ಪೆನ್‌ಡ್ರೈವ್‌ ಪ್ರಕರಣದಲ್ಲಿ ಎಸ್‌ಐಟಿ ಕಸ್ಟಡಿ ಅಂತ್ಯವಾದ ಬೆನ್ನಲ್ಲಿಯೇ ಹಾಸನ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಿಕ್ಕಪ್ಪ ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ದೊಡ್ಡ ಸಚಿವ ಸ್ಥಾನ ಪಡೆದ ದಿನವೇ ಜೈಲಿನಲ್ಲಿ ಪ್ರಜ್ವಲ್‌ ರೇವಣ್ಣ ದಿನದೂಡುವಂತಾಗಿದೆ. 

ಬೆಂಗಳೂರು (ಜೂ.10): ಕೇಂದ್ರದಲ್ಲಿ ಮಂಡ್ಯ ಸಂಸದ ಎಚ್‌ಡಿ ಕುಮಾರಸ್ವಾಮಿ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯದ ಮಂತ್ರಿಯಾದ ದಿನವೇ ಅವರ ಅಣ್ಣನ ಮಗ ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ನಲ್ಲಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಸೋಮವಾರ ಅವರ ಎಸ್‌ಐಟಿ ಕಸ್ಟಡಿ ಅಂತ್ಯಗೊಂಡ ಬೆನ್ನಲ್ಲಿಯೇ ಕೋರ್ಟ್‌ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಿದೆ. ಪರಪ್ಪನ ಅಗ್ರಹಾರ ಜೈಲಿಗೆ ಹೋದ ಹಾಸನದ ಮಾಜಿ ಸಂಸದ ಪ್ರಜ್ವಲ್‌ಗೆ ಜೈಲಿನ ಅಧಿಕಾರಿಗಳು ಕೈದಿ ನಂಬರ್‌ಅನ್ನೂ ನೀಡಿದ್ದಾರೆ. ಜೈಲಿನ ಕ್ವಾರಂಟೈನ್ ಸೆಂಟರ್ ನಲ್ಲಿರುವ ಪ್ರಜ್ವಲ್ ರೇವಣ್ಣ ಈಗ ವಿಚಾರಣಾಧೀನ ಕೈದಿ ಆಗದ್ದಾರೆ. ಈತನಿಗೆ ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾದೀನ ಆರೋಪಿ ಸಂಖ್ಯೆ ನಂಬರ್ 5664 ಅನ್ನು ನೀಡಲಾಗಿದೆ. ನಾಲ್ಕುವರೆ ಗಂಟೆಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿರುವ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಕೈದಿ ನಂಬರ್ ನೀಡಲಾಗಿದೆ. ಇಂದು ಪರಪ್ಪನ ಅಗ್ರಹಾರದ ಅನ್ನ ಹಾಗೂ ಸಾಂಬಾರ್‌ಅನ್ನೇ ಪ್ರಜ್ವಲ್‌ ರೇವಣ್ಣ ಸೇವಿಸಬೇಕಾಗಿದೆ. ಜೈಲಿನ ಮೆನುವಿನಂತೆ ಇಂದು ರಾತ್ರಿ ಅನ್ನ ಹಾಗೂ ಸಾಂಬಾರ್ ಮತ್ತು ಪಲ್ಯ ತಿನ್ನಬೇಕಾಗಿದೆ.