ಬೆಳಗಾವಿ (ಫೆ.14):  ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅದರಂತೆ ಆಲಮಟ್ಟಿ, ಕೃಷ್ಣಾ ರಾಷ್ಟ್ರೀಯ ಯೋಜನೆಯನ್ನು ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಫೆ.21 ಹಾಗೂ ಫೆ.22ರಂದು ದೆಹಲಿಗೆ ಭೇಟಿ ನೀಡಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ರಾಷ್ಟ್ರೀಯ ಯೋಜನೆಯಾದ್ರೆ ಶೇ.90ರಷ್ಟುಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ.10ರಷ್ಟುಅನುದಾನ ನೀಡಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನೂ ರಾಷ್ಟ್ರೀಯ ಯೋಜನೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಹೊಸ ಯೋಜನೆಗಳಿಗೆ ಕೇಂದ್ರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ರಷ್ಟುಅನುದಾನ ನೀಡಲಿದೆ ಎಂದು ತಿಳಿಸಿದರು.

ಸಾಹುಕಾರ್‌ಗೆ ಟಕ್ಕರ್ ಕೊಟ್ಟ ಲಕ್ಷ್ಮೀ: ರಾಜಕಾರಣದಲ್ಲಿ ಸಂಚಲನ

ಮಹದಾಯಿ ವಿಷಯದಲ್ಲಿ ಗೋವಾ ಕ್ಯಾತೆ ತೆಗೆಯುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದ ಹಿತಾಸಕ್ತಿಗೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈಗಾಗಲೇ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗಿರುವ ಪ್ರಕರಣಕ್ಕೆ ಪ್ರಧಾನ ಮಂತ್ರಿಗಳು ಮಧ್ಯಸ್ಥಿಕೆ ವಹಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ, ಇದು ಅಂತಾರಾಜ್ಯದ ವಿಷಯವಾಗಿದ್ದರಿಂದ ಯೋಜನೆಗೆ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಅನುಮತಿ ಬೇಕು. ಕೊರೋನಾ ಹಿನ್ನೆಲೆಯಲ್ಲಿ ಕೆಲಸ ವಿಳಂಬವಾಗಿದೆ. ಯೋಜನೆ ಆರಂಭ ಕುರಿತು ದೆಹಲಿಯಲ್ಲಿ ಸಭೆ ಮಾಡುತ್ತೇವೆ ಎಂದರು.