ಬೆಂಗಳೂರಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆ ಜಾರಿ ಮಾಡುವೆ: ನೂತನ ಆಯುಕ್ತ ಕಮಲ್‌ ಪಂತ್‌

ಠಾಣೆಗೆ ಬರುವ ಮುನ್ನವೇ ಜನರ ನೋವಿಗೆ ಸ್ಪಂದನೆ| ನೂತನ ಆಯುಕ್ತರ ಭರವಸೆ| ಪೊಲೀಸರಲ್ಲಿ ವೃತ್ತಿಪರತೆ ಮತ್ತು ವೃತ್ತಿಪರ ಪ್ರಾಮಾಣಿಕತೆ ಕಾಣಿಸಲು ಒತ್ತು ನೀಡುತ್ತೇನೆ| ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟವ್ಯವಸ್ಥೆ ಮುಂದುವರೆಯಲು ಅವಕಾಶ ನೀಡುವುದಿಲ್ಲ|

Police Commissioner Kamal Panth says I will implement the First Response System Bengaluru

ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು(ಆ.01):  ಜನರ ಬಳಿಗೆ ಪೊಲೀಸ್‌ ಇಲಾಖೆ, ಮಹಿಳೆ ಮತ್ತು ಮಕ್ಕಳ ಸುರಕ್ಷತೆಗೆ ಆದ್ಯತೆ ಹಾಗೂ ಪೊಲೀಸರಲ್ಲಿ ವೃತ್ತಿಪರತೆ ಮತ್ತು ವೃತ್ತಿಪರ ಪ್ರಾಮಾಣಿಕತೆ ತರುವೆ. ಇದು ರಾಜಧಾನಿ ಬೆಂಗಳೂರಿನ ನೂತನ ಪೊಲೀಸ್‌ ಆಯುಕ್ತರಾಗಿ ನಿಯೋಜಿತರಾಗಿರುವ ಹಿರಿಯ ಐಪಿಎಸ್‌ ಅಧಿಕಾರಿ ಕಮಲ್‌ ಪಂತ್‌ ಅವರು ನೀಡಿದ ಭರವಸೆ.

ಆಯುಕ್ತರಾಗಿ ನೇಮಕ ಆದೇಶದ ಹೊರಬಿದ್ದ ಬಳಿಕ ಶುಕ್ರವಾರ ಸಂಜೆ ‘ಕನ್ನಡಪ್ರಭ’ಕ್ಕೆ ವಿಶೇಷ ಸಂದರ್ಶನ ನೀಡಿದ ಕಮಲ್‌ ಪಂತ್‌ ಅವರು ನಗರದ ಪೊಲೀಸ್‌ ಆಡಳಿತದ ಬಲವರ್ಧನೆ ಹಾಗೂ ನಾಗರಿಕರ ಹಿತರಕ್ಷಣೆಗೆ ತಾವು ಹೊಂದಿರುವ ಯೋಜನೆಗಳು ಹಾಗೂ ದೂರದೃಷ್ಟಿತ್ವ ಕುರಿತು ಮಾತನಾಡಿದರು.

ಬೆಂಗಳೂರಿನ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿ ಕೂಡಾ ಸೇವೆ ಸಲ್ಲಿಸಿದ್ದೇನೆ. ನಗರದ ರಕ್ಷಣೆಗೆ ನನ್ನ ಮೇಲೆ ವಿಶ್ವಾಸವಿಟ್ಟು ಸರ್ಕಾರ ನೀಡಿರುವ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವೆ ಎಂದು ಅವರು ಅಭಯ ನೀಡಿದರು.

ಭಾಸ್ಕರ್ ರಾವ್ ಜಾಗಕ್ಕೆ ಕಮಲ್ ಪಂಥ್, ಬೆಂಗಳೂರಿಗೆ ಹೊಸ ಕಮಿಷನರ್

ಕಮಲ್‌ ಪಂತ್‌ ಅವರ ಸಂದರ್ಶನ ಪೂರ್ಣ ವಿವರ ಹೀಗಿದೆ.

*ಆಯುಕ್ತರಾಗಿ ಬೆಂಗಳೂರಿನ ನಾಗರಿಕರ ನೀಡುವ ಮೊದಲ ಸಂದೇಶವೇನು?

ಬೆಂಗಳೂರಿನ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ. ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಜನರ ಬಳಿಗೆ ಪೊಲೀಸ್‌ ಇಲಾಖೆ ಕರೆದೊಯ್ಯುವೆ. ದೆಹಲಿ ಮಾದರಿಯಲ್ಲಿ ಫಸ್ಟ್‌ ರೆಸ್ಪಾನ್ಸ್‌ ವ್ಯವಸ್ಥೆಯನ್ನು ಜಾರಿಗೊಳಿಸುತ್ತೇನೆ. ದೆಹಲಿಯಲ್ಲಿ ಠಾಣೆಗೆ ಬರುವ ಮುನ್ನವೇ ಜನರ ನೋವಿಗೆ ಪ್ರಾಥಮಿಕ ಹಂತದಲ್ಲಿ ಸ್ಪಂದಿಸಲಾಗುತ್ತದೆ. ದೂರು ದಾಖಲು 2ನೇ ಹಂತದ ಪ್ರಕ್ರಿಯೆಯಾಗಿದೆ. ಅದೇ ವ್ಯವಸ್ಥೆಯನ್ನು ಬೆಂಗಳೂರಿಗೆ ಪರಿಚಯಿಸುವ ಯೋಜನೆ ಇದೆ.

*ಜನ ಸ್ನೇಹಿ ಆಡಳಿತ ಎಂಬುದು ಘೋಷಣೆಗೆ ಮಾತ್ರ ಸೀಮೀತವಾಗುತ್ತದೆಯೇ?

ಜನರ ಸ್ನೇಹಿ ಆಡಳಿತ ಮಾತಿಗೆ ಸೀಮಿತವಾಗುವುದಿಲ್ಲ. ಮೊದಲು ಅಧಿಕಾರಿಗಳ ಸಭೆ ಕರೆದು ಪ್ರಸುತ್ತ ವ್ಯವಸ್ಥೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ಪೊಲೀಸ್‌ ನಿಯಂತ್ರಣ ಕೊಠಡಿ ಬಲಪಡಿಸುತ್ತೇನೆ. ಹೊಯ್ಸಳ ಹಾಗೂ ಚೀತಾ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಲಾಗುತ್ತದೆ. ರಾತ್ರಿ ಗಸ್ತು ಹೆಚ್ಚಿಸಲಾಗುತ್ತದೆ. ಜನರೊಂದಿಗೆ ನಿರಂತರ ಸಂಪರ್ಕ ಸಾಧಿಸಲಾಗುತ್ತದೆ.

*ಕೊರೋನಾ ಕಾಲದಲ್ಲಿ ಹೊಸ ಜವಾಬ್ದಾರಿ ಆಡಳಿತ ಸುಗಮ ಅನಿಸುತ್ತದೆಯೇ?

ಪ್ರಸುತ್ತ ಕೊರೋನಾ ಸಂದರ್ಭದಲ್ಲಿ ಪೊಲೀಸರು ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಅರಿವಿದೆ. ಸೋಂಕು ವಿರುದ್ಧ ಹೋರಾಟದಲ್ಲಿ ಪೊಲೀಸರು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸೋಂಕಿತರಾಗಿದ್ದಾರೆ. ಕೊರೋನಾ ಕಾಲವು ಪೊಲೀಸರ ಕಾರ್ಯಶೈಲಿಯಲ್ಲಿ ಅಮೂಲಾಗ್ರ ಬದಲಾವಣೆ ತಂದಿದೆ. ಹೀಗಾಗಿ ಕಾಯಿಲೆ ಜತೆಯೇ ನಾವು ಕರ್ತವ್ಯ ನಿರ್ವಹಿಸಬೇಕು. ಈ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಕೊರೋನಾ ನಿರ್ವಹಣೆ ಸಂಬಂಧ ಪೊಲೀಸರಿಗೆ ಹೊಸ ಮಾರ್ಗಸೂಚಿ (ಎಸ್‌ಓಪಿ) ರೂಪಿಸುವ ಚಿಂತನೆ ಇದೆ.

*ಈಗ ಲಂಗು ಲಗಾಮಿಲ್ಲದೆ ಓಡುತ್ತಿರುವ ಸೈಬರ್‌ ಕ್ರೈಂಗೆ ಕಡಿವಾಣ ಬೀಳಲಿದೆಯೇ?

ಜಾಗತಿಕ ಮಟ್ಟದಲ್ಲಿ ಸೈಬರ್‌ ಕ್ರೈಂ ದೊಡ್ಡ ಸಮಸ್ಯೆಯಾಗಿದೆ. ಕೊರೋನಾ ಕಾಲದಲ್ಲಿ ಸೈಬರ್‌ ಅಪರಾಧಗಳ ಪ್ರಮಾಣ ಸ್ವಲ್ಪ ಹೆಚ್ಚಾಗಿದೆ. ಏಕೆಂದರೆ ಕೊರೋನಾ ವೇಳೆ ಡಿಜಿಟಲ್‌ ಮೂಲಕ ಹಣಕಾಸು ವ್ಯವಹಾರವನ್ನು ಜನರು ಹೆಚ್ಚು ನಡೆಸುತ್ತಿದ್ದಾರೆ. ಇಂದು ಜನರಿಗೆ ಡಿಜಿಟಲ್‌ ವ್ಯವಹಾರವು ಉಸಿರಾಟದಷ್ಟೇ ಸಲೀಸಾಗಿದೆ. ಇನ್ನೊಂದೆಡೆ ಇದೇ ಸೈಬರ್‌ ಕ್ರೈಂಗೂ ಕಾರಣವಾಗಿರುವುದು ದುರಂತ. ಈ ಕೃತ್ಯಗಳ ನಿಯಂತ್ರಣಕ್ಕೆ ಸಿಇಎನ್‌ ಠಾಣೆಗಳು ಸ್ಥಾಪಿಸಿದ ಬಳಿಕ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಈಗ ತನಿಖೆಗೆ ಪ್ರಾಶಸ್ತ್ಯ ನೀಡಬೇಕಿದೆ. ಹಾಗಾಗಿ ಠಾಣೆಗಳಿಗೆ ಪ್ರತ್ಯೇಕವಾಗಿ ತರಬೇತಿ ಹೊಂದಿದ ಅಧಿಕಾರಿಗಳು ಮತ್ತು ಸಿಬ್ಬಂದಿ ನೇಮಿಸಲಾಗುತ್ತದೆ. ನುರಿತ ತಜ್ಞರನ್ನು ಸಹ ಬಳಸಿಕೊಳ್ಳಲಾಗುತ್ತದೆ.

*ಸೈಬರ್‌ ಕ್ರೈಂ ಬಳಿಕ ಡ್ರಗ್ಸ್‌ ಮಾಫಿಯಾ ವ್ಯಾಪ್ತಿ ಜೋರಾಗುತ್ತಿದೆ?

ಡ್ರಗ್ಸ್‌ ಮಾರಾಟ ಜಾಲವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅದರ ಕಡಿವಾಣಕ್ಕೆ ಎಲ್ಲ ರೀತಿಯ ಕ್ರಮಗಳನ್ನು ಜರುಗಿಸಲಾಗುತ್ತದೆ. ಶಾಲಾ-ಕಾಲೇಜುಗಳಲ್ಲಿ ಅರಿವು ಮೂಡಿಸಲಾಗಿದೆ. ಈಗ ಡ್ರಗ್ಸ್‌ ಪೂರೈಕೆದಾರರ ಪತ್ತೆಗೆ ಗಮನಹರಿಸಲಾಗುತ್ತದೆ. ವಿದೇಶ ಹಾಗೂ ಸ್ಥಳೀಯ ಪೆಡ್ಲರ್‌ಗಳ ಪತ್ತೆ ಹಚ್ಚುತ್ತೇವೆ. ಡ್ರಗ್ಸ್‌ ಮುಕ್ತ ಬೆಂಗಳೂರು ಮಾಡುವುದು ಗುರಿಯಾಗಿದೆ.

*ಕೊರೋನಾ ಕಾಲದಲ್ಲೂ ಪೊಲೀಸರ ವಿರುದ್ಧ ಭ್ರಷ್ಟಾಚಾರದ ದೂರುಗಳು ಬಂದಿವೆ?

ಪೊಲೀಸರಲ್ಲಿ ವೃತ್ತಿಪರತೆ ಮತ್ತು ವೃತ್ತಿಪರ ಪ್ರಾಮಾಣಿಕತೆ ಕಾಣಿಸಲು ಒತ್ತು ನೀಡುತ್ತೇನೆ. ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಭ್ರಷ್ಟವ್ಯವಸ್ಥೆ ಮುಂದುವರೆಯಲು ಅವಕಾಶ ನೀಡುವುದಿಲ್ಲ. ಹಣ ಅಥವಾ ಲಾಬಿಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ. ಪೊಲೀಸರ ಮೇಲೆ ಅಕ್ರಮ ಚಟುವಟಿಕೆಗಳಿಗೆ ಸಹಕರಿಸಿದ ಆರೋಪಗಳು ಬಂದರೆ ಮುಲಾಜಿಲ್ಲದೆ ಕ್ರಮ ಜರುಗಿಸುತ್ತೇನೆ. ಜನರ ಸಮಸ್ಯೆಗೆ ಪರಿಹರಿಸುವುದು ಪೊಲೀಸರ ಕರ್ತವ್ಯವಾಗಿದೆ. ಅದನ್ನರಿತು ಪೊಲೀಸರ ಕಾರ್ಯನಿರ್ವಹಿಸಬೇಕು.
 

Latest Videos
Follow Us:
Download App:
  • android
  • ios