* ಯಾವ ಜಿಲ್ಲೆಯಲ್ಲೂ ಮುಂಗಾರು ಪೂರ್ವ ಮಳೆ ಕೊರತೆ ಇಲ್ಲ* ಚುರುಕಾಗದ ಮುಂಗಾರು* ಮೇ 31ಕ್ಕೆ ಮುಂಗಾರು ಮಾರುತ ರಾಜ್ಯಕ್ಕೆ ಕಾಲಿಟ್ಟಿದ್ದು ಇನ್ನಷ್ಟೆ ಚುರುಕಾಗಬೇಕಿದೆ
ಬೆಂಗಳೂರು(ಜೂ.03): ರಾಜ್ಯದಲ್ಲಿ ಈ ಬಾರಿ ದಾಖಲೆಯ ಮುಂಗಾರು ಪೂರ್ವ ಮಳೆ ಸುರಿದಿದ್ದು, ವಾಡಿಕೆಗಿಂತ ಶೇ.105ಹೆಚ್ಚು ಮಳೆಯಾಗಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಮಾಚ್‌ರ್ 1ರಿಂದ ಮೇ 31ರವರೆಗೆ (ಪೂರ್ವ ಮುಂಗಾರು ಮಳೆ) 11.51 ಸೆಂ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ 23.65 ಸೆಂ.ಮೀ. ಮಳೆಯಾಗಿದೆ.
ದಕ್ಷಿಣ ಒಳನಾಡಿನಲ್ಲಿ 28.21 ಸೆಂ.ಮೀ (ವಾಡಿಕೆ ಮಳೆ 13.75 ಸೆಂ.ಮೀ), ಉತ್ತರ ಒಳನಾಡಿನಲ್ಲಿ 15.18 (7.88), ಮಲೆನಾಡು 16.3 (35.42), ಕರಾವಳಿ 33.98 (15.58) ಸೆಂ.ಮೀ ಮಳೆಯಾಗಿದೆ. ಮೇ ತಿಂಗಳೊಂದರಲ್ಲೇ 16.83 ಸೆಂ.ಮೀ ಮಳೆ ಸುರಿದಿದೆ. ರಾಜ್ಯದಲ್ಲಿ 2020 ಮತ್ತು 2021ರ ಸಾಲಿನಲ್ಲಿಯೂ ವಾಡಿಕೆ ಮೀರಿ ಮಳೆಯಾಗಿತ್ತು. ಆದರೆ ಈ ಬಾರಿ ವಾಡಿಕೆಗಿಂತ ಶೇ.105 ಹೆಚ್ಚು ಮಳೆಯಾಗಿದೆ. 1971ರ ಬಳಿಕ ಬಿರು ಬೇಸಿಗೆಯ ತಿಂಗಳಲ್ಲಿ ಇಷ್ಟೊಂದು ಮಳೆ ಸುರಿದಿಲ್ಲ. ಬೀದರ್ ಬಿಟ್ಟು ಉಳಿದೆಲ್ಲ ಜಿಲ್ಲೆಗಳಲ್ಲಿ ವಾಡಿಕೆ ಮೀರಿ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Monsoon Rain ಈ ವರ್ಷ 103% ಮಳೆ ಸಾಧ್ಯತೆ, ವಾಡಿಕೆಗಿಂತ ಹೆಚ್ಚು ಎಂದ IMD!
ಚುರುಕಾಗದ ಮುಂಗಾರು:
ಮೇ 31ಕ್ಕೆ ಮುಂಗಾರು ಮಾರುತ ರಾಜ್ಯಕ್ಕೆ ಕಾಲಿಟ್ಟಿದ್ದು ಇನ್ನಷ್ಟೆ ಚುರುಕಾಗಬೇಕಿದೆ. ಶೇ.14 ಮಳೆ ಕೊರತೆ ಆಗಿದೆ. ಮಲೆನಾಡಿನಲ್ಲಿ ಶೇ.58, ಕರಾವಳಿಯಲ್ಲಿ ಶೇ.48, ದಕ್ಷಿಣ ಒಳನಾಡಿನಲ್ಲಿ ಶೇ.24 ಮಳೆ ಕೊರತೆ ಆಗಿದೆ. ಆದರೆ ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ಶೇ.44 ಹೆಚ್ಚು ಮಳೆಯಾಗಿದೆ.
ಜೂನ್ ನಾಲ್ಕರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಬೆಂಗಳೂರು ನಗರೆ ಮತ್ತು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು ‘ಯೆಲ್ಲೋ ಅಲರ್ಚ್’ ಎಚ್ಚರಿಕೆ ನೀಡಲಾಗಿದೆ.
