ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಪ್ರಕರಣದಲ್ಲಿ ಬಳಸಲಾದ ತಂತ್ರಜ್ಞಾನದ ವಿವರಗಳು ಬಹಿರಂಗಗೊಂಡಿವೆ. ಎಸ್‌ಐಟಿ ತನಿಖೆಯನ್ನು ನ್ಯಾಯಾಲಯ ಶ್ಲಾಘಿಸಿದೆ.

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿರುವ ತೀರ್ಪು ಐತಿಹಾಸಿಕವಾಗಿದೆ ಎಂದು ವ್ಯಾಪಕ ಅಭಿಪ್ರಾಯ ವ್ಯಕ್ತವಾಗಿದೆ. ಅತ್ಯಾ1ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಪಡೆದಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ವೈರಲ್ ವಿಡಿಯೋದಲ್ಲಿರುವ ವ್ಯಕ್ತಿ ಪ್ರಜ್ವಲ್ ಎನ್ನುವುದು ಹೊಸ ತಂತ್ರಜ್ಞಾನದಿಂದ ದೃಢಪಟ್ಟಿತು. ಯಾವ ತಂತ್ರಜ್ಞಾನವನ್ನು ತನಿಖೆಗೆ ಬಳಸಲಾಗಿತ್ತು ಎಂಬುದು ಈಗ ಬಹಿರಂಗವಾಗಿದೆ. ಈ ನಡುವೆ ಎಸ್‌ಐಟಿ ತನಿಖೆಯನ್ನು ಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದೆ. ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿ ನೀಡಲಾಗಿದೆ.

ಭಾರತದಲ್ಲಿ ಪ್ರಥಮ ಬಾರಿಗೆ ಈ ತಂತ್ರಜ್ಞಾನ ಬಳಕೆ

"ಅನಾಟೋಮಿಕಲ್ ಕಾಂಪಾರಿಷನ್ ಆಫ್ ಜನಿಟಲ್ ಫೀಚರ್ಸ್" ಎಂಬ ತಂತ್ರಜ್ಞಾನವನ್ನು ಬಳಸಿಕೊಂಡು ಆರೋಪಿಯ ಗುರುತು ದೃಢೀಕರಿಸಲಾಗಿದೆ. ಈ ತಂತ್ರಜ್ಞಾನವು ಮೊದಲು ಟರ್ಕಿಯಲ್ಲಿ ಬಳಸಲ್ಪಟ್ಟಿದ್ದು, ಭಾರತದಲ್ಲಿ ಪ್ರಥಮ ಬಾರಿಗೆ ಈ ಪ್ರಕರಣದಲ್ಲಿ ಉಪಯೋಗಿಸಲಾಯಿತು.

ಈ ತಂತ್ರಜ್ಞಾನ ಜನನೇಂದ್ರಿಯದ ಭೌತಿಕ ಲಕ್ಷಣಗಳ ಆಧಾರದ ಮೇಲೆ ವ್ಯಕ್ತಿಯ ಗುರುತನ್ನು ಪತ್ತೆಹಚ್ಚಲು ನೆರವಾಗುತ್ತದೆ. ಪ್ರತಿಯೊಬ್ಬರ ಜನನೇಂದ್ರಿಯದ ಆಕಾರ ಮತ್ತು ವೈಶಿಷ್ಟ್ಯಗಳು ವಿಭಿನ್ನವಾಗಿರುವುದರಿಂದ, ಇದನ್ನು ಫಿಂಗರ್‌ಪ್ರಿಂಟ್ ಮಾದರಿಯಂತೆಯೇ ವೈಯಕ್ತಿಕ ಗುರುತಿನ ಸೂಚಿಯಾಗಿ ಬಳಸಲಾಗುತ್ತದೆ.

ವೈರಲ್ ವಿಡಿಯೋದಿಂದ ಸ್ಕ್ರೀನ್‌ಶಾಟ್ ತೆಗೆದು, ಅದನ್ನು ಹೈ ರೆಸೊಲ್ಯೂಷನ್ ಗೆ ಪರಿವರ್ತನೆ ಮಾಡಲಾಗುತ್ತದೆ. ನಂತರ ಆರೋಪಿಯ ಖಾಸಗಿ ಅಂಗ, ಸೊಂಟ ಹಾಗೂ ಕೈಗಳ ಫೋಟೋಗಳನ್ನು ವೈದ್ಯಕೀಯ ಪ್ರಕ್ರಿಯೆ ಅನುಸಾರವಾಗಿ ತೆಗೆಯಲಾಗುತ್ತದೆ.

ಈ ಚಿತ್ರಗಳನ್ನು ಚರ್ಮ ತಜ್ಞರು, ಮೂತ್ರಶಾಸ್ತ್ರ ವಿಜ್ಞಾನಿಗಳು ಹಾಗೂ ನ್ಯಾಯ ವೈದ್ಯಕೀಯ ಪರಿಣತರು ಪರಿಶೀಲನೆ ನಡೆಸುತ್ತಾರೆ. ವೀಡಿಯೋದಲ್ಲಿನ ಚಿತ್ರ ಮತ್ತು ಪ್ರತಿದರ್ಶಿಯ ಚಿತ್ರಗಳ ನಡುವಿನ ಸಾದೃಶ್ಯ ಕಂಡುಬಂದರೆ, ಅದೇ ವ್ಯಕ್ತಿ ಎಂದು ನಿರ್ಧಾರಗೊಳ್ಳುತ್ತದೆ.

ಅದರಲ್ಲೂ, ಯಾವುದೇ ಒಂದು ಅಂಗದರೂ ಸಾದೃಶ್ಯ ಕಂಡುಬಂದರೆ, ಆರೋಪಿ ಗುರುತಿಸಲು ಇದು ಪೂರಕ ಸಾಕ್ಷಿಯಾಗಿ ಸಾಬೀತಾಗುತ್ತದೆ. ಈ ತಂತ್ರಜ್ಞಾನವನ್ನು ಎಸ್‌ಐಟಿ ತನಿಖೆ ವೇಳೆ ಉಪಯೋಗಿಸಿ, ವಿಡಿಯೋ ವಿಶ್ಲೇಷಣೆ ಮೂಲಕ ಪ್ರಜ್ವಲ್ ರೇವಣ್ಣನೆಂಬುದು ಖಚಿತಪಡಿಸಲಾಗಿದೆ.

ಎಸ್ಐಟಿ ತನಿಖೆಗೆ ಕೋರ್ಟ್ ಶ್ಲಾಘನೆ

ಮಹಿಳೆಯರ ಘನತೆಗೆ ಧಕ್ಕೆಯಾಗುವ ರೀತಿಯ ಅಶ್ಲೀಲ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದಲ್ಲಿ ಮಹಿಳೆಯರ ಕುರಿತಾಗಿ ವೈರಲ್ ಆದ ವಿಡಿಯೋ ಮತ್ತು ಫೋಟೋಗಳ ಮೂಲ (ಔಥೆಂಟಿಕ್) ದಾಖಲೆಗಳು ಲಭ್ಯವಿರಲಿಲ್ಲ. ಆದರೂ, ಈ ಕುರಿತು ಎಸ್‌ಐಟಿ (ವಿಶೇಷ ತನಿಖಾ ತಂಡ) ಅತ್ಯಂತ ಆಧುನಿಕ ತಂತ್ರಜ್ಞಾನ, ಡಿಜಿಟಲ್ ಎವಿಡೆನ್ಸ್ ಮತ್ತು ಫಾರೆನ್ಸಿಕ್ ತಜ್ಞರ ಸಹಾಯದಿಂದ ತಾಂತ್ರಿಕ ಸಾಕ್ಷ್ಯಗಳು ಸಂಗ್ರಹಿಸುವ ಮೂಲಕ ಉನ್ನತ ಮಟ್ಟದ ತನಿಖೆ ನಡೆಸಿತು.

ಕೋರ್ಟ್, ಎಸ್‌ಐಟಿಯ ಈ ವಿಧಾನವನ್ನು ವೈಜ್ಞಾನಿಕ ಮತ್ತು ತಾಂತ್ರಿಕ ಶಿಸ್ತಿನೊಂದಿಗೆ ನಡೆದ ತನಿಖೆಯಾಗಿ ಶ್ಲಾಘಿಸಿದೆ. ಇವರ ಪರಿಶ್ರಮದ ಫಲವಾಗಿ ತನಿಖೆಯಲ್ಲಿ ಬಹುಮುಖ್ಯ ಸಾಕ್ಷ್ಯಗಳು ಹೊರಬಂದವು. ಸರ್ಕಾರಿ ವಕೀಲರಾದ ಎಸ್‌ಪಿಪಿ ಅಶೋಕ್ ನಾಯಕ್ ಹಾಗೂ ಬಿ.ಎನ್. ಜಗದೀಶ್ ಅವರು, ಇವುಗಳನ್ನು ಆಧಾರವನ್ನಾಗಿ ಮಾಡಿಕೊಂಡು ನ್ಯಾಯಾಲಯದಲ್ಲಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿದರು. ಅವರ ವಾದಗಳು ಕೋರ್ಟ್‌ನ ಗಮನ ಸೆಳೆದವು ಹಾಗೂ ಮನವರಿಕೆ ಆಗುವಂತೆ ಇತ್ತು, ಐತಿಹಾಸಿಕ ತೀರ್ಪಿಗೆ ಪ್ರಮುಖ ಕಾರಣವಾಯಿತು.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆದ ಈ ವಿಚಾರಣೆಯಲ್ಲಿ ನ್ಯಾ. ಸಂತೋಷ್ ಗಜಾನನ ಭಟ್ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ 480 ಪುಟಗಳ ತೀರ್ಪು ಬರೆದಿದ್ದಾರೆ, ಇದು ಪ್ರಕರಣದ ಗಂಭೀರತೆ ಮತ್ತು ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಈ ತೀರ್ಪು ನ್ಯಾಯದ ಪರವಾಗಿ ನಡೆದ ಮಹತ್ವದ ಬೆಳವಣಿಗೆಯಾಗಿದ್ದು, ಸರ್ಕಾರ ಹಾಗೂ ಸಾರ್ವಜನಿಕರಿಂದ ಪ್ರಶಂಸೆಗೆ ಪಾತ್ರವಾಗಿದೆ.