ಮನೆಕೆಲಸದಾಕೆ ಮೇಲಿನ ಅತ್ಯಾ ಚಾರ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಬಹುದು ಎಂದು ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ.

ಬೆಂಗಳೂರು (ಜೂ.21): ಮನೆಕೆಲಸದಾಕೆ ಮೇಲಿನ ಅತ್ಯಾ ಚಾರ ಪ್ರಕರಣ ಸಂಬಂಧ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಬಹುದು ಎಂದು ಹೈಕೋರ್ಟ್‌ ಶುಕ್ರವಾರ ಸ್ಪಷ್ಟಪಡಿಸಿದೆ. ಮನೆಕೆಲಸದಾಕೆ ಮೇಲಿನ ಅತ್ಯಾ ಚಾರ ಆರೋಪ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌, ಆರೋಪ ಪಟ್ಟಿ ರದ್ದುಪಡಿಸಬೇಕು ಎಂದು ಜೆಡಿಎಸ್‌ ಶಾಸಕ ಹಾಗೂ ಪ್ರಜ್ವಲ್‌ ತಂದೆ ಎಚ್‌.ಡಿ.ರೇವಣ್ಣ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ಸಂದರ್ಭದಲ್ಲಿ ರೇವಣ್ಣ ಪರ ಹಿರಿಯ ವಕೀಲರು, ರೇವಣ್ಣ ಅವರಿಗೆ ಸೀಮಿತವಾಗಿ ವಿಶೇಷ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದೆ. ಪ್ರಜ್ವಲ್‌ ವಿರುದ್ಧ ವಿಚಾರಣೆ ಮುಂದುವರಿಸಲು ಯಾವುದೇ ಅಡ್ಡಿಯಿಲ್ಲ ಎಂದು ತಿಳಿಸಿದರು. ಅದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ ಪ್ರೊ. ರವಿವರ್ಮ ಕುಮಾರ್‌ ಧ್ವನಿಗೂಡಿಸಿದರು.

ಅದನ್ನು ಪರಿಗಣಿಸಿದ ನ್ಯಾಯಪೀಠ, ರೇವಣ್ಣ ವಿರುದ್ಧ ಮಾತ್ರ ವಿಶೇಷ ನ್ಯಾಯಾಲಯದ ವಿಚಾರಣೆಗೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ಅದರಂತೆ ಪ್ರಜ್ವಲ್‌ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ವಿಚಾರಣೆ ಮುಂದುವರಿಸಬಹುದು ಎಂದು ಸ್ಪಷ್ಟಪಡಿಸಿ ವಿಚಾರಣೆಯನ್ನು ಜು.4ಕ್ಕೆ ಮುಂದೂಡಿತು. ಇದೇ ವೇಳೆ ಪ್ರಕರಣದಲ್ಲಿ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಮತ್ತೊಂದು ಅರ್ಜಿ ವಿಚಾರಣೆಯನ್ನು ಜೂ.24ಕ್ಕೆ ಮುಂದೂಡಿತು.

ಮನೆಕೆಲಸದಾಕೆ ವಿರುದ್ಧ ಅತ್ಯಾ ಚಾರ ನಡೆಸಿದ ಆರೋಪ ಸಂಬಂಧ ಪ್ರಜ್ವಲ್‌ ಮತ್ತು ರೇವಣ್ಣ ವಿರುದ್ಧದ ಹಾಸನದ ಹೊಳೆನರಸೀಪುರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ಪ್ರತ್ಯೇಕ ಆರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ದೊರೆತಿದೆ. ಅವರ ವಿರುದ್ಧದ ವಿಶೇಷ ನ್ಯಾಯಾಲಯದ ಪ್ರಕ್ರಿಯೆಗೆ ಹೈಕೋರ್ಟ್‌ ತಡೆ ನೀಡಿದೆ. ಇದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್‌ ಜಾಮೀನು ಕೋರಿದ್ದಾರೆ.