ಬೆಳಗಾವಿ, (ನ.06): ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಮಾಡಿರುವ ರಾಜ್ಯ ಸರ್ಕಾರದ ಕ್ರಮ ಸರಿಯಲ್ಲ. ಪಟಾಕಿ ಸಿಡಿಸುವುದರಿಂದ ಪರಿಸರ ನಾಶವಾಗುತ್ತೆಂಬುದು ಸರಿಯಲ್ಲ. ಪರಿಸರ ನಾಶಕ್ಕೆ ಹಲವಾರು ಕಾರಣಗಳಿವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

"

ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್, ಪಟಾಕಿಯಿಂದ ಪರಿಸರ ಮಾಲಿನ್ಯವಾಗುತ್ತೆ ಎಂಬುದು ಸುಳ್ಳು. ವಾಹನಗಳಿಂದ ಎಷ್ಟು ಪರಿಸರ ಮಾಲಿನ್ಯವಾಗುತ್ತಿದೆ. ಅಭಿವೃದ್ಧಿ ಹೆಸರಲ್ಲಿ ಅರಣ್ಯ ಪ್ರದೇಶಗಳನ್ನು ಹೇಗೆಲ್ಲ ನಾಶಮಾಡಲಾಗುತ್ತಿದೆ ಮೊದಲು ಇಂತವುಗಳನ್ನು ಸರ್ಕಾರ ತಡೆಯಬೇಕು. ಅದನ್ನು ಬಿಟ್ಟು ವರ್ಷಕ್ಕೆ ಒಮ್ಮೆ ಬರುವ ಹಬ್ಬಗಳಲ್ಲಿ ಪಟಾಕಿ ನಿಷೇಧ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಸಿಎಂ ಮಹತ್ವದ ಘೋಷಣೆ: ಈ ಬಾರಿ ದೀಪಾವಳಿ ಪಟಾಕಿ ಠುಸ್..!

ಇನ್ನು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎನ್ನುವುದಾದರ ಒಂದು ದಿನ ಪಟಾಕಿ ಹಚ್ಚುವುದರಿಂದ ಆರೋಗ್ಯ ಸಮಸ್ಯೆ ಕಡಿಮೆಯಾಗಲ್ಲ. ವರ್ಷವಿಡಿ ಪಬ್, ಬಾರ್ ತೆರೆಯಲು ಸರ್ಕಾರ ಅವಕಾಶ ನೀಡಿದೆ. ಇದರಿಂದ ರಾಜ್ಯದಲ್ಲಿ ಸಾವಿರಾರು ಹೆಣ್ಣು ಮಕ್ಕಳು ಬೀದಿಗೆ ಬಿದ್ದಿದ್ದಾರೆ. ಯುವಕರು ದುಶ್ಚಟಕ್ಕೆ ದಾಸರಾಗಿ ಕುಟುಂಬವನ್ನೇ ಬೀದಿಗೆ ತರುತ್ತಿದ್ದಾರೆ. ಇಡೀ ಸಮಾಜವೇ ಹಾಳಾಗುತ್ತಿದೆ ಎಂದು ಕಿಡಿಕಾರಿದರು.

ಆರೋಗ್ಯದ ಬಗ್ಗೆ ಯೋಚನೆ ಮಾಡುವ ಸರ್ಕಾರ ಮದ್ಯಪಾನ ಮಾಡಲು, ಪಬ್, ಬಾರ್ ತೆರೆಯಲು ಯಾಕೆ ಅವಕಾಶ ನೀಡಿದೆ. ಪಟಾಕಿಯಿಂದ ಆರೋಗ್ಯ ಹಾಳಾಗುತ್ತದೆ ಎನ್ನುವುದಾದರೆ ಇವುಗಳ ಬಗ್ಗೆಯೂ ಸರ್ಕಾರ ಯೋಚಿಸಬೇಕಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಕದ್ದುಮುಚ್ಚಿ ಪಟಾಕಿ ಹೊಡೆಯುವವರ ಬಗ್ಗೆ ಸಚಿವ ಸುಧಾಕರ್ ಹೇಳಿದಿಷ್ಟು..!

ಪಟಾಕಿ ಬ್ಯಾನ್ ಮಾಡುವ ಸರ್ಕಾರದ ಆದೇಶವನ್ನು ಹಿಂಪಡೆಯಬೇಕು. ವರ್ಷಕ್ಕೊಮ್ಮೆ ಆಚರಿಸುವ ಹಬ್ಬಗಳಲ್ಲಿಯೂ ಪಟಾಕಿ ನಿಷೇಧ ಸರಿಯಲ್ಲ ಎಂದು ಒತ್ತಾಯಿಸಿದರು.