ರಾಜ್ಯದಲ್ಲಿ ಪಾಸಿಟಿವಿಟಿ 4.86ಕ್ಕೆ ಕುಸಿತ
* 2 ತಿಂಗಳ ಕನಿಷ್ಠ ಪಾಸಿಟಿವಿಟಿ ದಾಖಲು
* 8249 ಹೊಸ ಕೇಸ್ 159 ಸಾವು
* 9 ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಕೇಸ್
ಬೆಂಗಳೂರು(ಜೂ.12): ರಾಜ್ಯದ ಕೋವಿಡ್ ಪ್ರಕರಣಗಳಲ್ಲಿ ಭಾರಿ ಇಳಿಕೆ ದಾಖಲಾಗಿದೆ. ಶುಕ್ರವಾರ 8,249 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. 159 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. 14,975 ಮಂದಿ ಗುಣಮುಖರಾಗಿದ್ದಾರೆ.
ಏಪ್ರಿಲ್ 13ಕ್ಕೆ 8,778 ಪ್ರಕರಣ ವರದಿಯಾದ ಎರಡು ತಿಂಗಳ ಬಳಿಕ ದೈನಂದಿನ ಸೋಂಕಿನ ಪ್ರಕರಣ ಮತ್ತೆ 8 ಸಾವಿರದ ಗಡಿ ಸಮೀಪ ಬಂದಿದೆ. ಸುಮಾರು 1.69 ಲಕ್ಷ ಕೋವಿಡ್ ಪರೀಕ್ಷೆ ನಡೆದಿದ್ದು, ಪಾಸಿಟಿವಿಟಿ ದರ ಶೇ. 4.86 ದಾಖಲಾಗಿದೆ. ಏಪ್ರಿಲ್ 4ರ ಬಳಿಕ ಮೊದಲ ಬಾರಿಗೆ ರಾಜ್ಯದ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆ ಬಂದಿದೆ.
ಬೆಂಗಳೂರು ನಗರ (1,154)ದಲ್ಲಿ ಮಾತ್ರ ಸಾವಿರ ಮೀರಿ ಪ್ರಕರಣ ಪತ್ತೆಯಾಗಿವೆ. ಉಳಿದಂತೆ ಮೈಸೂರು 817, ಹಾಸನ 733, ತುಮಕೂರು 576 ಮತ್ತು ದಕ್ಷಿಣ ಕನ್ನಡದಲ್ಲಿ 506 ಪ್ರಕರಣ ದಾಖಲಾಗಿವೆ. ಬೀದರ್ 9, ಯಾದಗಿರಿ 21, ಕಲಬುರಗಿ 29, ರಾಮನಗರ 57, ರಾಯಚೂರು 61, ಹಾವೇರಿ 65, ಗದಗ 66, ಬಾಗಲಕೋಟೆ 73, ಕೊಪ್ಪಳ 98 ಹೀಗೆ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ 100ಕ್ಕಿಂತ ಕಡಿಮೆ ಪ್ರಕರಣ ದಾಖಲಾಗಿದೆ.
ಅನ್ ಲಾಕ್ ಸಂಪೂರ್ಣ ಮಾರ್ಗಸೂಚಿ.. ಏನಿದೆ? ಏನಿಲ್ಲ?
25 ಲಕ್ಷ ದಾಟಿದ ಗುಣಮುಖರ ಸಂಖ್ಯೆ
ರಾಜ್ಯದಲ್ಲಿ ಮೇ 18ರಂದು ಪ್ರಾರಂಭವಾದ ಹೊಸ ಪ್ರಕರಣಗಳಿಗಿಂತ ಗುಣಮುಖರ ಸಂಖ್ಯೆ ಹೆಚ್ಚು ವರದಿಯಾಗುವ ಪ್ರವೃತ್ತಿ ಇನ್ನೂ ಮುಂದುವರಿದಿದೆ. ಇದರಿಂದಾಗಿ 6 ಲಕ್ಷ ಮೀರಿದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ 2.03 ಲಕ್ಷಕ್ಕೆ ಕುಸಿದಿದೆ. ಇದೇ ವೇಳೆ ಗುಣಮುಖರಾದವರ ಸಂಖ್ಯೆ 25 ಲಕ್ಷ ದಾಟಿದೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರಾದವರಲ್ಲಿ ಶೇ. 91 ಮಂದಿ ಗುಣಮುಖರಾಗಿದ್ದಾರೆ.
2.36 ಲಕ್ಷ ಮಂದಿಗೆ ಲಸಿಕೆ
ರಾಜ್ಯದಲ್ಲಿ ಶುಕ್ರವಾರ 2.36 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 1.64 ಕೋಟಿ ಡೋಸ್ ಲಸಿಕೆ ರಾಜ್ಯದಲ್ಲಿ ವಿತರಣೆಯಾಗಿದೆ. 29.73 ಲಕ್ಷ ಮಂದಿ ಎರಡನೇ ಡೋಸ್ ಪಡೆದಿದ್ದು, 1.34 ಕೋಟಿ ಮಂದಿ ಮೊದಲ ಡೋಸ್ ಸ್ವೀಕರಿಸಿದ್ದಾರೆ.
ಶುಕ್ರವಾರ 18ರಿಂದ 44 ವರ್ಷದೊಳಗಿನ 1.37 ಲಕ್ಷ ಮಂದಿ, 45 ವರ್ಷ ಮೀರಿದ 73,546 ಮಂದಿ, ಮುಂಚೂಣಿ ಕಾರ್ಯಕರ್ತರು 4,124 ಮಂದಿ, ಆರೋಗ್ಯ ಕಾರ್ಯಕರ್ತರು 929 ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
ಎರಡನೇ ಡೋಸ್ ಅನ್ನು 45 ವರ್ಷ ಮೀರಿದ 16,896 ಮಂದಿ, 18 ರಿಂದ 44 ವರ್ಷದೊಳಗಿನ 1,551 ಮಂದಿ, ಮುಂಚೂಣಿ ಕಾರ್ಯಕರ್ತರು 920 ಮಂದಿ, ಆರೋಗ್ಯ ಕಾರ್ಯಕರ್ತರು 820 ಮಂದಿ ಪಡೆದಿದ್ದಾರೆ. ಶುಕ್ರವಾರ 20 ಸಾವಿರ ಎರಡನೇ ಡೋಸ್ ಮತ್ತು 2.16 ಲಕ್ಷ ಮೊದಲ ಡೋಸ್ ವಿತರಣೆಯಾಗಿದೆ.
ಕಳೆದ ನಾಲ್ಕು ದಿನಗಳಿಂದ ಸಾವಿನ ಪ್ರಮಾಣದಲ್ಲಿಯೂ ಕುಸಿತ ವರದಿಯಾಗುತ್ತಿದೆ. ಜೂನ್ 8ರಿಂದ ದಿನನಿತ್ಯದ ಕೋವಿಡ್ ಸಾವಿನ ಸಂಖ್ಯೆ 200ಕ್ಕಿಂತ ಕಡಿಮೆ ದಾಖಲಾಗುತ್ತಿದೆ. ಮರಣ ದರ ಕೂಡ ಕಳೆದ ನಾಲ್ಕು ದಿನಗಳಿಂದ ಶೇ.2ನ್ನು ಮೀರುತ್ತಿಲ್ಲ. ಏಪ್ರಿಲ್ 25ರಂದು 143 ಮಂದಿ ಮೃತರಾದ ಬಳಿಕದ ಕನಿಷ್ಠ ಸಂಖ್ಯೆಯ ಸಾವು ಶುಕ್ರವಾರ ದಾಖಲಾಗಿದೆ. ಬೆಂಗಳೂರಿನಲ್ಲಿ 48, ಮೈಸೂರು 20 ಮತ್ತು ಹಾವೇರಿಯಲ್ಲಿ 10 ಮಂದಿ ಸೋಂಕಿನಿಂದ ಮೃತರಾಗಿದ್ದಾರೆ. ಬೀದರ್ ಮತ್ತು ಯಾದಗಿರಿಯಲ್ಲಿ ಕೋವಿಡ್ ಸಾವು ವರದಿಯಾಗಿಲ್ಲ.