ದ್ವೇಷರಹಿತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಶಾಸಕರ ಗುರಿಯಾಗಬೇಕು. ರಾಜಕೀಯವೆಂಬ ಸರ್ಕಸ್‌ನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ರಿಂಗ್‌ಮಾಸ್ಟರ್‌ ಆಗುವ ಮಟ್ಟಕ್ಕೆ ಎಲ್ಲರೂ ಬೆಳೆಯಬೇಕು ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ಬೆಂಗಳೂರು (ಜೂ.26) ದ್ವೇಷರಹಿತ ಸಮಾಜ ನಿರ್ಮಾಣ ಮಾಡುವುದು ಪ್ರತಿಯೊಬ್ಬ ಶಾಸಕರ ಗುರಿಯಾಗಬೇಕು. ರಾಜಕೀಯವೆಂಬ ಸರ್ಕಸ್‌ನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ರಿಂಗ್‌ಮಾಸ್ಟರ್‌ ಆಗುವ ಮಟ್ಟಕ್ಕೆ ಎಲ್ಲರೂ ಬೆಳೆಯಬೇಕು ಎಂದು ವಿಧಾನಸಭೆ ಸ್ಪೀಕರ್‌ ಯು.ಟಿ. ಖಾದರ್‌ ಹೇಳಿದರು.

ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ನೂತನ ಶಾಸಕರಿಗೆ ನೆಲಮಂಗಲದ ಕ್ಷೇಮವನದಲ್ಲಿ ವಿಧಾನಸಭೆ ಸಚಿವಾಲಯದಿಂದ ಏರ್ಪಡಿಸಿರುವ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಇಂದಿನಿಂದ ಶಾಸಕರಿಗೆ ತರಬೇತಿ ಶಿಬಿರ: ಗುರೂಜಿ, ಕರ್ಜಗಿ ಉಪನ್ಯಾಸಕ್ಕೆ ಕೊಕ್‌

ರಾಜಕೀಯವನ್ನು ಗಣಿತ ಎನ್ನುತ್ತಾರೆ. ಆದರೆ, ರಾಜಕೀಯದಲ್ಲಿ ಯಾವುದೇ ಪರಿಹಾರ ಸಿಗುವುದಿಲ್ಲ. ಯಾವುದನ್ನು ಕೂಡಿಸಿ, ಅದರ ಸಂಖ್ಯೆಯನ್ನು ಹೆಚ್ಚಿಸುತ್ತಾರೋ ಅವರು ಉಳಿಯುತ್ತಾರೆ. ಆದರೆ, ಕೂಡಿಸುವ ಬದಲು ಕಳೆಯುವವರು ಶಾಶ್ವತವಾಗಿ ರಾಜಕೀಯದಲ್ಲಿ, ಜನರ ಮನಸ್ಸಿನಲ್ಲಿ ಇರಲು ಸಾಧ್ಯವಿಲ್ಲ. ರಾಜಕೀಯ ಎಂಬುದು ಕೆಮಿಸ್ಟ್ರಿ ಇದ್ದ ಹಾಗೆ. ಇಲ್ಲಿ ಹಲವು ಪ್ರಯೋಗಗಳು ನಡೆಯುತ್ತವೆ. ಅದನ್ನೆಲ್ಲ ಎದುರಿಸುವ ಶಕ್ತಿ ಬೆಳೆಸಿಕೊಳ್ಳಬೇಕು. ರಾಜಕೀಯ ಸರ್ಕಸ್‌ ಕಂಪನಿ ಇದ್ದಂತೆ. ಇಲ್ಲಿ ಹುಲಿ, ಮಂಗ, ಜೋಕರ್‌ ಎಲ್ಲವೂ ಇರುತ್ತದೆ. ಆದರೆ, ರಾಜಕಾರಣಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವ ರಿಂಗ್‌ ಮಾಸ್ಟರ್‌ ಆಗಬೇಕು ಎಂದರು

ರಾಜಕೀಯ ಆಸಕ್ತರಿಗೆ ಕಾಲೇಜು ಆರಂಭ?

ರಾಜಕೀಯಕ್ಕೆ ಬರಲು ಆಸಕ್ತಿ ಇರುವವರಿಗಾಗಿ ರಾಜ್ಯದಲ್ಲಿ ಇನ್ಸ್‌ಟಿಟ್ಯೂಟ್‌ ಆಫ್‌ ಅಡ್ಮಿನಿಸ್ಪ್ರೇಷನ್‌ ಎಂಬ ಕಾಲೇಜು ಆರಂಭದ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಕುರಿತಂತೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಲಾಗುವುದು. ಪದವಿ ಮುಗಿಸಿದವರು 1 ವರ್ಷದ ಕೋರ್ಸ್‌ ತೆಗೆದುಕೊಂಡು, ಆಡಳಿತ, ರಾಜಕೀಯ ಪರಿಸ್ಥಿತಿಗಳ ಬಗ್ಗೆ ಅರಿವು ಪಡೆಯುವ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್‌.ಕೆ. ಪಾಟೀಲ್‌, ಜಮೀರ್‌ ಅಹಮದ್‌ ಖಾನ್‌, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರ ಹೆಗ್ಗಡೆ ಇತರರಿದ್ದರು.

55 ಶಾಸಕರು ಭಾಗಿ:

ತರಬೇತಿ ಕಾರ್ಯಕ್ರಮದಲ್ಲಿ ಮೊದಲ ದಿನ 55 ಶಾಸಕರು ಭಾಗಿಯಾಗಿದ್ದರು. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹಾಗೂ ಪಕ್ಷೇತರ ಶಾಸಕರು ಪಾಲ್ಗೊಂಡು ಹಿರಿಯ ಮಾತುಗಳನ್ನಾಲಿಸಿದರು. ಅಧಿವೇಶನ, ಶಾಸನ ರಚನೆ, ಹಿರಿಯರ ಅನುಭವ, ಕಲಾಪ ಪ್ರಕ್ರಿಯೆಗಳು ಸೇರಿ ಹಲವು ವಿಷಯಗಳ ಬಗ್ಗೆ ಮಾಹಿತಿ ಪಡೆದರು.

ಪೂರ್ವಾಗ್ರಹಪೀಡಿತ ಚರ್ಚೆ ಬೇಡ: ಸ್ಪೀಕರ್‌ ಖಾದರ್‌

ಶಾಸನ ಸಭೆಯು ಕ್ಷೇತ್ರದ ಸಮಸ್ಯೆಯನ್ನು ಸರ್ಕಾರಕ್ಕೆ ತಿಳಿಸುವ ವೇದಿಕೆಯಾಗಿದೆ. ಕಲಾಪದ ಅವಧಿಯಲ್ಲಿ ಶಾಸಕರು ಪೂರ್ಣ ಹಾಜರಿದ್ದು, ವಿಷಯಗಳನ್ನು ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವ ಈ ಸಂದರ್ಭದಲ್ಲಿ ಆಡಳಿತ ಉತ್ತಮ ರೀತಿಯಲ್ಲಿ ನಡೆಯಲಿದೆ.

ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಸಭಾಪತಿ

ಹೊಸದಾಗಿ 70 ಶಾಸಕರನ್ನು ಆಯ್ಕೆ ಮಾಡುವ ಮೂಲಕ ಜನರ ನಿರೀಕ್ಷೆ ಬದಲಾಗಿರುವುದು ತಿಳಿಯುತ್ತದೆ. ಸದನ ಕೇವಲ ಟಾಕಿಂಗ್‌ ಶಾಪ್‌ಗಳಾಗಬಾರದು. ಹೊಸ ಶಾಸಕರು ಗಂಭೀರವಾಗಿದ್ದರೆ ಸಚಿವರು, ಹಿರಿಯ ಶಾಸಕರು ಗಂಭೀರವಾಗಿರುತ್ತಾರೆ. ಅಧಿಕಾರಿಗಳು ಗಂಭೀರವಾಗಿ ಕೆಲಸ ಮಾಡುತ್ತಾರೆ. ನೂತನ ಶಾಸಕರು ಉತ್ತಮ ಕೆಲಸ ಮಾಡಿ, ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗುವಂತಾಗಬೇಕು.

- ಎಚ್‌.ಕೆ. ಪಾಟೀಲ್‌, ಕಾನೂನು ಸಚಿವರು