ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಆರೋಪಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ತನಿಖೆ ವಿಳಂಬವಾಗಿಲ್ಲ, ತಾಂತ್ರಿಕ ಕಾರಣಗಳಿಂದ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದು, ವಿಳಂಬ ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಬೆಂಗಳೂರು (ಡಿ.31): ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ 'ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ' ಎಂದು ಮಾಡಿದ್ದ ಆರೋಪಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಇಂದು ಖಡಕ್ ಸ್ಪಷ್ಟನೆ ನೀಡಿದ್ದಾರೆ. 'ಪೊಲೀಸರು ಕೇವಲ ಕೆಲವರಿಗಲ್ಲ, ಎಲ್ಲರಿಗಾಗಿಯೂ ಇದ್ದಾರೆ' ಎಂದು ತಿಳಿಸಿದರು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಈಗಾಗಲೇ ಸಿಸಿಬಿ (CCB) ಹಂತದಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ ಆಯುಕ್ತರು, 'ಈ ಕೇಸ್ ಮಾತ್ರವಲ್ಲ, ಪ್ರತಿಯೊಂದು ಕೇಸ್ ಅನ್ನು ನಾವು ಸಮಾನವಾಗಿ ನೋಡುತ್ತೇವೆ. ಡಿಸಿಪಿ (DCP) ಹಂತದ ಅಧಿಕಾರಿಗಳೇ ನೇರವಾಗಿ ಈ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಪೊಲೀಸರು ಜನರ ರಕ್ಷಣೆಗಾಗಿ ಇದ್ದಾರೆ ಎಂಬುದನ್ನು ಒತ್ತಿ ಹೇಳಿದರು.
ತನಿಖಾ ವಿಳಂಬದ ಬಗ್ಗೆ ಸ್ಪಷ್ಟನೆ:
ತನಿಖೆ ವಿಳಂಬವಾಗುತ್ತಿದೆ ಎಂಬ ವಿಜಯಲಕ್ಷ್ಮಿ ಅವರ ಪೋಸ್ಟ್ ಕುರಿತು ಮಾತನಾಡಿದ ಅವರು, 'ಪ್ರಕರಣ ದಾಖಲಾದ ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಆದರೆ ಕೆಲವು ಸೈಬರ್ ಅಥವಾ ತಾಂತ್ರಿಕ ಪ್ರಕರಣಗಳಲ್ಲಿ ತಕ್ಷಣಕ್ಕೆ 'ಲೀಡ್' (Lead) ಸಿಗುವುದಿಲ್ಲ. ಲೀಡ್ ಸಿಗಲು ಸಮಯ ಬೇಕಾಗುತ್ತದೆಯೇ ಹೊರತು, ಬೇರೆ ಯಾವುದೇ ಉದ್ದೇಶ ತನಿಖೆಯ ಹಿಂದೆ ಇರುವುದಿಲ್ಲ. ಒಂದು ವೇಳೆ ನಮ್ಮ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರೆ ಅವರ ಮೇಲೂ ಕ್ರಮ ಜರುಗಿಸಲು ನಾವು ಹಿಂಜರಿಯುವುದಿಲ್ಲ' ಎಂದು ಎಚ್ಚರಿಸಿದರು.
ಆಯುಕ್ತರ ಭೇಟಿ ಮಾಡಿದ ವಿಜಯಲಕ್ಷ್ಮಿ: ಕಳೆದ ಬಾರಿ ವಿಜಯಲಕ್ಷ್ಮಿ ಅವರು ಕಚೇರಿಗೆ ಬಂದಾಗ ಆಯುಕ್ತರು ಭೇಟಿಗೆ ಲಭ್ಯವಿರಲಿಲ್ಲ. ಆದರೆ ಇಂದು ಅವರು ಆಯುಕ್ತರನ್ನು ಭೇಟಿ ಮಾಡಿ ಪ್ರಕರಣದ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಸೀಮಾಂತ್ ಕುಮಾರ್ ಸಿಂಗ್, 'ಇಂದು ಅವರು ನನ್ನನ್ನು ಭೇಟಿ ಮಾಡಿದರು. ನಾನು ತಕ್ಷಣವೇ ತನಿಖಾಧಿಕಾರಿಯನ್ನು ಕರೆಸಿ ಮಾತಾಡಿದ್ದೇನೆ ಮತ್ತು ಪ್ರಕರಣದ ಪ್ರಗತಿಯ ಬಗ್ಗೆ ಸೂಚನೆ ನೀಡಿದ್ದೇನೆ' ಎಂದು ತಿಳಿಸಿದರು.
ಹೊಸ ವರ್ಷಕ್ಕೆ ಹತ್ತು ಲಕ್ಷ ಜನರ ನಿರೀಕ್ಷೆ - ಬಿಗಿ ಭದ್ರತೆ
ಮುಂಬರುವ ಹೊಸ ವರ್ಷಾಚರಣೆಯ ಕುರಿತು ಮಾಹಿತಿ ನೀಡಿದ ಅವರು, ಈ ಬಾರಿ ನಗರದಾದ್ಯಂತ ಸುಮಾರು 10 ಲಕ್ಷ ಜನರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅದರಲ್ಲೂ ಎಂ.ಜಿ. ರೋಡ್ ಮತ್ತು ಬ್ರಿಗೇಡ್ ರೋಡ್ ಒಂದರಲ್ಲೇ 4 ಲಕ್ಷಕ್ಕೂ ಅಧಿಕ ಜನ ಸೇರಲಿದ್ದಾರೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ವ್ಯವಸ್ಥಿತವಾಗಿ ಬಿಗಿ ಪೊಲೀಸ್ ಭದ್ರತೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಗೃಹ ಸಚಿವರ ಮನೆಗೆ ಮುತ್ತಿಗೆ - 20 ಮಂದಿ ವಶಕ್ಕೆ
ಇದೇ ಸಂದರ್ಭದಲ್ಲಿ ಗೃಹ ಸಚಿವರ ಮನೆಗೆ ಎಬಿವಿಪಿ (ABVP) ಕಾರ್ಯಕರ್ತರು ನುಗ್ಗಿದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಕಮಿಷನರ್, ಭದ್ರತಾ ಲೋಪಕ್ಕೆ ಅವಕಾಶ ನೀಡದೆ ತಕ್ಷಣವೇ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಈಗಾಗಲೇ 20 ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.


