ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾ*ಚಾರ ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಲಾಗಿದೆ. ಐದು ವರ್ಷಗಳ ಹಿಂದಿನ ಘಟನೆಗೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ಸಿಲುಕಿದ್ದಾರೆ ಎಂದು ವಕೀಲರು ವಾದಿಸಿದರು. ಸರ್ಕಾರಿ ವಕೀಲರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೋರಿದರು.
ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ಅತ್ಯಾ*ಚಾರ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾ. ಎಸ್.ಆರ್. ಕೃಷ್ಣಕುಮಾರ್ ಅವರ ಪೀಠದ ಮುಂದೆ ನಡೆಯಿತು. ಪ್ರಜ್ವಲ್ ರೇವಣ್ಣ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಪ್ರಭುಲಿಂಗ ನಾವದಗಿ ಮೊದಲಿಗೆ ಲೈಂಗಿಕ ಕಿರುಕುಳ ಆರೋಪ ಮಾಡಲಾಗಿದ್ದು, ನಂತರ ಅತ್ಯಾ*ಚಾರದ ಆರೋಪ ದಾಖಲಿಸಲಾಗಿದೆ. ಐದು ವರ್ಷದ ಹಿಂದೆ ನಡೆದ ಘಟನೆ ಸಂಬಂಧಿತವಾಗಿದ್ದು, ಅದರಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಸಿಲುಕಿಸಲಾಗಿದೆಯೆಂದು ಹೇಳಿದರು.
ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರ ತಂದೆ ಶಾಸಕ ರೇವಣ್ಣ ಮೊದಲ ಆರೋಪಿ ಆಗಿದ್ದು, ಪ್ರಜ್ವಲ್ ದ್ವಿತೀಯ ಆರೋಪಿಯಾಗಿದ್ದಾರೆ. ಒಂದು ಪ್ರಕರಣದಲ್ಲಿ ಅವರನ್ನು ತನಿಖಾ ಸಂಸ್ಥೆ ಈಗಾಗಲೇ ವಶಕ್ಕೆ ಪಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 158 ಮಂದಿ ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಹೀಗಾಗಿ ಪ್ರಕರಣವು ಶೀಘ್ರದಲ್ಲಿ ಮುಗಿಯುವ ಸಾಧ್ಯತೆ ಇಲ್ಲ ಎಂದು ನಾವದಗಿ ವಾದಿಸಿದರು.
ಪ್ರತ್ಯುತ್ತರವಾಗಿ, ವಿಶೇಷ ಸರ್ಕಾರಿ ವಕೀಲ (ಎಸ್‌ಪಿಪಿ) ಜಗದೀಶ್ ಅವರು, ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಇವರಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಜೊತೆಗೆ ತಮಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕೆಂದು ಮನವಿ ಮಾಡಿದರು. ಇದನ್ನು ಗಮನಿಸಿದ ಹೈಕೋರ್ಟ್, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿ ಮುಂದಿನ ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿದೆ.
ಪ್ರಜ್ವಲ್ ರೇವಣ್ಣ ಅವರು ಜರ್ಮನಿಯಿಂದ ಮರಳಿದ ನಂತರ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಮೇ 31 ರಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇವಣ್ಣ ವಿರುದ್ಧ ಐಪಿಸಿ ಸೆಕ್ಷನ್ 354 ಮತ್ತು 354 (ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೆ, ಪ್ರಜ್ವಲ್ ವಿರುದ್ಧ IPCಯ ಸೆಕ್ಷನ್ 376, 376 (2) (ಕೆ), 354, 354 (ಎ) ಮತ್ತು 354 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪ್ರಜ್ವಲ್ ರೇವಣ್ಣ ಮೇಲೆ ಅತ್ಯಾ*ಚಾರ, ಅಶ್ಲೀಲ ವಿಡಿಯೋ ಸೇರಿದಂತೆ ಒಟ್ಟು 4 ಪ್ರಕರಣಗಳಿವೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಏಪ್ರಿಲ್ 27 ರಂದು, ಕರ್ನಾಟಕ ಸರ್ಕಾರವು ಆರೋಪಗಳ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ಸ್ಥಾಪಿಸಿತು. ರೇವಣ್ಣ ತನ್ನ ರಾಜತಾಂತ್ರಿಕ ಪಾಸ್‌ಪೋರ್ಟ್ ಬಳಸಿ ಜರ್ಮನಿಗೆ ಪಲಾಯನ ಮಾಡಿದರು. ಏಪ್ರಿಲ್ 30 ರಂದು, ಪ್ರಜ್ವಲ್ ಅವರನ್ನು ಪಕ್ಷವು ಅಮಾನತುಗೊಳಿಸಿತು. ಎಸ್‌ಐಟಿ ಪ್ರಜ್ವಲ್ ನನ್ನು ಪತ್ತೆಹಚ್ಚಲು ಇಂಟರ್‌ಪೋಲ್‌ನ ಸಹಾಯವನ್ನು ಕೋರಿತು ಮತ್ತು ಮೇ 5 ರಂದು ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಯಿತು. ಒಂದು ತಿಂಗಳು ಕಾಲ ಜರ್ಮನಿಯಲ್ಲಿಯೇ ಇದ್ದ ಪ್ರಜ್ವಲ್ ಮೇ 31 ರಂದು ಮ್ಯೂನಿಚ್ ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಬಂಧಿಸಲಾಯ್ತು. ಅಲ್ಲಿಂದ ಇಲ್ಲಿವರೆಗೆ ಪ್ರಜ್ವಲ್ ರೇವಣ್ಣ ಜಾಮೀನಿಗಾಗಿ ಇನ್ನಿಲ್ಲದ ಪ್ರಯತ್ನ ಕಾನೂನು ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಒಂದು ವರ್ಷ ಕಳೆದರೂ ಜೈಲು ವಾಸ ಮುಂದುವರೆದಿದೆ.
