Asianet Suvarna News Asianet Suvarna News

ಪೊಲೀಸ್‌ ಇಲಾಖೆ ಟಾಸ್ಕ್: 1.3 ಲಕ್ಷ ಹಳೇ ಕೇಸ್‌ 3 ತಿಂಗಳೊಳಗೆ ತನಿಖೆ ಮುಗಿಸಲು ಗಡುವು!

ಠಾಣೆಗಳ ಗೋದಾಮಿನಲ್ಲಿ ಧೂಳು ತಿನ್ನುತ್ತಿರುವ ಸರಿಸುಮಾರು 1.3 ಲಕ್ಷಕ್ಕೂ ಹೆಚ್ಚಿನ ಹಳೆ ಪ್ರಕರಣಗಳ ವಿಲೇವಾರಿಗೆ ಮುಂದಾಗಿರುವ ರಾಜ್ಯ ಪೊಲೀಸ್‌ ಇಲಾಖೆ, ಈಗ ಹಳೇ ಪ್ರಕರಣಗಳ ತನಿಖೆಯನ್ನು ಮೂರು ತಿಂಗಳ ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವಂತೆ ಪೊಲೀಸರಿಗೆ ಟಾಸ್‌್ಕ ನೀಡಿದೆ.

Police department deadline to complete investigation of 1.3 lakh old cases within 3 months bengaluru rav
Author
First Published Sep 10, 2023, 7:52 AM IST

ಬೆಂಗಳೂರು (ಸೆ.10) :  ಠಾಣೆಗಳ ಗೋದಾಮಿನಲ್ಲಿ ಧೂಳು ತಿನ್ನುತ್ತಿರುವ ಸರಿಸುಮಾರು 1.3 ಲಕ್ಷಕ್ಕೂ ಹೆಚ್ಚಿನ ಹಳೆ ಪ್ರಕರಣಗಳ ವಿಲೇವಾರಿಗೆ ಮುಂದಾಗಿರುವ ರಾಜ್ಯ ಪೊಲೀಸ್‌ ಇಲಾಖೆ, ಈಗ ಹಳೇ ಪ್ರಕರಣಗಳ ತನಿಖೆಯನ್ನು ಮೂರು ತಿಂಗಳ ಕಾಲಮಿತಿಯಲ್ಲಿ ಮುಕ್ತಾಯಗೊಳಿಸುವಂತೆ ಪೊಲೀಸರಿಗೆ ಟಾಸ್‌್ಕ ನೀಡಿದೆ.

ಈ ನಿಗದಿತ ಅವಧಿಯಲ್ಲಿ ಹಳೇ ಪ್ರಕರಣಗಳಿಗೆ ಮುಕ್ತಿ ನೀಡುವ ಅಧಿಕಾರಿಗಳನ್ನು ಪುರಸ್ಕರಿಸಲು ರಾಜ್ಯ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಅಪರಾಧ) ಉಮೇಶ್‌ ಕುಮಾರ್‌ ನಿರ್ಧರಿಸಿದ್ದು, ಈಗಾಗಲೇ ಈ ವಿಲೇವಾರಿ ಸಂಬಂಧ ರಾಜ್ಯದ ಎಲ್ಲ ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಐಜಿಪಿಗಳ ಜತೆ ಎಡಿಜಿಪಿ ಸಮಾಲೋಚಿಸಿದ್ದಾರೆ. 

 

ಮೊಬೈಲ್‌ ಕಳೆದು ಹೋದ್ರೆ ಏನು ಮಾಡಬೇಕು? ಪೊಲೀಸ್‌ ಇಲಾಖೆ ಕ್ರಮ ಅನುಸರಿಸಿ ಮೊಬೈಲ್‌ ಪಡೆದುಕೊಳ್ಳಿ

10 ವರ್ಷಗಳಿಂದ ರಾಜ್ಯದಲ್ಲಿ ಗಂಭೀರ ಸ್ವರೂಪ ಕೃತ್ಯಗಳು (ಕೊಲೆ, ದರೋಡೆ, ಸುಲಿಗೆ, ಅವಳಿ ಕೊಲೆ ಸೇರಿ ಇತರೆ) ಹಾಗೂ ಗಂಭೀರವಲ್ಲದ (ಜಗಳ, ನಿಂದನೆ ಇತ್ಯಾದಿ) ಕೃತ್ಯಗಳ ಸಂಬಂಧ ಸಕಾಲಕ್ಕೆ ತನಿಖೆ ನಡೆಸದೆ ಪತ್ತೆಯಾಗದ ಪ್ರಕರಣಗಳೆಂದು ಹೇಳಿ 1.3 ಲಕ್ಷ ಪ್ರಕರಣಗಳು ಕಡತಗಳಲ್ಲೇ ಉಳಿದಿವೆ. ಹೀಗಾಗಿ ಈ ಪ್ರಕರಣಗಳ ಬಗ್ಗೆ ಪ್ರತಿ ಠಾಣೆಯಿಂದ ಮಾಹಿತಿ ಪಡೆದು ತ್ವರಿತವಾಗಿ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಎಡಿಜಿಪಿ ಉಮೇಶ್‌ ಕುಮಾರ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಪ್ರತಿ ತಿಂಗಳು 2 ಸಾವಿರ ಪ್ರಕರಣಗಳ ತನಿಖೆ:

ಹೊಸದಾಗಿ ದಾಖಲಾಗುವ ಪ್ರಕರಣಗಳ ಜತೆ ಹಳೆ ಪ್ರಕರಣಗಳನ್ನು ಸಹ ಹಂತ ಹಂತವಾಗಿ ಮುಕ್ತಾಯಗೊಳಿಸಲಾಗುತ್ತದೆ. ಈಗ ಪ್ರತಿ ತಿಂಗಳು ಸರಾಸರಿ 2 ಸಾವಿರ ಪ್ರಕರಣಗಳ ತನಿಖೆ ನಡೆಯುತ್ತಿವೆ. ಅಪರಾಧ ಪ್ರಕರಣಗಳ ತನಿಖೆ ಕುರಿತು ಆಗಾಗ್ಗೆ ಪರಿಶೀಲಿಸಿ ಸಭೆ ನಡೆಸಬೇಕು. ಈ ಕುರಿತು ಕೇಂದ್ರ ಕಚೇರಿಗೆ ಕೂಡಾ ನಿಯಮಿತವಾಗಿ ಮಾಹಿತಿ ನೀಡುವಂತೆ ಸಹ ನಿರ್ದೇಶಿಸಲಾಗಿದೆ ಎಂದು ಎಡಿಜಿಪಿ ತಿಳಿಸಿದರು.

ಹಳೇ ಪ್ರಕರಣಗಳ ತನಿಖೆಗೆ ಯಾವುದೇ ಮಾರ್ಗಸೂಚಿ ನೀಡಿಲ್ಲ. ಕಾನೂನು ಪ್ರಕಾರ ಅಧಿಕಾರಿಗಳೇ ಸ್ವಯಂ ಚೌಕಟ್ಟು ರೂಪಿಸಿಕೊಂಡು ಹಳೇ ಪ್ರಕರಣಗಳಿಗೆ ಮುಕ್ತಿ ಕೊಡುವಂತೆ ಹೇಳಿದ್ದೇನೆ. ಆದರೆ ಆದಷ್ಟುಬೇಗ ಪ್ರಕರಣಗಳು ಮುಕ್ತಾಯ ಕಾಣಬೇಕು. ಈ ಬಗ್ಗೆ ಉದಾಸೀನತೆ ತೋರಿದರೆ ಸಹಿಸುವುದಿಲ್ಲ ಎಂದು ಎಡಿಜಿಪಿ ತಾಕೀತು ಮಾಡಿದ್ದಾರೆ.

ಹಳೇ ಕೇಸ್‌ ವಿಲೇವಾರಿ: ರಾಮನಗರ ಪ್ರಥಮ

ರಾಜ್ಯದಲ್ಲಿ ಹಳೇ ಪ್ರಕರಣಗಳ ವಿಲೇವಾರಿಯಲ್ಲಿ ರಾಮನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಇನ್ನುಳಿದಂತೆ ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಳಗಾವಿ, ಧಾರವಾಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸರು ಕೂಡಾ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಎಡಿಜಿಪಿ ಉಮೇಶ್‌ ಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: 700+ ಪಬ್‌, ಬಾರ್‌, ಹೋಟೆಲ್‌ ಮೇಲೆ ಸಿಸಿಬಿ ಪೊಲೀಸರಿಂದ ದಾಳಿ

ನೊಂದವರಿಗೆ ನ್ಯಾಯ

ಹಳೆ ಪ್ರಕರಣಗಳು ವಿಲೇವಾರಿಯಾದರೆ ನೊಂದವರಿಗೆ ಸಹ ನ್ಯಾಯ ಸಿಗಲಿದ್ದು, ಪೊಲೀಸರಿಗೆ ಕೂಡ ಕಾರ್ಯದೊತ್ತಡ ಕಡಿಮೆಯಾಗಲಿದೆ. ತನಿಖೆ ಮುಕ್ತಾಯವಾದ ಬಳಿಕ ನ್ಯಾಯಾಲಯದಲ್ಲಿ ಅಪರಾಧ ಕೃತ್ಯಗಳಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಳಕ್ಕೆ ಸಹ ಗಮನಹರಿಸುತ್ತೇವೆ.

-ಉಮೇಶ್‌ ಕುಮಾರ್‌, ಎಡಿಜಿಪಿ, ಅಪರಾಧ ವಿಭಾಗ

Follow Us:
Download App:
  • android
  • ios