತದೆ.
ಬಳಿಕ ಲಸಿಕೆ ಕೊಠಡಿಯಲ್ಲಿ ಆರೋಗ್ಯ ತಪಾಸಣೆ ಮಾಡಿ, ಸೋಂಕಿನ ಲಕ್ಷಣ ಇಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲಾಗುತ್ತದೆ. ಅರ್ಹರಿದ್ದು, ಲಸಿಕೆ ಪಡೆಯುತ್ತಿದ್ದಾರೆ ಎಂದು ನೋಂದಣಿ ಮಾಡಿ ಫಲಾನುಭವಿಯ ಮೊಬೈಲ್‌ನಿಂದ ಒಟಿಪಿ ಪಡೆಯಲಾಗುತ್ತದೆ. ಬಳಿಕ ಲಸಿಕೆ ನೀಡಲಾಗುತ್ತದೆ.
ನಿಗಾ ವ್ಯವಸ್ಥೆ:
ಲಸಿಕೆ ನೀಡಿದ ನಂತರ ಕೊನೆಯ ಹಂತದಲ್ಲಿ ವ್ಯಕ್ತಿಯನ್ನು ನಿಗಾ ಕೊಠಡಿಗೆ ಕಳುಹಿಸಲಾಗುತ್ತದೆ. ನಿಗಾ ಕೊಠಡಿಯಲ್ಲಿ ಲಸಿಕೆ ಪಡೆದ ವ್ಯಕ್ತಿಯ ಆರೋಗ್ಯವನ್ನು ಕನಿಷ್ಠ 30 ನಿಮಿಷ ನಿಗಾದಲ್ಲಿ ಇರಿಸಲಾಗುತ್ತದೆ. ಒಂದೊಮ್ಮೆ ಈ ವೇಳೆ ಆರೋಗ್ಯದಲ್ಲಿ ವ್ಯತ್ಯಾಸವಾದರೆ ತುರ್ತು ಚಿಕಿತ್ಸೆ ನೀಡಲಾಗುತ್ತದೆ. ಹೆಚ್ಚುವರಿ ಚಿಕಿತ್ಸೆ ಅಗತ್ಯವಿದ್ದರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ಇಷ್ಟೆಲ್ಲಾ ಪ್ರಕ್ರಿಯೆ ಮುಗಿದ ಬಳಿಕ ಯಶಸ್ವಿಯಾಗಿ ಲಸಿಕೆ ಪಡೆದವರಿಗೆ ‘ನೀವು ಯಶಸ್ವಿಯಾಗಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೀರಿ’ ಎಂಬ ಸಂದೇಶ ಬರಲಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 9, 2021, 8:50 AM IST