ನನ್ನ ಜೀವನದಲ್ಲಿ ನಾನು ಯಾವತ್ತೂ ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಏನಿದ್ದರೂ ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ' ಎಂದು ಹೇಳುವ ಮೂಲಕ ವಿಜಯಲಕ್ಷ್ಮಿ ದೂರು ಕುರಿತ ವಿಚಾರಕ್ಕೆ ಕಿಚ್ಚ ಸುದೀಪ್ ಮೌನದ ಪ್ರತಿಕ್ರಿಯೆ ನೀಡಿದರು.
ಬೆಂಗಳೂರು (ಡಿ.31): ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅಭಿನಯದ 'ಮ್ಯಾಕ್ಸ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಇಂದು ಬೆಂಗಳೂರಿನ ಪ್ರತಿಷ್ಠಿತ ಸಂತೋಷ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ ಸುದೀಪ್, ಪೈರಸಿ ಹಾವಳಿ, ಮಗಳು ಸಾನ್ವಿ ಮೇಲಿನ ಬಾಡಿ ಶೇಮಿಂಗ್ ಹಾಗೂ ಇತ್ತೀಚಿನ ವಿವಾದಗಳ ಕುರಿತು ಮುಕ್ತವಾಗಿ ಮಾತನಾಡಿದರು.
ಪೈರಸಿ ಒಂದು ಯುದ್ಧ
ಸಿನಿಮಾ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಿಂಕ್‌ಗಳು ಹರಿದಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸುದೀಪ್, 'ನಾನು ಈ ಹಿಂದೆಯೇ ಪೈರಸಿ ವಿರುದ್ಧ ದನಿ ಎತ್ತಿದ್ದೆ. ಆಗ ಅದನ್ನು ಕೆಲವರು ಯುದ್ಧ ಎಂದರು. ಹೌದು, ಇದು ಯುದ್ಧವೇ. ಪೈರಸಿ ಮಾಡುವುದರಿಂದ ಯಾರಿಗೂ ಲಾಭವಿಲ್ಲ. ಡೌನ್‌ಲೋಡ್ ಮಾಡಿದವರಿಗೆ ಹಣ ಸಿಗುತ್ತದೆಯೇ? ಖಂಡಿತ ಇಲ್ಲ. ಹಾಗಿದ್ದರೂ ಯಾಕೆ ಹೀಗೆ ಮಾಡುತ್ತಿದ್ದಾರೆ? ಇದರ ಹಿಂದೆ ಯಾರಿದ್ದಾರೆ ಎಂಬುದು ಈಗ ನಿಮಗೂ ಅರ್ಥವಾಗಿರಬಹುದು' ಎಂದು ಮಾರ್ಮಿಕವಾಗಿ ನುಡಿದರು.
ಮಗಳ ನಡೆಯನ್ನು ಸಮರ್ಥಿಸಿದ ಕಿಚ್ಚ
ಇತ್ತೀಚೆಗೆ ಸುದೀಪ್ ಪುತ್ರಿ ಸಾನ್ವಿ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಬಾಡಿ ಶೇಮಿಂಗ್ ಮಾಡಲಾಗಿತ್ತು. ಇದಕ್ಕೆ ಸಾನ್ವಿ ತಕ್ಕ ಉತ್ತರ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, 'ನನ್ನ ಮಗಳು ರಿಯಾಕ್ಟ್ ಮಾಡಿದ್ದು ತಪ್ಪಾ? ನಾನು ತಂದೆಯಾಗಿ ಹೇಳಿಕೆ ನೀಡುವ ಮೊದಲೇ ಆಕೆ ತನ್ನ ನಿಲುವು ಸ್ಪಷ್ಟಪಡಿಸಿದ್ದಾಳೆ. ಒಬ್ಬ ಹೆಣ್ಣಾಗಿ ಆಕೆ ಏನು ಮಾಡಬೇಕಿತ್ತೋ ಅದನ್ನೇ ಮಾಡಿದ್ದಾಳೆ. ಆಕೆಯ ಧೈರ್ಯದ ಬಗ್ಗೆ ನನಗೆ ಹೆಮ್ಮೆಯಿದೆ' ಎಂದರು.
ವಿಜಯಲಕ್ಷ್ಮಿ ದೂರು ವಿಚಾರಕ್ಕೆ ನೋ ರಿಯಾಕ್ಷನ್
ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕಿರುಕುಳದ ಕುರಿತು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ವಿಚಾರದ ಬಗ್ಗೆ ಪ್ರಶ್ನಿಸಿದಾಗ ಸುದೀಪ್ ಅಂತರ ಕಾಯ್ದುಕೊಂಡರು. 'ನನ್ನ ಜೀವನದಲ್ಲಿ ನಾನು ಯಾವತ್ತೂ ಬೇರೆಯವರ ವೈಯಕ್ತಿಕ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ. ಏನಿದ್ದರೂ ನನ್ನ ಬಗ್ಗೆ ಮಾತ್ರ ಮಾತನಾಡುತ್ತೇನೆ' ಎಂದು ಹೇಳುವ ಮೂಲಕ ವಿಜಯಲಕ್ಷ್ಮಿ ಅವರ ಹೆಸರನ್ನು ಎಲ್ಲಿಯೂ ಪ್ರಸ್ತಾಪಿಸದೆ ಜಾಣತನದ ಮೌನ ವಹಿಸಿದರು.
ಮೈಸೂರಿಗೆ ಭೇಟಿ
'ಪ್ರತಿ ವರ್ಷ ಡಿಸೆಂಬರ್ 31ರಂದು ನಾನು ಥಿಯೇಟರ್‌ಗೆ ಬರುತ್ತೇನೆ. ಸಂತೋಷ್ ಥಿಯೇಟರ್ ಆಯ್ತು, ಈಗ ಮೈಸೂರಿಗೆ ಹೋಗುತ್ತಿದ್ದೇನೆ. ಅಲ್ಲಿನ ಜನರ ಜೊತೆ ಸಿನಿಮಾ ನೋಡಿ ಹೊಸ ವರ್ಷವನ್ನು ಸಂಭ್ರಮಿಸುತ್ತೇನೆ' ಎಂದು ಅಭಿಮಾನಿಗಳಿಗೆ ಕಿಚ್ಚ ಶುಭ ಕೋರಿದರು.


