'ಗರ್ಭಿಣಿಯರೇ ಸದ್ಯ ಕೊರೋನಾ ಲಸಿಕೆ ಪಡೀಬೇಡಿ'
* ಕೊರೋನಾ ಹೆಚ್ಚಳ: ಗರ್ಭಿಣಿಯರಲ್ಲಿ ಆತಂಕ
* ಸರ್ಕಾರದ ನಿಯಮದ ಪ್ರಕಾರ ಈಗ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆ ಪಡೆಯುವಂತಿಲ್ಲ.
* ಲಸಿಕೆ ಪಡೆದ ಕೆಲವರಲ್ಲಿ ತುಸು ಅಡ್ಡ ಪರಿಣಾಮ ಕಾಣಿಸಿಕೊಳ್ಳುವುದು ಸಹಜ
ಬೆಂಗಳೂರು(ಜೂ.10): ಕೊರೋನಾ ಹಾವಳಿ ಗರ್ಭಿಣಿಯರು ಹಾಗೂ ನವಜಾತ ಶಿಶುಗಳಲ್ಲೂ ಕಾಣಿಸಿಕೊಳ್ಳುವುದು ಇತ್ತೀಚೆಗೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗರ್ಭಿಣಿಯರು ಲಸಿಕೆ ಪಡೆದುಕೊಳ್ಳಲು ಮುಂದಾಗಿದ್ದಾರೆ. ಆದರೆ, ಗರ್ಭಿಣಿಯರು ಸದ್ಯಕ್ಕೆ ಕೋವಿಡ್ ಲಸಿಕೆ ಪಡೆಯದಿರುವುದು ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಮೊದಲ ಅಲೆಯಲ್ಲಿ ಗರ್ಭಿಣಿ ಮಹಿಳೆಯರ ಮೇಲೆ ಕೊರೋನಾ ವೈರಾಣು ತುಸು ದಯೆ ತೋರಿತ್ತು. ಅದರೆ ಎರಡನೇ ಅಲೆಯಲ್ಲಿ ನಿರ್ದಯಿ ಕೊರೋನಾ ಗರ್ಭಿಣಿ ಮಹಿಳೆಯರ ಪ್ರಾಣ ತೆಗೆದ, ಅಕಾಲಿಕವಾಗಿ ಮಗು ಜನಿಸಲು ಕಾರಣವಾದ ಹತ್ತಾರು ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಗರ್ಭಿಣಿಯರು ಲಸಿಕೆ ಪಡೆದರೆ ಮಗು ಜನನದ ಸಂದರ್ಭದಲ್ಲಿ ಕೊರೋನಾದ ಭಯ ತುಸು ಕಡಿಮೆ ಆಗಬಹುದು ಎಂಬ ಸಾಮಾನ್ಯ ಅಭಿಪ್ರಾಯ ಮೂಡಿದೆ.
ಆದರೆ, ವಾಣಿ ವಿಲಾಸ್ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕಿ ಡಾ. ಗೀತಾ ಶಿವಮೂರ್ತಿ ಸರ್ಕಾರದ ನಿಯಮದ ಪ್ರಕಾರ ಈಗ ಮಕ್ಕಳು ಮತ್ತು ಗರ್ಭಿಣಿಯರು ಲಸಿಕೆ ಪಡೆಯುವಂತಿಲ್ಲ. ಈ ಬಾರಿ ಗರ್ಭಿಣಿಯರಲ್ಲಿ ಕೋವಿಡ್ ನ ಸಾವು ನೋವು ಹೆಚ್ಚಾಗಿದೆ. ಇದಕ್ಕೆ ತಡವಾಗಿ ಸೋಂಕು ಪತ್ತೆಯಾಗಿದ್ದು, ಕೊನೆ ಕ್ಷಣದಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ದಾಖಲಾಗಿದ್ದು ಅಥವಾ ವೈರಾಣುವಿನ ರೂಪಾಂತರ ಕಾರಣವಾಗಿರಬಹುದು ಎಂದು ಹೇಳುತ್ತಾರೆ.
ಹುಬ್ಬಳ್ಳಿ: ಕಿಮ್ಸ್‌ನಲ್ಲಿ 342 ಕೊರೋನಾ ಸೋಂಕಿತೆಯರಿಗೆ ಹೆರಿಗೆ..!
ಗರ್ಭಧಾರಣೆಯ ಯೋಜನೆ ಇದ್ದವರು ಮೂರು ತಿಂಗಳು ಮೊದಲು ಲಸಿಕೆ ಪಡೆಯಬಾರದು. ಗರ್ಭಧಾರಣೆಯ ಬಳಿಕವೂ ಲಸಿಕೆ ಪಡೆಯುವಂತಿಲ್ಲ. ಅದೇ ರೀತಿ ಬಾಣಂತಿಯರಲ್ಲಿಯೂ ನಾವು 9-10 ತಿಂಗಳ ಕಾಲ ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳುತ್ತಿದ್ದೇವೆ. ಮಗು ಜನನ ಆದ ಮೂರು ತಿಂಗಳ ಕಾಲ ಯಾವ ಕಾರಣಕ್ಕೂ ಲಸಿಕೆ ತೆಗೆದುಕೊಳ್ಳಬಾರದು ಎಂದು ಡಾ. ಗೀತಾ ಶಿವಮೂರ್ತಿ ಹೇಳುತ್ತಾರೆ.
ಗರ್ಭಿಣಿಯರ ಕೋವಿಡ್ ಆಸ್ಪತ್ರೆಯಾಗಿ ನಿಗದಿಯಾಗಿರುವ ಘೋಷಾ ಆಸ್ಪತ್ರೆಯ ವೈದ್ಯಕೀಯ ಅಧಿಕ್ಷಕಿ ಡಾ. ತುಳಸಿದೇವಿ ಅವರು ಕೂಡ ಗರ್ಭಿಣಿಯರು ಲಸಿಕೆ ಪಡೆಯುವ ಬಗ್ಗೆ ಸರ್ಕಾರ ನಮಗೆ ಯಾವುದೇ ಸೂಚನೆ ನೀಡಿಲ್ಲ. ಆದ್ದರಿಂದ ಯಾವುದೇ ಸರ್ಕಾರಿ ವ್ಯವಸ್ಥೆಯಲ್ಲಿ ಗರ್ಭಿಣಿಯರಿಗೆ ಲಸಿಕೆ ನೀಡುತ್ತಿಲ್ಲ ಎಂದು ಹೇಳುತ್ತಾರೆ.
ಲಸಿಕೆ ಪಡೆದ ಕೆಲವರಲ್ಲಿ ತುಸು ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುವುದು ಸಹಜ. ಗರ್ಭಿಣಿಯರಲ್ಲಿ ಈ ಅಡ್ಡ ಪರಿಣಾಮ ಕಾಣಿಸಿಕೊಂಡರೆ ಅದನ್ನು ನಿರ್ವಹಿಸುವ ಶಿಷ್ಟಾಚಾರ ರೂಪುಗೊಂಡಿಲ್ಲ. ಆದ್ದರಿಂದ ಈ ಬಗ್ಗೆ ವಿವರವಾದ ಮಾರ್ಗಸೂಚಿ ಪ್ರಕಟಗೊಳ್ಳದೆ ಲಸಿಕೆ ಪಡೆಯದಿರುವುದು ಒಳ್ಳೆಯದು ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ.