ಬೆಂಗಳೂರು(ಸೆ.07): ದೇಶದ ಆಡಳಿತಾರೂಢ ವ್ಯವಸ್ಥೆಯು ಕೋವಿಡ್‌ ನೆಪದಲ್ಲಿ ನಾಡಿನ ಪ್ರತಿಶತ 80ರಷ್ಟು ಶ್ರಮಿಕರನ್ನು ಸಂಪೂರ್ಣ ಬೀದಿಗೆ ತಂದು ನಿಲ್ಲಿಸಿದೆ. ಈ ದುರಂತದ ವಿರುದ್ಧ ಶ್ರಮಿಕರು ಎರಡನೇ ಸ್ವಾತಂತ್ರ್ಯ ಚಳವಳಿ ಮಾದರಿಯಲ್ಲಿ ಹೋರಾಡಲು ಇದು ಸಕಾಲ ಎಂದು ಹಿರಿಯ ರಂಗಕರ್ಮಿ, ಹೋರಾಟಗಾರ ಪ್ರಸನ್ನ ಹೆಗ್ಗೋಡು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಮಹಾತ್ಮ ಗಾಂಧಿ ಮತ್ತು ಚರಕ ವಿಷಯ ಕುರಿತು ವಿಡಿಯೋ ಕಾನ್ಫರೆನ್ಸ್‌ನಲ್ಲಿ ವಿಚಾರ ಮಂಡಿಸಿದ ಅವರು, ಗಾಂಧೀಜಿಯವರು ಸ್ವರಾಜ್ಯದ ಸಂಕೇತವಾಗಿ ಚರಕವನ್ನು ಬಳಸಿದ್ದರು. ಇಂದು ನೇಕಾರರು ನೇಯ್ಗೆ ನಿಲ್ಲಿಸಿದ್ದು, ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದ ಪ್ರತಿಶತ 80ರಷ್ಟು ಶ್ರಮಿಕರು ಕಳೆದ ಆರು ತಿಂಗಳಿನಿಂದ ಕೆಲಸ ಕಳೆದುಕೊಂಡಿದ್ದಾರೆ. ಎರಡು ವರ್ಷಗಳಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಅನೇಕ ಕೈಗಾರಿಕೆಗಳು ಮುಚ್ಚಿವೆ. ಇಂದು ಕೃಷಿಕರು, ನೇಕಾರರು, ಚಮ್ಮಾರರು, ಗುಡಿಗಾರರು ಸೇರಿದಂತೆ ಅನೇಕ ಸಮುದಾಯಗಳು ತೀವ್ರ ಸಂಕಷ್ಟಕ್ಕೆ ಸಿಲುಕಲು ಬಿಳಿಯಾನೆಯಂತಿರುವ ಆಡಳಿತಶಾಹಿ ವ್ಯವಸ್ಥೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಂಧಿ, ವಿನೋಬಾ ಭಾವೆ ಇದ್ದಿದ್ದರೆ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಚರ್ಚೆ ಮಾಡುತ್ತಾ ಕೂರುತ್ತಿರಲಿಲ್ಲ. ಜನರೊಂದಿಗೆ ರಸ್ತೆಗಿಳಿದು, ಕೆಲಸ ಕಳೆದುಕೊಂಡ ಕೋಟ್ಯಂತರ ಬಡ ಜನರ ಹಿಂದೆ ನಿಂತು ಅವರ ದನಿಯಾಗುತ್ತಿದ್ದರು. ಪ್ರಗತಿಪರರು, ಚಿಂತಕರು ಆಡಳಿತಶಾಹಿ ವಿರುದ್ಧ ಹೋರಾಡಲು ಎದುರುವ ಸ್ಥಿತಿ ಇದೆ. ಇನ್ನಾದರೂ ಜನರೊಂದಿಗೆ ಎರಡನೇ ಸ್ವಾತಂತ್ರ್ಯ ಚಳವಳಿ ಮಾದರಿಯಲ್ಲೇ ಶ್ರಮಿಕರೆಲ್ಲರೂ ಒಗ್ಗೂಡಿ ಹೋರಾಡಬೇಕಿದೆ ಎಂದರು.

23,236 ಉತ್ತರ ಭಾರತ ಕಾರ್ಮಿಕರು ಮರಳಿ ಊರಿಗೆ

ರಾಜ್ಯದಲ್ಲಿ ನೇಕಾರರು ಕೆಲಸ ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಅತ್ಯುತ್ತಮ ಬಟ್ಟೆಗೆ ಹೆಸರುವಾಸಿಯಾದ ಉಡುಪಿ, ಮಂಗಳೂರು ಭಾಗದಲ್ಲಿ ನೇಕಾರಿಕೆ ಸಂಪೂರ್ಣ ನಿಂತಿದ್ದು, ಉದ್ಯೋಗ ನಷ್ಟವಾಗಿದೆ. ಬೆಳಗಾವಿ, ಬಾಗಲಕೋಟೆ, ಗದಗ, ಯಾದಗಿರಿ ಜಿಲ್ಲೆಯಲ್ಲೂ ಚರಕ, ಮಗ್ಗದ ಸದ್ದಡಗಿದೆ. ದುರಂತವೆಂದರೆ ಕರ್ನಾಟಕ ಕೈಮಗ್ಗ ನಿಗಮ ಮುಚ್ಚುವ ಸ್ಥಿತಿಗೆ ಬಂದು ಕುಳಿತಿದೆ. ಕರ್ನಾಟಕದ ವಿದ್ಯುತ್‌ ಮಗ್ಗಗಳ ನಿಗಮ ಬೇರೆ ರಾಜ್ಯಗಳಿಂದ ಬಟ್ಟೆತಂದು ಮಾರುವ ಅತ್ಯಂತ ದುರಂತಮಯ ದಲ್ಲಾಳಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಚರಕದಂತಹ ಗ್ರಾಮೀಣ ಯಶಸ್ವಿ ಕೈಗಾರಿಕೋದ್ಯಮ ಇಂದು ದಿವಾಳಿಯಾಗಿದ್ದರೆ ಅದಕ್ಕೆ ಆಡಳಿತ ವ್ಯವಸ್ಥೆ ಕಾರಣವಾಗಿದೆ. ನಮ್ಮ ಹೋರಾಟ ಪಂಚಾಯತಿಗಳ ಮುಂದೆ ಪ್ರಾರಂಭವಾಗಬೇಕಿದೆ. ಯಾವುದೇ ಪಕ್ಷ ಅಥವಾ ಸರ್ಕಾರವನ್ನು ವಿರೋಧಿಸಿ ಸತ್ಯಾಗ್ರಹ ಮಾಡುವುದು ಬೇಡ. ಸಂಸತ್ತಿನಲ್ಲಿ ಪ್ರಶ್ನೋತ್ತರ ಅವಕಾಶ ತೆಗೆದುಹಾಕಲಿ. ನಾವು ನಮ್ಮ ಪಂಚಾಯತಿಗಳಲ್ಲಿ ಪ್ರಶ್ನೋತ್ತರ ಪ್ರಾರಂಭಿಸಲು ಅವುಗಳ ಮುಂದೆ ಶ್ರಮದಾನ ಮಾಡುತ್ತೇವೆ ಎಂದರು.