ಜನನ-ಮರಣ ನೋಂದಣಿ ತಿದ್ದುಪಡಿ ಅಧಿಕಾರ ಎಸಿಗೆ
ಈವರೆಗೆ ಜನನ, ಮರಣ ನೋಂದಣಿ ಕಾಯಿದೆ ಸೆಕ್ಷನ್ 13(3)ರ ಅಡಿ ವಿಳಂಬ, ತಿದ್ದುಪಡಿ ಸೇರಿದಂತೆ ಯಾವುದೇ ತಗಾದೆಗಳಿದ್ದರೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸ್ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರ ಇರಲಿಲ್ಲ.

ಬೆಂಗಳೂರು(ನ.10): ಜನನ-ಮರಣ ನೋಂದಣಿಗಳ ತಿದ್ದುಪಡಿ ಹಾಗೂ ವಿಳಂಬ ನೋಂದಣಿಯ ಪ್ರಕರಣಗಳಲ್ಲಿ ಸಾರ್ವಜನಿಕರು ನ್ಯಾಯಾಲಯದ ಮೊರೆ ಹೋಗುವುದನ್ನು ತಪ್ಪಿಸಿ ಉಪ ವಿಭಾಗಾಧಿಕಾರಿಗಳಿಗೆ ಜನನ-ಮರಣ ನೋಂದಣಿಗಳ ತಿದ್ದುಪಡಿ ಅಧಿಕಾರವನ್ನು ನೀಡಲು ಅಗತ್ಯ ನಿಯಮಾವಳಿ ತಿದ್ದುಪಡಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈವರೆಗೆ ಜನನ, ಮರಣ ನೋಂದಣಿ ಕಾಯಿದೆ ಸೆಕ್ಷನ್ 13(3)ರ ಅಡಿ ವಿಳಂಬ, ತಿದ್ದುಪಡಿ ಸೇರಿದಂತೆ ಯಾವುದೇ ತಗಾದೆಗಳಿದ್ದರೂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ಅಥವಾ ಪ್ರೆಸಿಡೆನ್ಸ್ ಮ್ಯಾಜಿಸ್ಟ್ರೇಟ್ ಮಾತ್ರ ಆದೇಶ ಹೊರಡಿಸಬಹುದಾಗಿದ್ದು, ಬೇರೆ ಯಾರಿಗೂ ಅಧಿಕಾರ ಇರಲಿಲ್ಲ.
ದಕ್ಷಿಣ ಕ್ಷೇತ್ರದ ಮತದಾರರ ನೋಂದಣಿಯಲ್ಲಿ ಹಲವು ನ್ಯೂನತೆ : ಆಕಾಂಕ್ಷಿಯಿಂದ ಅಸಮಾಧಾನ
ಇದರಿಂದ ಸಾರ್ವಜನಿಕರು ಅನಗತ್ಯವಾಗಿ ನ್ಯಾಯಾಲಯಗಳಿಗೆ ಅಲೆಯುವಂತಾಗಿದೆ ಎಂಬ ಕಾರಣಕ್ಕೆ ಕರ್ನಾಟಕ ಜನನ, ಮರಣ ನೋಂದಣಿ ತಿದ್ದುಪಡಿ ನಿಯಮಗಳು 2023ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಡಿ ವಿಳಂಬದ ನೋಂದಣಿ ಹಾಗೂ ತಿದ್ದುಪಡಿಯನ್ನು ಉಪ ವಿಭಾಗಾಧಿಕಾರಿ ಹಂತದಲ್ಲೇ ಮಾಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ.
ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ಜನನ ಹಾಗೂ ಮರಣ ನೋಂದಣಿಯಲ್ಲಿ ವಿಳಂಬ ನೋಂದಣಿ ಹಾಗೂ ತಿದ್ದುಪಡಿ ಅಧಿಕಾರವನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಲಾಗಿದೆ ಎಂದರು.
ಅಲ್ಲದೆ, ಜನನ, ಮರಣ ನೋಂದಣಿ ನಿಯಮಗಳು -1999ರ ನಿಯಮಗಳ ಪ್ರಕಾರ ವಿಳಂಬ ನೋಂದಣಿಗೆ ಸಾರ್ವಜನಿಕರು ಹಾಲಿ ಪಾವತಿಸುತ್ತಿರುವ ಶುಲ್ಕವನ್ನೂ ಪರಿಷ್ಕರಿಸಲಾಗಿದೆ. ಜನನ, ಮರಣ ಘಟಿಸಿದ 21 ದಿನಗಳ ನಂತರ ಹಾಗೂ 30 ದಿನಗಳ ಒಳಗಾಗಿ ನೋಂದಾಯಿಸುವ ವಿಳಂಬ ನೋಂದಣಿಗೆ ಹಾಲಿ ಇರುವ ವಿಳಂಬ ಶುಲ್ಕವನ್ನು 2 ರು. ಬದಲು 100 ರು.ಗೆ, 30 ದಿನಗಳ ನಂತರ 5 ರು. ಬದಲು 200 ರು., 1 ವರ್ಷ ಬಳಿಕದ ನೋಂದಣಿಗೆ 10 ರು. ಬದಲಿಗೆ 500 ರು.ಗೆ ಶುಲ್ಕವನ್ನು ಪರಿಷ್ಕರಿಸಲಾಗಿದೆ.
ಮಕ್ಕಳ ತೂಕ ಅಳೆಯಲು 28.60 ಕೋಟಿ ರು. ವೆಚ್ಚ:
ಪೋಷಣ್ ಅಭಿಯಾನದ ಅಡಿ ಮಕ್ಕಳ ಪೋಷಣೆಯ ಪ್ರಮಾಣವನ್ನು ಅರಿಯಲು 28.60 ಕೋಟಿ ರು. ವೆಚ್ಚದಲ್ಲಿ ವಿವಿಧ ಸಾಧನಗಳನ್ನು ಖರೀದಿಸಲು ಸಂಪುಟ ಒಪ್ಪಿಗೆ ನೀಡಿದೆ. ಮಕ್ಕಳ ಪೋಷಣೆ ಅಳೆಯಲು ಇನ್ಫ್ಯಾಂಟೋ ಮೀಟರ್, ಸ್ಟೇಡಿಯೋಮೀಟರ್, ತೂಕದ ಯಂತ್ರ ಸೇರಿದಂತೆ ಪ್ರತಿ ಯಂತ್ರಕ್ಕೆ 8 ಸಾವಿರ ರು.ಗಳಂತೆ 35,750 ಯಂತ್ರಗಳಿಗೆ 28.60 ಕೋಟಿ ರು. ವೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ 73 ಕೆಪಿಸಿಎಸ್ ಶಾಲೆ ಹಾಗೂ 50 ಆದರ್ಶ ವಿದ್ಯಾಲಯಗಲ್ಲಿ 20 ಕೋಟಿ ರು. ವೆಚ್ಚದಲ್ಲಿ ಆವಿಷ್ಕಾರ ಇನ್ನೋವೇಟಿವ್ ಲ್ಯಾಬ್ ಸ್ಥಾಪಿಸುವ ಬಗ್ಗೆಯೂ ನಿರ್ಧರಿಸಲಾಯಿತು.
ಜತೆಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ನೂತನವಾಗಿ 24 ಬಸ್‌ಗಳು ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ಸೇವೆಗೆ 100 ಬಸ್‌ಗಳ ಖರೀದಿಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ.
ತಾಂತ್ರಿಕ ವಿಘ್ನ, ಆಸ್ತಿ ನೋಂದಣಿಗೆ ಭಾರಿ ರಶ್: ಕಾವೇರಿ-2 ಸರ್ವರ್ ಕ್ರ್ಯಾಶ್!
ಹೊಸ ಸಿಎಸ್ ನೇಮಕ ಅಧಿಕಾರ ಸಿಎಂಗೆ
ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅವಧಿ ನ.30ಕ್ಕೆ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ನೂತನ ಮುಖ್ಯ ಕಾರ್ಯದರ್ಶಿ ನೇಮಕದ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದ್ದು, ಈ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಿ ನಿರ್ಧಾರ ಕೈಗೊಳ್ಳಲಾಗಿದೆ.
ಚರ್ಚೆ ವೇಳೆ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆದ ರಜನೀಶ್ ಗೋಯೆಲ್ ಅವರ ಹೆಸರು ಚರ್ಚೆಯಾಗಿದೆ. ಇವರ ಜತೆಗೆ ಹಿರಿತನದ ಆಧಾರದ ಮೇಲೆ ಅಜಯ್ ಸೇಠ್, ವಿ.ಮಂಜುಳಾ, ರಾಕೇಶ್ ಸಿಂಗ್, ಗೌರವ ಗುಪ್ತಾ ಅವರ ಹೆಸರೂ ಪ್ರಸ್ತಾವನೆಯಾಗಿದೆ. ಅಂತಿಮ ಅಧಿಕಾರವನ್ನು ಮುಖ್ಯಮಂತ್ರಿಗಳಿಗೆ ವಹಿಸಲಾಗಿದೆ.