ಬೆಂಗಳೂರು(ಡಿ.06): ನೀಲಿ ಚಿತ್ರಗಳ ವೀಕ್ಷಣೆಯ ವ್ಯಸನಿಯಾಗಿದ್ದ 37 ವರ್ಷದ ಪತಿಯೋರ್ವ, ತನ್ನ ಪತ್ನಿಯೂ ಅಶ್ಲೀಲ ಚಿತ್ರವೊಂದರಲ್ಲಿ ನಟಿಸಿದ್ದಾಗಿ ಪೊಲೀಸರಿಗೆ ದೂರು ನೀಡಲು ಹೋದ ಘಟನೆ ನಡೆದಿದೆ.

ತಾನು ಆನ್‌ಲೈನ್‌ನಲ್ಲಿ ನೋಡಿದ ಅಶ್ಲೀಲ ವಿಡಿಯೋದೊಂದಿಗೆ ತನ್ನ ಗರ್ಭಿಣಿ ಪತ್ನಿಯನ್ನು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಕರೆದುಕೊಂಡು ಬಂದು, ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ. ತನ್ನ ಪತ್ನಿಯ ಶೀಲ ಶಂಕಿಸಿ ಈತ ಹೆಚ್‌ಎಲ್ ಪೊಲೀಸ್ ಠಾಣೆ, ಪೊಲೀಸ್ ಆಯುಕ್ತರ ಕಚೇರಿ ಮತ್ತು ಮಹಿಳಾ ಸಹಾಯವಾಣಿ ಕೇಂದ್ರಕ್ಕೆ ಅಲೆದಾಡಿದ್ದಾನೆ.

ಪತಿಯ ಆರೋಪವನ್ನು ಪರಿಶೀಲಿಸಿದ ಸೈಬರ್ ಅಪರಾಧ ವಿಭಾಗದ ಪೊಲೀಸರು, ಆತ ನೋಡಿದ ನೀಲಿ ದೃಶ್ಯದಲ್ಲಿರುವುದು ಆತನ ಪತ್ನಿಯಲ್ಲ ಎಂದು ದೃಢಪಡಿಸಿದ್ದಾರೆ. ಆದರೆ ಪೊಲೀಸರ ಮಾತನ್ನು ನಂಬದ ವಿಕೃತ ಮನಸ್ಸಿನ ಪತಿಗೆ ಮನೋವೈದ್ಯರನ್ನು ಭೇಟಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.

ಇನ್ನು ಮನೋವೈದ್ಯರನ್ನು ಕಾಣಲು ನಿರಾಕರಿಸಿದ ಪತಿಯನ್ನು ತೊರೆದು ಪತ್ನಿ ತವರು ಮನೆಗೆ ಹೋಗಿದ್ದಾಳೆ. ದಂಪತಿಗೆ ಈಗಾಗಲೇ ಒಂದು ಮಗು ಇದ್ದು, ಬೆಂಗಳೂರಿನ ನಿವಾಸಿಯಾಗಿರುವ ಆರೋಪಿ ಪತಿ ವೆಂಕಟೇಶ್ ಇ-ಕಾಮರ್ಸ್ ಪೋರ್ಟಲ್ ವೊಂದರ ಸಾಮಾಗ್ರಿ ವಿತರಕನಾಗಿ ಕೆಲಸ ಮಾಡುತ್ತಿದ್ದಾನೆ.

ವೆಂಕಟೇಶ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ನಿರಂತರ ನೀಲಿ ಚಿತ್ರಗಳ ವೀಕ್ಷಣೆಯಿಂದ ತನ್ನ ಪತ್ನಿಯ ಶೀಲ ಶಂಕಿಸುತ್ತಿದ್ದ ಮತ್ತು ಆಶ್ಲೀಲ ಚಿತ್ರವೊಂದರ ದೃಶ್ಯದಲ್ಲಿರುವುದು ತನ್ನ ಪತ್ನಿಯೇ ಎಂದು ಶಂಕಿಸುತ್ತಿದ್ದಾನೆ ಎಂದು ಪೊಲೀಸ್ ಆಯುಕ್ತರ ವನಿತಾ ಸಹಾಯವಾಣಿ ಕಚೇರಿ ಮೂಲಗಳು ತಿಳಿಸಿವೆ.