ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಸಂಬಂಧ ವಕೀಲ ಹಾಗೂ ಬಿಜೆಪಿ ಮುಖಂಡರೂ ಆದ ದೇವರಾಜೇಗೌಡ ಶುಕ್ರವಾರವೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹಾಜರಾಗಿ ಪೆನ್‌ ಡ್ರೈವ್‌ನಲ್ಲಿದ್ದ ವಿಡಿಯೊಗಳ ಸೋರಿಕೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ. 

ಬೆಂಗಳೂರು (ಮೇ.04): ಸಂಸದ ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣ ಸಂಬಂಧ ವಕೀಲ ಹಾಗೂ ಬಿಜೆಪಿ ಮುಖಂಡರೂ ಆದ ದೇವರಾಜೇಗೌಡ ಶುಕ್ರವಾರವೂ ವಿಶೇಷ ತನಿಖಾ ತಂಡದ (ಎಸ್‌ಐಟಿ) ಎದುರು ಹಾಜರಾಗಿ ಪೆನ್‌ ಡ್ರೈವ್‌ನಲ್ಲಿದ್ದ ವಿಡಿಯೊಗಳ ಸೋರಿಕೆಗೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ವಿಡಿಯೊಗಳಿರುವ ಪೆನ್‌ಡ್ರೈವ್‌ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ದೇವರಾಜೇಗೌಡ ಗುರುವಾರ ಎಸ್‌ಐಟಿ ಅಧಿಕಾರಿಗಳ ಎದುರು ಹಾಜರಾಗಿ ವಿಚಾರಣೆ ಎದುರಿಸಿದ್ದರು. ಇದಕ್ಕೆ ಪೂರಕ ದಾಖಲೆಗಳನ್ನು ನೀಡುವಂತೆ ಎಸ್‌ಐಟಿ ಸೂಚಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರವೂ ಎಸ್‌ಐಟಿ ಅಧಿಕಾರಿಗಳ ಎದುರು ಹಾಜರಾಗಿ ಕೆಲ ಮಹತ್ವದ ದಾಖಲೆಗಳನ್ನು ನೀಡಿದ್ದಾರೆ.

ಮೂರ್ನಾಲ್ಕು ದಿನಗಳಲ್ಲಿ ಸತ್ಯ ಬಯಲು: ಎಸ್ಐಟಿ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವರಾಜೇಗೌಡ, ಈ ಪ್ರಕರಣದಲ್ಲಿ ಸಾಕ್ಷಿಯಾಗಿ ಗುರುವಾರ ಎಸ್‌ಐಟಿ ವಿಚಾರಣೆಗೆ ಬಂದಿದ್ದೆ. ಇಂದು ಕೆಲ ದಾಖಲೆಗಳನ್ನು ಎಸ್‌ಐಟಿಗೆ ನೀಡಿದ್ದೇನೆ. ತನಿಖಾ ತಂಡಗಳು ತನಿಖೆಯಲ್ಲಿ ಮಗ್ನರಾಗಿದ್ದಾರೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಸತ್ಯಾಂಶ ಹೊರಬರಲಿದೆ ಎಂದರು.

400 ರೇಪ್‌: ರಾಹುಲ್‌ ಗಾಂಧಿ ಹೇಳಿಕೆಗೆ ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ

ಪೆನ್‌ಡ್ರೈವ್‌ ಸೋರಿಕೆ ಗ್ಯಾಂಗ್‌ನ ಸುಳಿವು ನೀಡಿರುವೆ: ಈ ಪ್ರಕರಣದ ತನಿಖೆಗೆ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳ ತಂಡ ರಚಿಸಿರುವ ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇಲ್ಲಿ ಹಲವು ಮಹಿಳೆಯರಿಗೆ ಅನ್ಯಾಯವಾಗಿದೆ. ಆರೋಪಿಯ ಜತೆಗೆ ಪೆನ್‌ಡ್ರೈವ್‌ ಹಂಚಿಕೆ ಮಾಡಿದ ಗ್ಯಾಂಗ್‌ ಕುರಿತು ಸಮಗ್ರ ತನಿಖೆ ಮಾಡಿ ಎಲ್ಲರನ್ನೂ ಬಂಧಿಸಬೇಕು ಎಂದು ಮನವಿ ಮಾಡಿದ್ದೇನೆ. ಒಂದು ಗ್ಯಾಂಗ್‌ನ ಪ್ರಮುಖರ ಸುಳಿವು ನೀಡಿದ್ದೇನೆ. ಈ ಸುಳಿವು ಆಧರಿಸಿ ತನಿಖಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಇದೊಂದು ರಾಜಕೀಯ ಆಟ: ತನಿಖೆ ಎಲ್ಲಾ ಆಯಾಮಗಳಲ್ಲಿ ನಡೆಯುತ್ತಿದೆ. ಕೃತ್ಯ ಎಸೆಗಿದ ಯಾರೊಬ್ಬರೂ ಬಚಾವಾಗಲು ಸಾಧ್ಯವಿಲ್ಲ. ಕಾರ್ತಿಕ್‌ ಅಥವಾ ಅವರಪ್ಪ ಅಥವಾ ದೇವರು ಅಥವಾ ನಾನು ಯಾರೇ ತಪ್ಪಿತಸ್ಥರಾದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸಂತ್ರಸ್ತೆಯರು ಈಗಾಗಲೇ ಎಸ್‌ಐಟಿ ಸಂಪರ್ಕದಲ್ಲಿ ಇದ್ದಾರೆ. ಇದೊಂದು ರಾಜಕೀಯದ ಆಟ. ಆರೋಪಿಗಳು ಎಷ್ಟೇ ಪ್ರಬಲರಾಗಿದ್ದರೂ, ರಾಜಕೀಯ ಬಲ ಇದ್ದರೂ ಎಸ್ಐಟಿ ತಂಡ ಬಂಧಿಸಲಿದೆ. ಎಸ್‌ಐಟಿ ಅಧಿಕಾರಿಗಳಿಗೆ ಪೆನ್‌ಡ್ರೈವ್‌ ಜಾಲದ ಸುಳಿವು ನೀಡಿದ್ದೇನೆ. 

ರಾಹುಲ್‌ ಗಾಂಧಿ ಲಾಂಚ್‌ಗೆ ಸೋನಿಯಾ 20 ಸಲ ವಿಫಲ ಪ್ರಯತ್ನ: ಅಮಿತ್‌ ಶಾ ವ್ಯಂಗ್ಯ

ತನಿಖಾಧಿಕಾರಿಗಳು ಎಲ್ಲರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆಗ ಅವರು ಯಾರು ಎಂಬುದು ಎಲ್ಲರಿಗೂ ಗೊತ್ತಾಗಲಿದೆ. ವಾರದೊಳಗೆ ಎಲ್ಲವೂ ಹೊರಗೆ ಬರಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಎಸ್‌ಐಟಿ ತನಿಖೆ ಶರವೇಗದಲ್ಲಿ ನಡೆಯುತ್ತಿದೆ. ನನಗೆ ತೃಪ್ತಿ ತಂದಿದೆ. ಶೀಘ್ರದಲ್ಲೇ ಸತ್ಯ ಹೊರಬರಲಿದೆ. ಮಹಿಳೆಯರ ಮೇಲೆ ಅತ್ಯಾಚಾರ ಘೋರ ಅಪರಾಧ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ದೇವರಾಜೇಗೌಡ ಹೇಳಿದರು.