ಲೇಖಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಗಡಿಪಾರು ಮಾಡುವ ಸರ್ಕಾರದ ಯೋಚನೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಶಾಸಕ ಪ್ರದೀಪ್ ಈಶ್ವರ್, ಸೂಲಿಬೆಲೆ ತಮ್ಮ ಲೆವೆಲ್‌ನಲ್ಲಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು (ಜೂ.12): ಲೇಖಕ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರನ್ನು ಗಡಿಪಾರು ಮಾಡಲು ರಾಜ್ಯ ಗೃಹ ಇಲಾಖೆ ತಯಾರಿ ನಡೆಸುತ್ತಿರುವ ವಿಚಾರದ ಬಗ್ಗೆ ಮಾತನಾಡಿದ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್‌ ಈಶ್ವರ್‌, ಈ ಬಗ್ಗೆ ತಾವು ಮಾತನಾಡೋದಿಲ್ಲ. ಯಾಕೆಂದರೆ ಚಕ್ರವರ್ತಿ ಸೂಲಿಬೆಲೆ ಅವರು ನನ್ನ ಲೆವಲ್‌ನಲ್ಲಿಲ್ಲ ಎಂದಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಗಡಿಪಾರಿಗೆ ಗೃಹ ಇಲಾಖೆ ತಯಾರಿಯ ಬಗ್ಗೆ ಮಾತನಾಡಿದ ಪ್ರದೀಪ್‌ ಈಶ್ವರ್‌, ಸೂಲಿಬೆಲೆಗೆ ಮಾತಿನಲ್ಲಿಯೇ ಟಾಂಗ್‌ ನೀಡಿದರು. ನ್ನ ಲೆವಲ್‌ ಏನಿದ್ದರೂ ವಿಪಕ್ಷ ನಾಯಕ ಅಶೋಕ್‌ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತ್ರ. ಇವರ ಬಗ್ಗೆ ಕೇಳಿ. ಈ ಬಗ್ಗೆ ನಾನು ಮಾತನಾಡುತ್ತೇನೆ. ಅದು ನನ್ನ ಲೆವಲ್‌. ಚಕ್ರವರ್ತಿ ಸೂಲಿಬೆಲೆ ನನ್ನ ಲೆವಲ್‌ ಅಲ್ಲ. ಚಕ್ರವರ್ತಿ ಸೂಲಿಬೆಲೆ ಬಗ್ಗೆ ನಮ್ಮ ಕಾರ್ಯಕರ್ತರು ಮಾತನಾಡುತ್ತಾರೆ.ನಾನು ಮಾತಾಡಲ್ಲ ಅವ್ರು ನನ್ನ ಲೆವೆಲ್ ನಲ್ಲಿಲ್ಲ ಎಂದು ಹೇಳಿದ್ದಾರೆ.

ಇದೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದ್ದಾರೆ. ಮೋದಿ ಸರ್ಕಾರಕ್ಕೆ 11 ವರ್ಷ, ಅವರು ಯಾವ ಸಾಧನೆಗಳನ್ನು ಕಡಿದು ಕಟ್ಟೆ ಹಾಕಿದ್ದಾರೆ ಅನ್ನೋದನ್ನ ಹೇಳಲಿ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರ. ಟ್ರಾಕ್ಟರ್ ಮೇಲೆ 12% ಜಿಎಸ್‌ಟಿ, ಟೈರ್ ಗೆ 18% ಜಿಎಸ್ಟಿ, ಟ್ರಾಕ್ಟರ್ ಬಿಡಿ ಭಾಗಗಳ ಮೇಲೆ 28% ಜಿಎಸ್‌ಟಿ ಹಾಕುತ್ತಿದ್ದಾರೆ. ಎನ್‌ಡಿಎ ಅಂದ್ರೆ ನೇಷನ್ ಡೆಸ್ಟ್ರಾಯರ್ಸ್ ಅಲಯನ್ಸ್. ದೇಶದ ಭದ್ರತೆಯಲ್ಲಿ ಕೇಂದ್ರ ಸರ್ಕಾರ ಫೇಲ್ ಆಗಿದೆ . ಕೇಂದ್ರ ಸರ್ಕಾರ ರೈತರ ವಿಚಾರದಲ್ಲಿ ಫೇಲ್. ನಮ್ಮ ಕಾಂಗ್ರೆಸ್ ನಾಯಕರ ಮೇಲೆ ಇಡಿ ದಾಳಿ ಮಾಡೋದರಲ್ಲಿ ಮಾತ್ರವೇ ಅವರು ಸಕ್ಸಸ್‌ ಕಂಡಿದ್ದಾರೆ. ಇವರ ಇಡಿ ದಾಳಿಗೆ ನಾವು ಹೆದರಲ್ಲ ಎಂದಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ವಿಚಾರದಲ್ಲಿ ಆಗಿದ್ದೇನು: ಚಿಂತಕ ಹಾಗೂ ಯುವ ಬ್ರಿಗೇಡ್‌ನ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ದಾಖಲಾಗಿರುವ ಎಫ್‌ಐಆರ್‌ ಬಗ್ಗೆ ಮಾಹಿತಿ ನೀಡುವಂತೆ ಇತ್ತೀಚೆಗೆ ರಾಜ್ಯ ಸರ್ಕಾರ ಕೇಳಿದೆ. 2022ರಿಂದ 2025 ಮೇ 31ರವರೆಗೆ ದಾಖಲಾಗಿರುವ ಪ್ರಕರಣಗಳ ಮಾಹಿತಿ ಹಾಗೂ ಎಫ್‌ಐಆರ್‌ ಪ್ರತಿಗಳನ್ನು ಬೆಂಗಳೂರಿನ ಎಸ್‌ಪಿ ಕಚೇರಿಗೆ ಕಳಿಸುವಂತೆ ತಿಳಿಸಲಾಗಿದೆ. ರಾಜ್ಯದ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರು ಬರೆದ ಪತ್ರದ ಮೇರೆಗೆ ಎಫ್‌ಐಆರ್‌ನ ಪ್ರತಿ, ಅವರ ವಿರುದ್ಧ ದಾಖಲಾದ ಪ್ರಕರಣದಲ್ಲಿ ತೆಗೆದುಕೊಂಡ ಕ್ರಮಗಳು ಹಾಗೂ ಪ್ರಸ್ತುತ ಕೇಸ್‌ ಯಾವ ಹಂತದಲ್ಲಿದೆ ಎನ್ನುವುದರ ಬಗ್ಗೆ ಎಲ್ಲಾ ಮಾಹಿತಿ ಒದಗಿಸುವಂತೆ ಪೊಲೀಸ್‌ ಕಮೀಷನರ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಬಿಜೆಪಿ ಕಿಡಿ: ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸುಳ್ಳು ಮೊಕದ್ದಮೆ ದಾಖಲಿ ಯಾವುದೇ ರೀತಿಯ ಕಿರುಕುಳ ನೀಡಲು ಮುಂದಾದರೆ ರಾಜ್ಯ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಪರ ಸಂಘಟನೆಗಳು, ಮುಖಂಡರು, ಚಿಂತಕರು ಹಾಗೂ ಕಾರ್ಯಕರ್ತರನ್ನು ಗುರಿಯಾಗಿಸಿ ಪೊಲೀಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನಿರಂತರ ಕಿರುಕುಳ ನೀಡಲಾಗುತ್ತಿದೆ. ಈ ಬಗ್ಗೆ ಭಾರತೀಯ ಜನತಾ ಪಾರ್ಟಿ ಮೊದಲಿನಿಂದಲೂ ಆರೋಪಿಸುತ್ತಲೇ ಬಂದಿದೆ ಎಂದಿದ್ದಾರೆ.