ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಜ.09): ಕೊರೋನಾ ಸೋಂಕಿನ ಆತಂಕ, ಭಯದ ನಡುವೆ ಸರ್ಕಾರ ಶಾಲೆ​- ಕಾಲೇಜುಗಳನ್ನು ಪ್ರಾರಂಭಿಸಿದ್ದರೂ, ಅನೇಕ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಇನ್ನೂ ಧೈರ್ಯ ಮಾಡುತ್ತಿಲ್ಲ. ಆದರೆ ರಾಜ್ಯದಲ್ಲಿ ಮಕ್ಕಳ ಮೇಲೆ ಕೊರೋನಾ ಅಟ್ಟಹಾಸಗೈದಿರುವ ಪ್ರಕರಣಗಳು ತೀರಾ ಕಡಿಮೆ. ಇದಕ್ಕೆ ಮಕ್ಕಳಲ್ಲಿ ಇರುವ ವಿಶೇಷವಾದ ರೋಗ ನಿರೋಧಕ ಶಕ್ತಿ ಕಾರಣವಾಗಿದೆ ಎಂದು ತಜ್ಞರು ಹೇಳುತ್ತಾರೆ.

ರಾಜ್ಯದಲ್ಲಿ ಕೊರೋನಾದಿಂದಾಗಿ ಅಸುನೀಗಿರುವ ಮಕ್ಕಳ ಮತ್ತು ಯುವಕರ ಸಾವಿನ ಪ್ರಮಾಣ ಶೇ. 0.1ಕ್ಕಿಂತಲೂ ಕಡಿಮೆ ಇದೆ. 0-9 ವಯಸ್ಸಿನ 27 ಸಾವಿರ ಮಕ್ಕಳಿಗೆ ಸೋಂಕು ತಗುಲಿದ್ದು, 27 ಮಂದಿ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಎರಡ್ಮೂರು ತಿಂಗಳಿನಿಂದ ಸೋಂಕಿನಿಂದಾಗಿ ಮಕ್ಕಳು ಮರಣವನ್ನಪ್ಪಿರುವ ನಿದರ್ಶನವಿಲ್ಲ. ಬೇರೆ ಬೇರೆ ಉಳಿದ ವಯೋಮಾನದವರ ಅಂಕಿ- ಅಂಶಗಳನ್ನು ಗಮನಿಸಿದಾಗ ಕೊರೋನಾದಿಂದಾಗಿ ಮಕ್ಕಳಲ್ಲಿ ಸಾವಿನ ಪ್ರಮಾಣ ಕಡಿಮೆ.

ರಾಜ್ಯದಲ್ಲಿ ಮತ್ತೆ 50 ಶಿಕ್ಷಕರಿಗೆ ವೈರಸ್‌: ಸೋಂಕಿತರ ಸಿಬ್ಬಂದಿ ಸಂಖ್ಯೆ 236ಕ್ಕೆ

ಮಕ್ಕಳಲ್ಲಿ ಎಸಿಇ-2 ಎಂಬ ಪ್ರೊಟೀನ್‌ ವಯಸ್ಕರಿಗಿಂತ ಕಡಿಮೆ ಪ್ರಮಾಣದಲ್ಲಿರುತ್ತದೆ. ಈ ಪ್ರೊಟೀನ್‌ ಪ್ರಮಾಣ ಹೆಚ್ಚಿದ್ದಲ್ಲಿ ಕೊರೋನಾ ವೈರಾಣುವನ್ನು ದೇಹದೊಳಕ್ಕೆ ಬಿಟ್ಟುಕೊಳ್ಳುತ್ತದೆ. ಆದರೆ ಮಕ್ಕಳಲ್ಲಿ ಈ ಪ್ರೊಟೀನ್‌ ಕಡಿಮೆ ಪ್ರಮಾಣದಲ್ಲಿ ಇರುವ ಕಾರಣ ಮಕ್ಕಳಿಗೆ ಸೋಂಕು ಬರುವ ಸಾಧ್ಯತೆ ಕಡಿಮೆ ಇರುತ್ತದೆ. ಮಕ್ಕಳಲ್ಲಿ ಹದಿನೈದು ವರ್ಷದವರೆಗೆ ಇರುವ ಥೈಮಸ್‌ ಗ್ರಂಥಿಯು ಟಿ-ಲಿಂಫೋಸೈಟ್ಸ್‌ ಉತ್ಪಾದಿಸಿ ವೈರಸ್‌ ವಿರುದ್ಧ ಹೋರಾಡುತ್ತದೆ ಎಂದು ಮಕ್ಕಳ ವೈದ್ಯರು ಅಭಿಪ್ರಾಯ ಪಡುತ್ತಾರೆ. ಹಾಗೆಯೇ ಬಿಸಿಜಿ ಮತ್ತು ಎಂಎಂಆರ್‌ ಲಸಿಕೆಗಳು ಕೊರೋನಾವನ್ನು ಹತ್ತಿಕ್ಕಲು ಕಾರಣವಾಗಿರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯ ಸಹ ಇದೆ.

ಹಾಗೆಯೇ ಕೊರೋನಾ ಸೋಂಕು ಬಂದ ಸಂದರ್ಭದಲ್ಲಿ ಪೂರ್ವ ಕಾಯಿಲೆಗಳಿಂದ ಹೆಚ್ಚಿನ ಮರಣ ಸಂಭವಿಸಿದೆ. ಆದರೆ ಮಕ್ಕಳಲ್ಲಿ ಪೂರ್ವ ಕಾಯಿಲೆಗಳ ಸಂಭವ ಕಡಿಮೆ ಇರುವ ಕಾರಣ ಅವರು ಸೋಂಕಿನಿಂದ ಬೇಗ ಚೇತರಿಸಿಕೊಳ್ಳುತ್ತಾರೆ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.

ಅವರೆಕಾಯಿ ಮೇಳಕ್ಕೆ ಚಾಲನೆ: ಇನ್ನೆಷ್ಟು ದಿನ ಇದೆ..? ಟೈಮಿಂಗ್ಸ್ ಹೀಗಿದೆ

ಉಳಿದಂತೆ ರಾಜ್ಯದಲ್ಲಿ ಘಟಿಸಿದ ಸಾವಿನಲ್ಲಿ ಶೇ.60ರಷ್ಟುಸಾವುಗಳು ಹಿರಿಯ ನಾಗರಿಕರದ್ದು. ಇವರಲ್ಲಿ ಬಹುತೇಕರಿಗೆ ಎರಡರಿಂದ ಮೂರು ಪೂರ್ವ ಕಾಯಿಲೆಗಳಿದ್ದವು. ತೀವ್ರವಾದ ಉಸಿರಾಟದ ಸಮಸ್ಯೆಯಿಂದಾಗಿ ಹೆಚ್ಚಿನ ಸಾವು ಸಂಭವಿಸಿದೆ.

179ರಿಂದ ಒಂದಂಕಿಗೆ ಇಳಿದ ಸಾವು:

ಕಳೆದ ಸೆಪ್ಟೆಂಬರ್‌ 18ರಂದು ರಾಜ್ಯದಲ್ಲಿ ಗರಿಷ್ಠ 179 ಮಂದಿ ಮೃತರಾಗಿದ್ದರು. ಅಕ್ಟೋಬರ್‌ ಎರಡನೇ ವಾರದಿಂದ ಸಾವಿನ ಸಂಖ್ಯೆ ಕಡಿಮೆಯಾಗುತ್ತಾ ಡಿಸೆಂಬರ್‌ 24ರಂದು ಒಬ್ಬರು ಕೊರೋನಾಕ್ಕೆ ಬಲಿಯಾಗಿದ್ದರು. ಕಳೆದ ಹತ್ತನ್ನೆರಡು ದಿನಗಳಿಂದ ನಿರಂತರವಾಗಿ ಒಂದಂಕಿಯಲ್ಲೇ ಕೊರೋನಾ ಸಾವಿನ ಪ್ರಮಾಣ ದಾಖಲಾಗುತ್ತಿದೆ.

ರಾಜ್ಯದಲ್ಲಿ ಆಗಸ್ಟ್‌ನಲ್ಲಿ ಪ್ರತಿದಿನ ಸರಾಸರಿ 106 ಮಂದಿ ಕೊರೋನಾದಿಂದಾಗಿ ಸಾವಿಗೀಡಾಗುತ್ತಿದ್ದರು. ಸೆಪ್ಟೆಂಬರ್‌ನಲ್ಲಿ ಸಾವಿನ ಸರಾಸರಿ 102ಕ್ಕೆ ಇಳಿದಿತ್ತು. ಅಕ್ಟೋಬರ್‌ನಲ್ಲಿ 74.32, ನವೆಂಬರ್‌ 20.03 ಮತ್ತು ಡಿಸೆಂಬರ್‌ನ ಸರಾಸರಿ 10.06ಕ್ಕೆ ಇಳಿದಿದೆ. ಅಂದರೆ ಸಾವಿನ ಪ್ರತಿದಿನದ ಸರಾಸರಿ ಶೇ.90ರಷ್ಟುಕುಸಿದಿದೆ. ಏಪ್ರಿಲ್‌, ಮೇನಲ್ಲಿ ಪ್ರತಿದಿನದ ಸರಾಸರಿ ಸಾವಿನ ಪ್ರಮಾಣ 0.7ರಷ್ಟಿತ್ತು. ಜೂನ್‌ನಲ್ಲಿ ಇದು 6.46ಕ್ಕೆ ಏರಿತ್ತು. ಜುಲೈ ತಿಂಗಳಲ್ಲಿ 69.87ಕ್ಕೆ ಜಿಗಿದಿತ್ತು.

ತಾಂತ್ರಿತ ಸಮಸ್ಯೆ: 1 ಗಂಟೆ ತಡವಾಗಿ ಡ್ರೈ ರನ್ ಆರಂಭ

ಮಕ್ಕಳು ಮನೆಯಲ್ಲೇ ಇದ್ದ ಕಾರಣ ಅವರಲ್ಲಿ ಕೊರೋನಾ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳು ಸೋಂಕಿನ ಲಕ್ಷಣ ರಹಿತರಾಗಿರುತ್ತಾರೆ. ಎಸಿಇ-2 ಪ್ರೊಟೀನ್‌ ಮಕ್ಕಳಲ್ಲಿ ಕಡಿಮೆ ಇರುವುದರಿಂದ ವೈರಾಣುಗೆ ಅವರ ದೇಹ ಪ್ರವೇಶಿಸುವುದು ತುಸು ಕಷ್ಟ ಎಂದು ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಆಶಾ ಬೆನಕಪ್ಪ, ಸಿಡಿಎಸ್‌ಐಎಮ್‌ಇಆರ್‌ ತಿಳಿಸಿದ್ದಾರೆ.

ವೈರಸ್‌ ಮಾರ್ಪಾಟಾಗಿರಬಹುದು

ಪೂರ್ವ ಕಾಯಿಲೆ ಇರುವವರಿಗೆ ಸೋಂಕು ಹಬ್ಬುವುದು ಕಡಿಮೆ ಆಗಿದ್ದು ಸಾವಿನ ಪ್ರಮಾಣ ಇಳಿಯಲು ಕಾರಣ. ವೈರಸ್‌ ಇನ್ನೊಬ್ಬರ ದೇಹ ಪ್ರವೇಶಿಸಿ ಅವರನ್ನು ಸಾಯಿಸಿ ತಾನೂ ಸಾಯುವ ಇರಾದೆ ಹೊಂದಿರುವುದಿಲ್ಲ. ಆದ್ದರಿಂದ ರೋಗಿಯನ್ನು ಕೊಲ್ಲುವ ತನ್ನ ಸಾಮರ್ಥ್ಯದಲ್ಲಿ ವೈರಸ್‌ ಮಾರ್ಪಾಟು ಮಾಡಿಕೊಂಡಿರುವ ಸಾಧ್ಯತೆಯೂ ಇದೆ ಎಂದಿದ್ದಾರೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ. ಗಿರಿಧರ್‌ ಬಾಬು.