ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸರ್ಕಾರದ ಪರ ವಕೀಲರು ಜಾಮೀನು ಅರ್ಜಿಯನ್ನು ವಜಾಗೊಳಿಸಲು ಮನವಿ ಮಾಡಿದ್ದಾರೆ. ವಿಚಾರಣಾಧೀನ ನ್ಯಾಯಾಲಯಕ್ಕೆ ಮೊದಲು ಅರ್ಜಿ ಸಲ್ಲಿಸಬೇಕಿತ್ತು ಎಂದು ವಾದಿಸಿದ್ದಾರೆ.

ತನ್ನ ಮೇಲಿನ ಹಲವು ಪ್ರಕರಣಗಳ ಬಗ್ಗೆ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿ ಕುರಿತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ಪೀಠದಲ್ಲಿ ಪ್ರಕರಣದ ವಿಚಾರಣೆ ನಡೆದಿದ್ದು, ಸರ್ಕಾರದ ಪರವಾಗಿ ಎಸ್ಪಿಪಿ ಪ್ರೊ. ರವಿವರ್ಮ ಕುಮಾರ್ ವಾದ ಆರಂಭಿಸಿ, ಪ್ರಜ್ವಲ್ ರೇವಣ್ಣ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಲು ಮನವಿ ಮಾಡಿದರು.

ವಿಚಾರಣಾಧೀನ ಕೈದಿಗಳು ಮೊದಲು ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಬೇಕು ಎಂದು ಎಸ್ಪಿಪಿ ತಿಳಿಸಿದರು. ಆದರೆ, ಪ್ರಜ್ವಲ್ ರೇವಣ್ಣ ನೇರವಾಗಿ ಹೈಕೋರ್ಟ್‌ಗೆ ಬಂದಿರುವುದಕ್ಕೆ ಅವರು ಪ್ರಶ್ನೆ ಮಾಡಿದರು. “ವಿಚಾರಣಾಧೀನ ಕೈದಿಗಳು ಮೊದಲು ವಿಚಾರಣಾಧೀನ ನ್ಯಾಯಾಲಯಕ್ಕೆ ಜಾಮೀನಿಗೆ ಹೋಗ್ಬೇಕು‌‌. ಇಲ್ಲಿ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಯಾವುದೇ ವಿಶೇಷ ಆಧಾರವಿದೆಯೆ? ಹೈಕೋರ್ಟ್ ಅಂತಹ ಅರ್ಜಿ ಪರಿಗಣಿಸಬಾರದು,” ಎಂದು ಅವರು ವಾದಿಸಿದರು. ಈ ಕುರಿತಂತೆ ಹೈಕೋರ್ಟ್‌ಗಿಂತಲೇ ಸಮಗ್ರ ತೀರ್ಪುಗಳಿವೆ ಎಂದು ಎಸ್ಪಿಪಿ ವಿವರಿಸಿದರು.

ಇದಕ್ಕೆ ಪೀಠವು, “ಪರಿಸ್ಥಿತಿ ಬದಲಾಗಿದೆ ಎಂಬುದನ್ನು ತೋರಿಸಲು ಅರ್ಜಿದಾರರು ವಿಚಾರಣಾಧೀನ ನ್ಯಾಯಾಲಯಕ್ಕೆ ತೆರಳಬೇಕೆ?” ಎಂದು ಪ್ರಶ್ನಿಸಿತು. “ಪರಿಸ್ಥಿತಿ ಬದಲಾಗಿರುವುದೆಂದು ಹೇಳಿದರೆ ಮಾತ್ರ ಜಾಮೀನು ಕೊಡಬೇಕೆಂಬ ಅರ್ಥವಿಲ್ಲ. ಪ್ರಜ್ವಲ್ ರೇವಣ್ಣ ಅವರ ನಡೆ ಹಾಗೂ ಇತಿಹಾಸವನ್ನು ನೋಡಿದರೆ, ಅವರ ಅರ್ಜಿ ಬಲವಾಗಿಲ್ಲ. ಪ್ರಕರಣ ದಾಖಲಾಗುತ್ತಿದ್ದಂತೆಯೇ ಅವರು ದೇಶ ಬಿಟ್ಟು ಹೋಗಿದ್ದರು. ಇಲ್ಲಿ ಯಾವುದೇ ವಿಳಂಬದ ವಿಚಾರವಿಲ್ಲ,” ಎಂದು ಎಸ್ಪಿಪಿ ತಮ್ಮ ವಾದವನ್ನು ಮುಂದುವರಿಸಿದರು. ಪ್ರಕರಣದ ವಿಚಾರಣೆ ವಿಳಂಬವಾಗಲು ಪ್ರಜ್ವಲ್ ರೇವಣ್ಣ ಕಾರಣರಾಗಿದ್ದಾರೆ ಎಂದು ಎಸ್ಪಿಪಿ ಪ್ರೊ.ರವಿವರ್ಮ ಕುಮಾರ್ ಆರೋಪಿಸಿದರು. ವಕೀಲರ ಮನವಿಯಂತೆ, ವಿಚಾರಣೆಯನ್ನು ಮುಂದೂಡಲು ಹೈಕೋರ್ಟ್ ಒಪ್ಪಿಗೆ ನೀಡಿದ್ದು, ಮುಂದಿನ ವಿಚಾರಣೆ ಜುಲೈ 2ಕ್ಕೆ ನಿಗದಿಯಾಗಿದೆ.