ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯದ ತೀರ್ಪನ್ನು ಗೃಹ ಸಚಿವ ಪರಮೇಶ್ವರ್ 'ಐತಿಹಾಸಿಕ' ಎಂದು ಬಣ್ಣಿಸಿದ್ದಾರೆ. ಎಸ್‌ಐಟಿ ತಂಡ,ಕರ್ನಾಟಕ ಪೊಲೀಸರ ತನಿಖೆಯನ್ನು ಶ್ಲಾಘಿಸಿ ಇದು ನ್ಯಾಯ, ಸತ್ಯದ ಗೆಲುವು ಎಂದಿದ್ದಾರೆ. ತನಿಖಾ ತಂಡಕ್ಕೆ ಮುಖ್ಯಮಂತ್ರಿ ಪದಕ ನೀಡುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು: ಹಾಸನ ಮಾಜಿ ಸಂಸದ ಅತ್ಯಾ1ಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ನ್ಯಾಯಾಲಯವು ನೀಡಿದ ಜೀವಾವಧಿ ಶಿಕ್ಷೆ ತೀರ್ಪು ಐತಿಹಾಸಿಕವಾಗಿದ್ದು, ಈ ಪ್ರಕರಣದಲ್ಲಿ ಮೊದಲಿನಿಂದಲೂ ಅಚ್ಚುಕಟ್ಟಾಗಿ ತನಿಖೆ ನಡೆಸಿದ ಕರ್ನಾಟಕ ಪೊಲೀಸರು ಹಾಗೂ ಎಸ್‌ಐಟಿ ತಂಡ ಶ್ಲಾಘನೀಯ ಕೆಲಸ ಮಾಡಿದ್ದಾರೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ವಿಶೇಷ ತನಿಖಾ ತಂಡವು (ಎಸ್‌ಐಟಿ) ಆರಂಭದಿಂದಲೇ ಚುರುಕಾಾಗಿ ತನಿಖೆ ನಡೆಸಿದ್ದು, ಎಲ್ಲಾ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿತು. ಪರಿಣಾಮವಾಗಿ ಈ ತೀರ್ಪು ಸಮ್ಮುಖವಾಗಿದೆ. ನಾನು ಪ್ರಥಮವಾಗಿ ಎಸ್‌ಐಟಿ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಇದು ನಮ್ಮ ಪೊಲೀಸ್ ಇಲಾಖೆಗೆ ಕೀರ್ತಿ ತಂದುಕೊಟ್ಟಿದೆ ಎಂದು ಹೇಳಿದರು.

ನಮ್ಮ ಎಸ್ಐಟಿ ಎಲ್ಲ ದಾಖಲೆ ಕೊಟ್ಟಿತ್ತು. ಈ ಪ್ರಕರಣದ ತನಿಖೆ ನಮ್ಮ ಪೊಲೀಸ್ ಇಲಾಖೆ ಕೀರ್ತಿ ತಂದಿದೆ. ಶೀಘ್ರವಾಗಿ ತನಿಖೆ ಮುಗಿಸಿದ್ದಾರೆ, ಅಭಿನಂದನೆಗಳು, ಪ್ರಜ್ವಲ್ ಪ್ರಕರಣವನ್ನು ರಾಜಕೀಯ ದೃಷ್ಟಿಯಿಂದ ನೋಡಲೇಬಾರದು. ಪೊಲೀಸರ ಶ್ರಮಕ್ಕೆ ಸರ್ಕಾರ ಪ್ರಶಂಸೆ ಮಾಡುತ್ತೆ. ತನಿಖೆ ನಡೆಸಿದ ಎಸ್ಐಟಿ ತಂಡದವರಿಗೆ ಮುಖ್ಯಮಂತ್ರಿ ಪದಕ ಕೊಡ್ತೇವೆ. ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡ್ತೇವೆ ಎಂದು ತಿಳಿಸಿದ್ದಾರೆ.