Asianet Suvarna News Asianet Suvarna News

ತಾಂತ್ರಿಕ ವಿಘ್ನ, ಆಸ್ತಿ ನೋಂದಣಿಗೆ ಭಾರಿ ರಶ್‌: ಕಾವೇರಿ-2 ಸರ್ವರ್‌ ಕ್ರ್ಯಾಶ್!

ಆಸ್ತಿ ನೋಂದಣಿ ಮಾರ್ಗಸೂಚಿ ದರ ಅಕ್ಟೋಬರ್‌ 1ರಿಂದ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಸ್ತಿ ನೋಂದಣಿಗಾಗಿ ಜನರು ಉಪ ನೋಂದಣಾಧಿಕಾರಿಗಳ ಕಚೇರಿಗೆ ಮುಗಿಬಿದ್ದಿದ್ದಾರೆ.

Huge rush for property registration Kaveri 2 server crash gvd
Author
First Published Sep 22, 2023, 5:29 AM IST

ಬೆಂಗಳೂರು (ಸೆ.22): ಆಸ್ತಿ ನೋಂದಣಿ ಮಾರ್ಗಸೂಚಿ ದರ ಅಕ್ಟೋಬರ್‌ 1ರಿಂದ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಆಸ್ತಿ ನೋಂದಣಿಗಾಗಿ ಜನರು ಉಪ ನೋಂದಣಾಧಿಕಾರಿಗಳ ಕಚೇರಿಗೆ ಮುಗಿಬಿದ್ದಿದ್ದಾರೆ. ಏಕಾಏಕಿ ಆಸ್ತಿ ನೋಂದಣಿ ಪ್ರಮಾಣದಲ್ಲಿ ಹೆಚ್ಚಳವಾದ ಕಾರಣ, ಕಾವೇರಿ 2 ತಂತ್ರಾಂಶದಲ್ಲಿ ದೋಷ ಕಾಣಿಸಿಕೊಂಡು ಗುರುವಾರ ಆಸ್ತಿ ನೋಂದಣಿ ಪ್ರಕ್ರಿಯೆ ಅಸ್ತವ್ಯಸ್ತವಾಯಿತು.

ಅಕ್ಟೋಬರ್‌ 1ರಿಂದ ಹಂತಹಂತವಾಗಿ ರಾಜ್ಯಾದ್ಯಂತ ಮಾರುಕಟ್ಟೆ ದರಕ್ಕೆ ತಕ್ಕಂತೆ ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳಕ್ಕೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆದೇಶಿಸಿದೆ. ಅದರಿಂದ ಸದ್ಯ ಇರುವ ಮಾರ್ಗಸೂಚಿ ದರದಲ್ಲಿ ಶೇ.25ರಿಂದ 30ರಷ್ಟು ಹೆಚ್ಚಳವಾಗಲಿದೆ. ಅದರ ಜತೆಗೆ ಆಸ್ತಿ ನೋಂದಣಿ ಶುಲ್ಕದಲ್ಲೂ ಏರಿಕೆಯಾಗಲಿದೆ. ಹೀಗಾಗಿ ಅಕ್ಟೋಬರ್‌ 1ರೊಳಗೆ ಆಸ್ತಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸುವ ಧಾವಂತಕ್ಕೊಳಗಾಗಿರುವ ಜನರು ಗುರುವಾರ ಉಪ ನೋಂದಣಾಧಿಕಾರಿಗಳ ಕಚೇರಿಗೆ ಮುಗಿಬಿದ್ದಿದ್ದಾರೆ. 

ಅದರಲ್ಲೂ ಬೆಂಗಳೂರಿನ 43 ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಆಸ್ತಿ ನೋಂದಣಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ಹೀಗೆ ಏಕಾಏಕಿ ಜನರ ಸಂಖ್ಯೆ ಹಾಗೂ ನೋಂದಣಿಯಾಗುವ ಆಸ್ತಿಗಳ ಸಂಖ್ಯೆ ಹೆಚ್ಚಾದ ಕಾರಣ ಆನ್‌ಲೈನ್‌ ಸೇವೆಯಲ್ಲಿ ವ್ಯತ್ಯಯವುಂಟಾಗಿದೆ. ಕಾವೇರಿ 2 ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಕೆ ಸೇರಿದಂತೆ ಆಸ್ತಿ ನೋಂದಣಿಗೆ ಸಂಬಂಧಿಸಿದ ಇನ್ನಿತರ ಪ್ರಕ್ರಿಯೆಗಳನ್ನು ನಡೆಸಲಾಗದೆ ಜನರು ಸೇರಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿ ಸಿಬ್ಬಂದಿಯೂ ಪರದಾಡುವಂತಾಗಿತ್ತು. 

ಅ.1ರಿಂದ ಆಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ: ಸಚಿವ ಕೃಷ್ಣಭೈರೇಗೌಡ

ಅಲ್ಲದೆ, ಬೆಳಗ್ಗೆ ಕೆಲ ಹೊತ್ತು ಮಾತ್ರ ಕಾರ್ಯನಿರ್ವಹಿಸಿದ ಕಾವೇರಿ 2 ತಂತ್ರಾಂಶ, ಅದಾದ ನಂತರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಸರ್ವರ್‌ ಮೇಲೆ ಒತ್ತಡ ಹೆಚ್ಚಾದ ಕಾರಣ ಸಮಸ್ಯೆ ಎದುರಾಗಿತ್ತು. ರಾಜ್ಯದಲ್ಲಿ ಕಾವೇರಿ 2 ತಂತ್ರಾಂಶದಿಂದ ಪ್ರತಿದಿನ 12ರಿಂದ 13 ಸಾವಿರ ಆಸ್ತಿಗಳು ನೋಂದಣಿಯಾಗುತ್ತಿವೆ. ಆದರೆ, ಗುರುವಾರ ಉಂಟಾದ ಸರ್ವರ್‌ ಸಮಸ್ಯೆಯಿಂದಾಗಿ ಸರಾಸರಿಯಲ್ಲಿ ಶೇ.20ರಷ್ಟು ಮಾತ್ರ ಆಸ್ತಿ ನೋಂದಣಿ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios