ನಟ ರಜನಿಕಾಂತ್ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಆಧ್ಯಾತ್ಮಿಕ ವಾತಾವರಣದಲ್ಲಿ ತಮಗಾದ ಒಂದು ಘಟನೆಯು ತನ್ನ ಅಹಂ ಅನ್ನು ಹೇಗೆ ಮುರಿಯಿತು ಜನಪ್ರಿಯತೆಗಿಂತ ಆಧ್ಯಾತ್ಮಿಕತೆ ಹೇಗೆ ಶ್ರೇಷ್ಠ ಎಂಬುದನ್ನು ವಿವರಿಸಿದ್ದಾರೆ.
ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿನ ಅನುಭವ ಬಿಚ್ಚಿಟ್ಟ ನಟ
ಕೆಲ ದಿನಗಳ ಹಿಂದೆ ಆರ್ಟ್ ಆಫ್ ಲಿವಿಂಗ್ ಆಶ್ರಮದಿಂದ ನನಗೆ ಕರೆ ಬಂದಿತ್ತು. ಶ್ರೀಶ್ರೀ ರವಿಶಂಕರ ಗುರೂಜಿ ಅವರು, ‘ನನಗೂ ನಿಮ್ಮಂತೆ 70 ವರ್ಷ ಪೂರ್ಣವಾಗುತ್ತಿದೆ. ಎಂದೂ ನಾನು ಜನ್ಮದಿನದವನ್ನು ಆಚರಿಸಿಕೊಂಡವನಲ್ಲ. ಆದರೆ ಭಕ್ತರು ಒತ್ತಾಯಿಸುತ್ತಿರುವ ಕಾರಣ ಈ ಬಾರಿ ಒಪ್ಪಿಕೊಂಡಿದ್ದೇನೆ’ ಎಂದರು. ಬಳಿಕ, ಯಾವುದೇ ಚಿತ್ರಗಳ ಶೂಟಿಂಗ್ ಇಲ್ಲದೆ ಬಿಡುವಾಗಿದ್ದರೆ ಆ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿದರು. ಜತೆಗೆ, ಅಲ್ಲಿ 10 ನಿಮಿಷ ಮಾತಾಡುವಂತೆಯೂ ಕೇಳಿದರು. ಸತ್ಸಂಗ ಎಂದರೆ 50-60 ಜನರಿರುತ್ತಾರೆ ಎಂದುಕೊಂಡು, ಗುರುದೇವರ ಬಳಿ ಆ ಬಗ್ಗೆ ಕೇಳಿದೆ. ಅದಕ್ಕವರು, ‘10 ಸಾವಿರ ಜನ ಸೇರಬಹುದು’ ಎಂದರು. ಇಂದು ಇಲ್ಲಿಗೆ ಬಂದಿದ್ದೇನೆ. ಇಷ್ಟು ದಿನ ಫೋಟೋ, ವಿಡಿಯೋ, ಟಿ.ವಿ.ಯಲ್ಲಿ ನೋಡುತ್ತಿದ್ದ ಗುರುದೇವರ ನೇರ ದರ್ಶನ ಪಡೆಯುವ ಅವಕಾಶ ದೊರಕಿತು. ಅವರು ಬಂದು ನನ್ನ ಮುಂದೆ ಕುಳಿತಾಗ ಅವರ ಮುಖದಲ್ಲಿ ಅಪಾರ ಸಂತೋಷ ಕಂಡಿತು. ಬಡವನಿಗೆ 50 ಕೋಟಿ ರು. ಲಾಟರಿ ಸಿಕ್ಕಂತಹ ಸಂತೋಷವದು.

ಕನ್ನಡ ಬರ್ತಿತ್ತು, ಈಗ ನೆನಪಿಲ್ಲ:
ಕಾರ್ಯಕ್ರಮದಲ್ಲಿ ಮಾತನಾಡಿ ಎಂದು ಅವರು ಮನವಿ ಮಾಡಿದಾಗ, ಯಾವ ಭಾಷೆಯಲ್ಲಿ ಮಾತಾಡುವುದು ಎಂಬ ಗೊಂದಲವಾಯಿತು. ನಾನು ಕರ್ನಾಟಕದಲ್ಲಿ ಬೆಳೆದವನು. ಸುಮಾರು 25 ವರ್ಷಗಳ ಕಾಲ ಬೆಂಗಳೂರಿನಲ್ಲಿದ್ದೆ. ಇಲ್ಲೇ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದೆ. ಹಾಗಾಗಿ ನನಗೆ ಕನ್ನಡ ಬರುತ್ತಿತ್ತು. ಮಾತೃಭಾಷೆಯಾದ್ದರಿಂದ ಮರಾಠಿಯೂ ಬರುತ್ತಿತ್ತು. ಆದರೆ ಕಳೆದ 52 ವರ್ಷಗಳಿಂದ ಚೆನ್ನೈನಲ್ಲಿದ್ದೆ. ಆದಕಾರಣ ಅಲ್ಲಿ ಕನ್ನಡದವರು ಯಾರೂ ಸಿಗದೆ, ಭಾಷೆ ಮರೆತುಹೋಗಿದೆ. ಈ ಬಗ್ಗೆ ಗುರುದೇವರ ಬಳಿ ಹೇಳಿದಾಗ, ‘ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತಾಡಿ. ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ’ ಎಂದರು.
2 ದಿನಕ್ಕೆ ಬಂದು 15 ದಿನ ಇದ್ದೆ:
ಹಿಂದೊಮ್ಮೆ ಸಮಯ ಮಾಡಿಕೊಂಡು 2 ದಿನಗಳ ಮಟ್ಟಿಗೆ ಆಶ್ರಮದಲ್ಲಿ ಉಳಿದುಕೊಳ್ಳಲೆಂದು ಬಂದಿದ್ದೆ. ಎಲ್ಲೆಲ್ಲೂ ಹಸಿರು, ಕೆರೆ, ಜನ.. ಎಲ್ಲರ ಮುಖದಲ್ಲೂ ಮುಗುಳ್ನಗುವಿತ್ತು. ಆನೆಗಳು, ಅಶ್ವಗಳು, ನೂರಾರು ಹಸುಗಳನ್ನೆಲ್ಲಾ ನೋಡಿದೆ. ಇಲ್ಲೊಂದು ಕುದುರೆಗೆ ‘ರಜನಿ’ ಎಂದು ಹೆಸರಿಟ್ಟುಬಿಟ್ಟಿದ್ದಾರೆ. ಇದು, ಹಿಮಾಲಯದ ಬಳಿಕ ನನಗೆ ಅತಿ ಹೆಚ್ಚು ಮುದ ನೀಡಿದ ಸ್ಥಳವಾಗಿದೆ. ಇದನ್ನೆಲ್ಲಾ ನೋಡಿದ ಮೇಲೆ, 2 ದಿನಕ್ಕಾಗಿ ಬಂದವನು 15 ದಿನ ಇಲ್ಲೇ ಇದ್ದುಬಿಟ್ಟೆ.
ಯಾರೂ ನನ್ನನ್ನು ನೋಡಲಿಲ್ಲ:
ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಗುರುದೇವ, ಸಂಗಡ ಬರುವಂತೆ ನನ್ನನ್ನು ಆಹ್ವಾನಿಸಿದರು. ನಾನೆಂದೆ, ‘ನಿಮಗೆ ಸುಮ್ಮನೆ ತೊಂದರೆ ಆಗಬಹುದು’ ಎಂದು. ಜನರೆಲ್ಲಾ ನನ್ನನ್ನು ನೋಡಿದ ಕೂಡಲೆ ಫೋಟೋ, ಆಟೊಗ್ರಾಫ್‌ಗಾಗಿ ಮುಗಿಬೀಳುತ್ತಾರೆ ಎಂದು ಭಾವಿಸಿ ಹಾಗೆ ಹೇಳಿದ್ದೆ. ಆದರೂ ಅವರ ಮಾತಿನಂತೆ ಹೋದೆ, ಅವರೊಂದಿಗೆ ಕುಳಿತೆ. ಅಲ್ಲಿ ನೂರಾರು ಜನರಿದ್ದರು. ನನ್ನನ್ನು ಗುರುತಿಸುವರು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಾನು ಸುಳ್ಳು ಹೇಳುತ್ತಿಲ್ಲ, ಅಷ್ಟು ಮಂದಿಯಲ್ಲಿ ಒಬ್ಬರೂ ನನ್ನತ್ತ ನೋಡಲಿಲ್ಲ. ನಾನೇ ಕೈ ಆಡಿಸಿದರೂ ಪ್ರಯೋಜನ ಆಗಲಿಲ್ಲ. ಫೋಟೋ, ಆಟೊಗ್ರಾಫ್ ನಿರೀಕ್ಷೆಗಳೆಲ್ಲಾ ಇಳಿದುಹೋಯಿತು.
ನಾನು ಎಷ್ಟೋ ರಾಜಕಾರಣಿಗಳು, ಉದ್ಯಮಿಗಳನ್ನೆಲ್ಲಾ ಭೇಟಿ ಆಗಿದ್ದೇನೆ. ಆದರೆ ಇಲ್ಲಿ ಆದ ಅನುಭವವು ನನ್ನ ಅಹಂ ಅನ್ನು ಅಕ್ಷರಶಃ ಹೊಸಕಿಹಾಕಿಬಿಟ್ಟಿತು. ಇದೇ ಅಧ್ಯಾತ್ಮಕ್ಕೆ ಇರುವ ಶಕ್ತಿ.
ಜನಪ್ರಿಯತೆ ಶಾಶ್ವತವಲ್ಲ:
ಜನಪ್ರಿಯತೆಯು ಶಾಶ್ವತವಲ್ಲ. ಅದು ಬರುತ್ತದೆ, ಹೋಗುತ್ತದೆ ಎಂದು ಅಂದು ನನಗಾದ ಅನುಭವದಿಂದ ಕಲಿತೆ. ಆದರೆ ನಿಜವಾಗಿದ್ದು, ಆಧ್ಯಾತ್ಮಿಕ ಜನಪ್ರಿಯತೆ. ಸಾವಿನ ಬಳಿಕವೂ ಇದು ಉಳಿಯುತ್ತದೆ, ಬೆಳೆಯುತ್ತದೆ. ಆದ್ದರಿಂದಲೇ ಪುರಂದರ ದಾಸರು ಹೇಳಿರುವುದು, ‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು. ಅದು ಇಲ್ಲಿಗೆ ಬಂದು ಮನವರಿಕೆ ಆಯಿತು.
ಜನರೆಲ್ಲಾ ನನ್ನನ್ನು ನೋಡಿದ ಕೂಡಲೆ ಫೋಟೋ, ಆಟೋಗ್ರಾಫ್‌ಗಾಗಿ ಮುಗಿಬೀಳುತ್ತಾರೆ ಎಂದು ಭಾವಿಸಿದ್ದೆ. ಅಲ್ಲಿ ನೂರಾರು ಜನರಿದ್ದರು. ನನ್ನನ್ನು ಗುರುತಿಸುವರು ಎಂಬ ನಿರೀಕ್ಷೆಯಲ್ಲಿದ್ದೆ. ಆದರೆ ನಾನು ಸುಳ್ಳು ಹೇಳುತ್ತಿಲ್ಲ, ಅಷ್ಟು ಮಂದಿಯಲ್ಲಿ ಒಬ್ಬರೂ ನನ್ನತ್ತ ನೋಡಲಿಲ್ಲ. ನಾನೇ ಕೈ ಆಡಿಸಿದರೂ ಪ್ರಯೋಜನ ಆಗಲಿಲ್ಲ. ಫೋಟೋ, ಆಟೊಗ್ರಾಫ್ ನಿರೀಕ್ಷೆಗಳೆಲ್ಲಾ ಇಳಿದುಹೋಯಿತು. ಆ ಅನುಭವವು ನನ್ನ ಅಹಂ ಅನ್ನು ಅಕ್ಷರಶಃ ಹೊಸಕಿಹಾಕಿಬಿಟ್ಟಿತು. ಇದೇ ಅಧ್ಯಾತ್ಮಕ್ಕೆ ಇರುವ ಶಕ್ತಿ.
ನಟ ರಜನಿಕಾಂತ್


