ಅಪರಾಧದಲ್ಲಿ ಗರಿಷ್ಠ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌) ತೀರ್ಪು ರದ್ದುಪಡಿಸಲು ಕೋರಿ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಬೆಂಗಳೂರು (ಸೆ.30): ಮನೆಗೆಲಸದ ಮಹಿಳೆ ಮೇಲೆ ಅತ್ಯಾ*ಚಾರ ಎಸಗಿದ ಅಪರಾಧದಲ್ಲಿ ಗರಿಷ್ಠ ಜೀವಿತಾವಧಿ ಜೈಲು ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಬೆಂಗಳೂರಿನ 81ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌) ತೀರ್ಪು ರದ್ದುಪಡಿಸಲು ಕೋರಿ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ವಿಶೇಷ ನ್ಯಾಯಾಲಯ ಆದೇಶ ಪ್ರಕಟಗೊಂಡು 55 ದಿನಗಳ ನಂತರ ಹೈಕೋರ್ಟ್‌ಗೆ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ವಿಶೇಷ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದ ನಂತರ ಅದನ್ನು ಮೇಲಿನ ಕೋರ್ಟ್‌ಗೆ ಪ್ರಶ್ನಿಸಲು 60 ದಿನಗಳ ಕಾಲಾವಕಾಶದ ಮಿತಿ ಇರುತ್ತದೆ.

ಹೊಳೆನರಸೀಪುರದ ಗನ್ನಿಗಢ ಮತ್ತು ಬೆಂಗಳೂರಿನ ಬನಶಂಕರಿ ಮನೆಯಲ್ಲಿ ಮನೆಗೆಲಸದಾಕೆ ಮೇಲೆ ಪದೇ ಪದೆ ಅತ್ಯಾ*ಚಾರ ಎಸಗಿದ ಅಪರಾಧದಲ್ಲಿ ಪ್ರಜ್ವಲ್‌ ರೇವಣ್ಣ ಅವರನ್ನು ದೋಷಿಯೆಂದು ವಿಶೇಷ ನ್ಯಾಯಾಲಯ ತೀರ್ಮಾನಿಸಿ ಆ.2ರಂದು ಜೀವನ ಪರ್ಯಂತ ಶಿಕ್ಷೆ ವಿಧಿಸಿತ್ತು. ಈ ತೀರ್ಪು ರದ್ದು ಕೋರಿ ಇದೀಗ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿರುವ ಪ್ರಜ್ವಲ್‌, ಸಿಐಡಿಯ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರತಿವಾದಿ ಮಾಡಿದ್ದಾರೆ. ಮೇಲ್ಮನವಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಪ್ರಕರಣದಲ್ಲಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿರುವ ಮತ್ತು ನುಡಿದಿರುವ ಸಾಕ್ಷ್ಯದ ಅಂಶಗಳು ಪರಸ್ಪರ ವಿರುದ್ಧವಾಗಿವೆ. ಘಟನೆ ಬಗ್ಗೆ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೊಲೀಸರು ಗನ್ನಿಗಢದ ತೋಟದ ಮನೆಗೆ ಬಂದಿದ್ದರು. ಅವರನ್ನು ನೋಡಿ ಸಂತ್ರಸ್ತೆ ಭೀತಿಗೊಂಡು ಅಲ್ಲಿಂದ ಪರಾರಿಯಾಗಿದ್ದರು. ಬಳಿಕ ಪೊಲೀಸರು ಆಕೆಯನ್ನು ಎಸ್‌ಐಟಿಯ ಬೆಂಗಳೂರು ಕಚೇರಿಗೆ ಕರೆದೊಯ್ದು, ದೂರು ದಾಖಲಿಸಲು ಕೋರಿದ್ದರು ಎಂದು ತಿಳಿಸಲಾಗಿದೆ. ಅ ಪ್ರಕಾರ ನೋಡುವುದಾದರೆ ಪೊಲೀಸರು ಸಂತ್ರಸ್ತೆಯನ್ನು ಹಿಂಬಾಲಿಸಿ, ಆಕೆಯಿಂದ ಬಲವಂತದಿಂದ ದೂರು ಪಡೆದಿದ್ದಾರೆ ಎಂಬ ಅಂಶ ಸ್ಪಷ್ಟವಾಗುತ್ತದೆ ಎಂದು ಪ್ರಜ್ವಲ್‌ ಮೇಲ್ಮನವಿಯಲ್ಲಿ ಆಕ್ಷೇಪಿಸಿದ್ದಾರೆ.

2021ರ ಜ.1ರಿಂದ 2022ರ ಜ.31ರವರೆಗೆ ಆರೋಪಿಸಲಾಗಿರುವ ಘಟನೆ ನಡೆದಿದೆ ಎಂದು ಹೇಳಲಾಗಿದೆ. 2024ರ ಮೇ 10ರಂದು ಸಂತ್ರಸ್ತೆ ಪೊಲೀಸರನ್ನು ಬಸವನಗುಡಿಯಲ್ಲಿ ಅತ್ಯಾ*ಚಾರ ಎಸಗಿದ್ದ ಸ್ಥಳಕ್ಕೆ ಕರೆದೊಯ್ದಿದ್ದರು. ಇಲ್ಲಿ ಕೃತ್ಯ ನಡೆದ ಹಾಸಿಗೆ ಮತ್ತು ಮಂಚವನ್ನು ಆಕೆ ತೋರಿಸಿದ್ದರು. ಪ್ರಾಸಿಕ್ಯೂಷನ್‌ನ 6ನೇ ಸಾಕ್ಷಿಯಾದ ಲಿಂಗನಮೂರ್ತಿ ಅವರು ಹಾಸಿಗೆಯಲ್ಲಿ ಕೆಲ ಕಲೆಗಳು ಪತ್ತೆಯಾಗಿದ್ದವು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಆದರೆ, ಘಟನೆ ನಡೆದು ಮೂರು ವರ್ಷಗಳಾದರೂ ಹಾಸಿಗೆ ಮೇಲಿನ ಬಟ್ಟೆ ತೊಳೆಯದಿರಲು ಹೇಗೆ ಸಾಧ್ಯ ಎಂಬ ಸಂಶಯ ವಿಶೇಷ ನ್ಯಾಯಾಲಯಕ್ಕೆ ಬಂದಿಲ್ಲ ಎಂದು ಆಕ್ಷೇಪಿಸಲಾಗಿದೆ.

ವೀರ್ಯದ ಕಲೆ ಪತ್ತೆ

2024ರ ಮೇ 28ರಂದು ಗನ್ನಿಗಢದ ಫಾರ್ಮ್‌ ಹೌಸ್‌ನಲ್ಲಿ ಕೆಲಸದವರು ಉಳಿಯಲು ನಿರ್ಮಿಸಲಾಗಿದ್ದ ಮನೆಯಲ್ಲಿ ಕೆಲ ಉಡುಪು ಮತ್ತು ತಲೆಗೂದಲನ್ನು ಪತ್ತೆ ಮಾಡಿದ್ದಾಗಿ ತನಿಖಾಧಿಕಾರಿ ತಿಳಿಸಿದ್ದಾರೆ. ಆದರೆ, ಸಂತ್ರಸ್ತೆ ತನಿಖಾಧಿಕಾರಿಯನ್ನು ಅಲ್ಲಿಗೆ ಕರೆದೊಯ್ದಿಲ್ಲ, ಸಂತ್ರಸ್ತೆಯ ಗೈರಿನಲ್ಲಿ ತನಿಖಾಧಿಕಾರಿ ಉಡುಪು ಮತ್ತು ತಲೆಗೂದಲನ್ನು ಜಪ್ತಿ ಮಾಡಿದ್ದಾರೆ. ಇದು ಗಂಭೀರ ಲೋಪ. ಬಟ್ಟೆಯಲ್ಲಿ ವೀರ್ಯದ ಕಲೆ ಪತ್ತೆಯಾಗಿದೆ ಎಂದು ಹೇಳಲಾಗಿದೆ. ಸಂತ್ರಸ್ತೆ 2022ರಲ್ಲಿ ಕೆಲಸ ತೊರೆದಿದ್ದು, ಎಲ್ಲ ಕೊಠಡಿಗಳಿಗೆ ಬೀಗ ಹಾಕಲಾಗಿತ್ತು ಎಂದು 8ನೇ ಸಾಕ್ಷಿ ಹೇಳಿದ್ದಾರೆ. ಮೂರು ವರ್ಷಗಳಿಂದ ಬೀಗ ಹಾಕಿದ್ದ ಕೊಠಡಿಯಲ್ಲಿ ವೀರ್ಯದ ಕಲೆ ಮತ್ತು ತಲೆಗೂದಲು ಪತ್ತೆಯಾಗುವುದಾದರೂ ಹೇಗೆ ಎಂದು ಪ್ರಶ್ನಿಸಿರುವ ಪ್ರಜ್ವಲ್‌, ವಿಶೇಷ ನ್ಯಾಯಾಲಯದ ತೀರ್ಪು ದೋಷಪೂರಿತವಾಗಿದೆ. ಅದನ್ನು ರದ್ದುಪಡಿಸಬೇಕು ಎಂದು ಕೋರಿದ್ದಾರೆ.

ಪ್ರಜ್ವಲ್‌ಗೆ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 376(2)(ಎನ್‌) ಅಡಿ ಪದೇ ಪದೆ ಅತ್ಯಾ*ಚಾರ ಅಪರಾಧಕ್ಕೆ ಜೀವಿತಾವಧಿ ಜೈಲು ಶಿಕ್ಷೆ ಮತ್ತು 5 ಲಕ್ಷ ದಂಡ, 376(2)(ಕೆ) ಅಡಿ ಪ್ರಬಲವಾದ ಸ್ಥಾನದಲ್ಲಿರುವ ವ್ಯಕ್ತಿಯಿಂದ ಅತ್ಯಾ*ಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆ, 5 ಲಕ್ಷ ರು. ದಂಡವನ್ನು ವಿಶೇಷ ನ್ಯಾಯಾಲಯ ವಿಧಿಸಿತ್ತು. ಅಲ್ಲದೆ, ಸೆಕ್ಷನ್‌ 354(ಬಿ) ಅಡಿ (ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಅಡಿ ಅಪರಾಧಕ್ಕೆ 7 ವರ್ಷ ಶಿಕ್ಷೆ, 50 ಸಾವಿರ ರು. ಸೆಕ್ಷನ್‌ 354-ಎ ಅಡಿ ಮಹಿಳೆಯ ಘನತೆಗೆ ಚ್ಯುತಿ ತಂದ ಅಪರಾಧದಡಿ ಅಪರಾಧಕ್ಕೆ 3 ವರ್ಷ ಜೈಲು 25 ಸಾವಿರ ದಂಡ, ಸೆಕ್ಷನ್ 354(ಸಿ) ಅಡಿ ವಿವಸ್ತ್ರಗೊಂಡಾಗ ವಿಡಿಯೋ ಚಿತ್ರೀಕರಣಗೊಳಿಸಿದ ಅಪರಾಧಕ್ಕೆ 3 ವರ್ಷ ಜೈಲು, 25 ಸಾವಿರ ರು. ದಂಡ, ಸೆಕ್ಷನ್‌ 201 ಅಡಿ ಸಾಕ್ಷಿ ನಾಶಕ್ಕೆ 3 ವರ್ಷ ಶಿಕ್ಷೆ, 25 ಸಾವಿರ ರು, ಮಾಹಿತಿ ತಂತ್ರಜ್ಞಾನ ಕಾಯ್ದೆ ಸೆಕ್ಷನ್‌ 66ಇ ಅಡಿ ಖಾಸಗಿತನ ಉಲ್ಲಂಘಿಸಿ ವಿಡಿಯೋ ಮಾಡಿ, ಪ್ರಸಾರ ಮಾಡಿದ ಅಪರಾಧಕ್ಕೆ 3 ವರ್ಷ ಶಿಕ್ಷೆ, 25 ಸಾವಿರ ರು. ದಂಡ, ಸೆಕ್ಷನ್‌ 506 ಅಡಿ ಕ್ರಿಮಿನಲ್‌ ಬೆದರಿಕೆ ಅಪರಾಧಕ್ಕೆ 2 ವರ್ಷ ಶಿಕ್ಷೆ ಹಾಗೂ 10 ಸಾವಿರ ರು. ದಂಡ ವಿಧಿಸಿತ್ತು.