ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪಿಗೆ ಕಾಂಗ್ರೆಸ್ ವಕ್ತಾರೆ ನಜ್ಮಾ ನಜೀನ್ ಚಿಕ್ಕನೇರಳೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರದ ಮದದಿಂದ ತೂರಾಡುವವರಿಗೆ ಈ ಶಿಕ್ಷೆ ಪಾಠವಾಗಲಿ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಅತ್ಯಾ*ಚಾರ ಪ್ರಕರಣದಲ್ಲಿ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಕುರಿತು ಕಾಂಗ್ರೆಸ್ ವಕ್ತಾರೆ ನಜ್ಮಾ ನಜೀನ್ ಚಿಕ್ಕನೇರಳೆ ಪ್ರತಿಕ್ರಿಯಿಸಿದ್ದಾರೆ. ಮಹಿಳೆಯರ ಮೇಲಿನ ದೌರ್ಜ*ನ್ಯ ಖಂಡಿಸಿ ನಜ್ಮಾ ನಜೀರ್ ಪ್ರತಿಭಟನೆ ನಡೆಸಿದ್ದರು. ಇದೀಗ ತೀರ್ಪಿನ ಕುರಿತು ತಮ್ಮ ಅಭಿಪ್ರಾಯವನ್ನು ಫೇಸ್‌ಬುಕ್‌ನಲ್ಲಿ ವ್ಯಕ್ತಪಡಿಸಿದ್ದಾರೆ.
ಅಧಿಕಾರದ ಮದದಿಂದ ತೂರಾಡುವವರಿಗೆ ಈ ಶಿಕ್ಷೆ ಪಾಠವಾಗಲಿ.
ಹೆಣ್ಣೆಂದರೆ ಭೋಗದ ವಸ್ತುವೆಂದು ಕಾಣುವ ಅಧಿಕಾರದ ಮದದಿಂದ ತೂರಾಡುವವರಿಗೆ ಈ ಶಿಕ್ಷೆ ಪಾಠವಾಗಲಿ. ಇವನಿಗೆ ಸಿಕ್ಕ ಶಿಕ್ಷೆಯಿಂದಾದರು ಕಾಮುಕರು ನಿರ್ಣಾಮವಾಗಲಿ ವಿಶೇಷವಾಗಿ ರಾಜಕೀಯ ವಲಯದಲ್ಲಿ ಎಂದು ನಜ್ಮಾ ನಜೀರ್ ಬರೆದುಕೊಂಡಿದ್ದಾರೆ. ಹಾಗೆ ಮಾಧ್ಯಮವೊಂದರ ಲೇಖನದ ಸ್ಕ್ರೀನ್‌ಶಾಟ್ ಸಹ ತಮ್ಮ ಖಾತೆಯಲ್ಲಿ ಕಾಂಗ್ರೆಸ್ ವಕ್ತಾರೆ ಹಂಚಿಕೊಂಡಿದ್ದಾರೆ.
ಸಾಮಾಜಿಕ ಹೋರಾಟಗಳ ಮೂಲಕ ಮುನ್ನಲೆಗೆ ಬಂದ ನಜ್ಮಾ ನಜೀರ್ ಚಿಕ್ಕನೇರಳೆ, ಆರಂಭದಲ್ಲಿ ಜೆಡಿಎಸ್ ಜೊತೆ ಗುರುತಿಸಿಕೊಂಡಿದ್ದರು. 2024ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ಧ ಹಾಸನದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿಯೂ ನಜ್ಮಾ ನಜೀರ್ ಭಾಗಿಯಾಗಿ ಮಾಜಿ ಸಂಸದನ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಹಾಗೆ ನೊಂದ ಮಹಿಳೆಯರ ಪರವಾಗಿ ನಜ್ಮಾ ನಜೀರ್ ಧ್ವನಿ ಎತ್ತಿದ್ದರು.
ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆಯ ತೀರ್ಪಿನ ಕುರಿತು ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಲಯದ ತೀರ್ಮಾನವನ್ನು ಎಲ್ಲರೂ ಒಪ್ಪಬೇಕಾಗುತ್ತದೆ. ಈ ಮುಂಚೆಯೂ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂದಿದ್ದೆ. ಭಾರತದ ಕಾನೂನಿನ ಪರಿಮಿತಿಯಲ್ಲಿ ಶಿಕ್ಷೆಯಾಗುತ್ತದೆ. ತನಿಖೆ, ವಿಚಾರಣೆ ಬಳಿಕ ಶಿಕ್ಷೆಯಾಗುತ್ತೆ ಅಂದಿದ್ದೆವು. ತಪ್ಪು ಮಾಡಿರಲಿಲ್ಲವೆಂದರೆ ಶಿಕ್ಷೆಯಾಗೋದಿಲ್ಲ. ಇವತ್ತು ನ್ಯಾಯಾಲಯ ಶಿಕ್ಷೆ ಕೊಟ್ಟಿದೆ. ಅದನ್ನು ನಾವು ಒಪ್ಪಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ: ಕಣ್ಣೀರಿಡುತ್ತಾ ಪರಪ್ಪನ ಅಗ್ರಹಾರ ಜೈಲಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರಜ್ವಲ್ ರೇವಣ್ಣ
ಮುಂದಿನ ಆಯ್ಕೆಗಳು ಅವರವರಿಗೆ ಬಿಟ್ಟಿದ್ದು. ಆದರೆ ನ್ಯಾಯಾಲಯ ತೀರ್ಪು ಕೊಟ್ಟಿದೆ ಎಂದರೆ ನಾವೇನು ಹೇಳೋಕೆ ಇರುತ್ತದೆ. ಸಂಪೂರ್ಣವಾದ ಸಾಕ್ಷಿ, ಆಧಾರದ ಮೇಲೆ ತೀರ್ಪು ನೀಡಿರುತ್ತದೆ. ನಮ್ಮ ದೇಶದಲ್ಲಿ ಮಹಿಳೆಯರನ್ನು ಗೌರವದಿಂದ ನೋಡಲಾಗುತ್ತದೆ. ಇದನ್ನು ಕೂಲಂಕುಷವಾಗಿ ನೋಡಿ ಕೋರ್ಟ್ ತೀರ್ಪು ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ನಟ ಪ್ರಕಾಶ್ ರಾಜ್ ಪ್ರತಿಕ್ರಿಯೆ
“ಪ್ರಜ್ವಲಿಸಲು ಸಹಕರಿಸಿದವರಿಗೆ ಶಿಕ್ಷೆಯಿಲ್ಲವೇ?” ಯುವರ್ ಆನರ್, ಪ್ರಜ್ವಲ್ ಮಾಡಿದ ಅಮಾನುಷ ಅಪರಾಧಗಳಿಗೇನೋ ತಕ್ಕ ಶಿಕ್ಷೆ ಆಗಿದೆ. ಆದರೆ, ಆ ಅಪರಾಧಗಳನ್ನು ಗೊತ್ತಿದ್ದೂ ಮುಚ್ಚಿಟ್ಟ…ಸಂತ್ರಸ್ತರನ್ನು ಹೆದರಿಸಿದ ಸಾಕ್ಷಿ ನಾಶ ಮಾಡಲು ಸಹಕರಿಸಿದ ಹಾಲಿ, ಮಾಜಿಗಳಿಗೆ, ಪ್ರಭಾವಿಗಳಿಗೆ ಶಿಕ್ಷೆಯಿಲ್ಲವೇ ಎಂದು ನಟ ಪ್ರಕಾಶ್ ರಾಜ್ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
