Asianet Suvarna News Asianet Suvarna News

ಕಿಡ್ನ್ಯಾಪ್‌ ಕೇಸ್‌: ಪೊಲೀಸರ ಗ್ರೇಟ್‌ ಚೇಸ್‌, 24 ತಾಸಲ್ಲೇ ಅಪಹೃತ ಬಾಲಕ ಬಚಾವ್‌!

ಕಿಡ್ನ್ಯಾಪ್‌ ಆದ 24 ತಾಸಲ್ಲೇ ಬಾಲಕನ ರಕ್ಷಣೆ| ಗಾಳಿಪಟದ ಆಸೆ ತೋರಿಸಿ ಭಾರತಿ ನಗರದ ಬಟ್ಟೆ ವ್ಯಾಪಾರಿಯ ಪುತ್ರನ ಅಪಹರಣ| ಕಿಡ್ನ್ಯಾಪರ್‌ಗಳಿಂದ 2 ಕೋಟಿಗೆ ಬೇಡಿಕೆ| ಕಿಡ್ನ್ಯಾಪ್‌ ಬಗ್ಗೆ ತಿಳಿಯುತ್ತಿದ್ದಂತೆ ಫೀಲ್ಡಿಗಿಳಿದ ಖಾಕಿ ಪಡೆ| ಮೊಬೈಲ್‌ ಕರೆ, ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ಆರೋಪಿಗಳ ಪತ್ತೆ| ಸಿನಿಮೀಯ ಶೈಲಿಯಲ್ಲಿ 15 ಕಿ.ಮೀ ಚೆಸ್‌ ಮಾಡಿ ಬಾಲಕನ ರಕ್ಷಣೆ| 

Police Arrested Kidnappers in Bengaluru
Author
Bengaluru, First Published Aug 30, 2020, 7:25 AM IST

ಬೆಂಗಳೂರು(ಆ.30): ಬಟ್ಟೆ ವ್ಯಾಪಾರಿಯೊಬ್ಬರ 11 ವರ್ಷದ ಮಗನನ್ನು ಅಪಹರಿಸಿ, 2 ಕೋಟಿಗೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳನ್ನು ಸಿನಿಮೀಯ ಶೈಲಿಯಲ್ಲಿ 15 ಕಿ.ಮೀ. ಬೆನ್ನಟ್ಟಿ ಹಿಡಿದ ಪೊಲೀಸರು ಅಪಹೃತ ಬಾಲಕನನ್ನು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

ಈ ಅಪಹರಣ ಕೃತ್ಯದ ಮಾಸ್ಟರ್‌ ಮೈಂಡ್‌ ಮೊಹಮ್ಮದ್‌ ಝೈನ್‌ಗೆ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಭಾರತಿನಗರದ ನಿವಾಸಿ ಬಟ್ಟೆ ವ್ಯಾಪಾರಿಯ ಮೊದಲ ಪುತ್ರ ಗುರುವಾರ ರಾತ್ರಿ ಅಪಹರಣಗೊಂಡಿದ್ದು, ಕೃತ್ಯ ನಡೆದ 24 ಗಂಟೆಯೊಳಗೆ ಪ್ರಕರಣವನ್ನು ಬೇಧಿಸುವಲ್ಲಿ ಪುಲಿಕೇಶಿನಗರ ಉಪ ವಿಭಾಗದ ಪೊಲೀಸರು ಯಶಸ್ಸು ಕಂಡಿದ್ದಾರೆ.

ಫಾಹೀಂ, ಮುಜಾಮಿಲ್‌, ಫೈಜಾನ್‌, ಮಹಮ್ಮದ್‌ ಷಾಹೀದ್‌ ಹಾಗೂ ಖಲೀಲ್‌ ಬಂಧಿತರಾಗಿದ್ದು, ತಪ್ಪಿಸಿಕೊಂಡಿರುವ ಪ್ರಮುಖ ಆರೋಪಿಗಳಾದ ಆಸೀಂ ಹಾಗೂ ಅಜೀಂ ಪತ್ತೆಗೆ ತನಿಖೆ ನಡೆದಿದೆ. ಮಗು ಅಪಹರಣದ ಬಗ್ಗೆ ಗುರುವಾರ ಸಂಜೆ ಮಾಹಿತಿ ತಿಳಿದ ಕೂಡಲೇ ವಿಶೇಷ ತಂಡಗಳನ್ನು ರಚಿಸಲಾಯಿತು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳು ಹಾಗೂ ಮೊಬೈಲ್‌ ಕರೆಗಳ ಮಾಹಿತಿ ಆಧರಿಸಿ ಅಪಹರಣಕಾರರನ್ನು ಪತ್ತೆ ಹಚ್ಚಲಾಯಿತು ಎಂದು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

ದೇಶದಲ್ಲಿ ದಿನಕ್ಕೆ 80 ಕೊಲೆ, 289 ಕಿಡ್ನ್ಯಾಪ್‌, 91 ರೇಪ್‌!

ಗಾಳಿಪಟದ ಆಸೆ ತೋರಿಸಿ ಅಪಹರಣ:

ಶಿವಾಜಿನಗರ ಮೊಹಮ್ಮದ್‌ ಝೈನ್‌ ಎಂಬಾತನೇ ಈ ಅಪರಣದ ಮಾಸ್ಟರ್‌ ಮೈಂಡ್‌. ಬಟ್ಟೆಅಂಗಡಿಗೆ ಆಗಾಗ್ಗೆ ಹೋಗುತ್ತಿದ್ದ ಕಾರಣ ವ್ಯಾಪಾರಿ ಬಳಿ ಸಾಕಷ್ಟುಹಣವಿದೆ ಎಂದು ಭಾವಿಸಿ, ಬಟ್ಟೆವ್ಯಾಪಾರಿಯ ಮಗನ ಅಪಹರಣಕ್ಕೆ ತನ್ನ ಸ್ನೇಹಿತ ಆಸೀಂ ಹಾಗೂ ಇತರರ ಜತೆ ಪ್ಲ್ಯಾನ್‌ ಮಾಡಿದ್ದ. ಬಾಲಕನಿಗೆ ಗಾಳಿಪಟ ಹಾರಿಸುವ ಆಸಕ್ತಿ ಇರುವ ವಿಚಾರ ತಿಳಿದ ಆರೋಪಿಗಳು, ಇದನ್ನೇ ಬಳಸಿಕೊಂಡು ಬಾಲಕನನ್ನು ಅಪಹರಿಸಿ ಒತ್ತೆಯಾಗಿಟ್ಟು ಕೋಟ್ಯಂತರ ರು. ವಸೂಲಿ ಮಾಡಬಹುದು ಎಂದು ಸಂಚು ರೂಪಿಸಿದ್ದರು.

ಅಂತೆಯೇ ಗುರುವಾರ ಸಂಜೆ 5.30ರ ವೇಳೆಗೆ ಆಸೀಂ ಹಾಗೂ ಅಜೀಂ, ಬಟ್ಟೆವ್ಯಾಪಾರಿ ಮನೆಗೆ ತೆರಳಿದ್ದರು. ಆಗ ಮನೆಯಲ್ಲಿ ಯಾರು ಇಲ್ಲದನ್ನು ಖಚಿತ ಪಡಿಸಿಕೊಂಡ ಆರೋಪಿಗಳು, ಬಾಲಕನಿಗೆ ಗಾಳಿಪಟವನ್ನು ಕೊಡಿಸುವುದಾಗಿ ಆಸೆ ತೋರಿಸಿ ಮನೆಯಿಂದ ಹೊರ ಕರೆತಂದರು. ಬಳಿಕ ಬಾಲಕನನ್ನು ಕಾರಿನಲ್ಲಿ ಕೂರಿಸಿಕೊಂಡ ಆರೋಪಿಗಳು, ಮಾರ್ಗ ಮಧ್ಯೆ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರಸಿ ಕುಡಿಸಿದ್ದರು. ಬಾಲಕ ಅರೆಪ್ರಜ್ಞೆನಾದ ಬಳಿಕ ತುಮಕೂರಿಗೆ ಕರೆದುಕೊಂಡು ಹೋಗಿ ಕಾರಿನಲ್ಲಿ ಅಲ್ಲೇ ಸುತ್ತಾಡಿಸಿದ್ದರು. ನಂತರ ರಾತ್ರಿ 1 ಗಂಟೆಗೆ ಬಾಲಕನ ತಂದೆಗೆ ಕರೆ ಮಾಡಿ 2 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆಯುಕ್ತರು ವಿವರಿಸಿದರು.

24 ಗಂಟೆ ನಿರಂತರ ಕಾರ್ಯಾಚರಣೆ:

ಇತ್ತ ಮಗ ಕಾಣೆಯಾಗುತ್ತಿದ್ದಂತೆ ಕಂಗಲಾಗಿದ್ದ ಪೋಷಕರಿಗೆ ಅಪಹರಣಕಾರರ ಕರೆ ಮತ್ತಷ್ಟು ಭೀತಿ ಸೃಷ್ಟಿಸಿತು. ತಕ್ಷಣವೇ ಭಾರತಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಈ ಅಪಹರಣದ ಮಾಹಿತಿ ಪಡೆದ ಕೂಡಲೇ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ, ಪುಲಿಕೇಶಿನಗರ ಉಪ ವಿಭಾಗದ ಎಸಿಪಿ ತಬಾರಕ್‌ ಫಾತಿಮಾ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಸಿರಾಜುದ್ದೀನ್‌, ಆನಂದ ನಾಯ್‌್ಕ, ಶಿವಪ್ರಸಾದ್‌, ಸತೀಶ್‌ ಅವರನ್ನೊಳಗೊಂಡ ಐದು ವಿಶೇಷ ತಂಡಗಳನ್ನು ರಚಿಸಿದರು. ಅಪಹರಣವಾದ ಮಗು ಮತ್ತು ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡಗಳಾಗಿ ಕಾರ್ಯನಿರ್ವಹಿಸಿದರು. ಒಂದು ತಂಡ ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿದರೆ, ಮತ್ತೊಂದು ಮೊಬೈಲ್‌ ಕರೆಗಳನ್ನು ತಪಾಸಣೆ ನಡೆಸಿತು. ಉಳಿದವರು ಆರೋಪಿಗಳ ಪೂರ್ವಾಪರ ಮಾಹಿತಿ ಜಾಡು ಶೋಧನೆಗಿಳಿಯಿತು. ಕೊನೆಗೆ ತುಮಕೂರಿನಲ್ಲಿ ಆರೋಪಿಗಳ ಸುಳಿವು ಸಿಕ್ಕಿತು ಎಂದು ಮಾಹಿತಿ ನೀಡಿದರು.

20 ನಿಮಿಷ, 15 ಕಿ.ಮೀ ಚೇಸಿಂಗ್‌!

ಬಾಡಿಗೆ ಸ್ವಿಫ್ಟ್‌ ಕಾರಿನಲ್ಲಿ ತುಮಕೂರಿಗೆ ಆಸೀಂ ತಂಡ ಮಗುವನ್ನು ಕರೆದೊಯ್ದರೆ, ಮೊಹಮ್ಮದ್‌ ಝೈನ್‌ ಭಾರತಿನಗರದಲ್ಲೇ ಉಳಿದು ವ್ಯಾಪಾರಿ ಮೇಲೆ ನಿಗಾವಹಿಸಿದ್ದ. ಬಾಲಕನ ತಂದೆಗೆ ಆಸೀಂ ಕರೆ ಮಾಡಿ, ಹಣ ತೆಗೆದುಕೊಂಡು ತುಮಕೂರಿಗೆ ಬರುವಂತೆ ಸೂಚಿಸಿದ್ದ. ತುಮಕೂರಿಗೆ ಹಣ ನೀಡುವ ನೆಪದಲ್ಲಿ ಶುಕ್ರವಾರ ರಾತ್ರಿ ಪೋಷಕರ ಸೋಗಿನಲ್ಲಿ ತೆರಳಿದ್ದ ಪೊಲೀಸರು, ಅಲ್ಲಿ ಕಾರಿನ ಹಿಂಬದಿ ಮಗು ಕುಳಿತಿರುವುದನ್ನು ಗಮನಿಸಿದರು. ಕೂಡಲೇ ಆ ಕಾರನ್ನು ಅಡ್ಡಗಟ್ಟಲು ಮುಂದಾದರು. ಈ ವೇಳೆ ಎಚ್ಚೆತ್ತ ಆರೋಪಿಗಳು ಕಾರು ನಿಲ್ಲಿಸದೆ ಪರಾರಿಯಾದರು. ಈ ಹಂತದಲ್ಲಿ ಸುಮಾರು 20 ನಿಮಿಷ, 15 ಕಿ.ಮೀ. ದೂರ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದರು. ಕೊನೆಗೆ ತುಮಕೂರಿನ ಗೌತಮನಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಆರೋಪಿಗಳ ಕಾರು ಗದ್ದೆಗೆ ಕಾರು ಉರುಳಿ ಬಿದ್ದಿದೆ. ತಕ್ಷಣವೇ ಕಾರಿನಲ್ಲಿದ್ದ ಮಗುವನ್ನು ರಕ್ಷಿಸಿದ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಮಾಸ್ಟರ್‌ ಮೈಂಡ್‌ಗೆ ಗುಂಡು

ಶ್ಯಾಂಪುರ ಮುಖ್ಯರಸ್ತೆಯಲ್ಲಿ ಮಾಸ್ಟರ್‌ ಮೈಂಡ್‌ ಮೊಹಮ್ಮದ್‌ ಝೈನ್‌ ಹಾಗೂ ಇತರರ ಇರುವಿಕೆ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತು. ಅವರನ್ನು ಬಂಧಿಸಲು ತೆರಳಿದ ತನಿಖಾ ತಂಡದ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಆರೋಪಿಗಳು ಯತ್ನಿಸಿದರು. ಈ ವೇಳೆ ಕಾನ್‌ಸ್ಟೇಬಲ್‌ ರಾಜು ಉಜ್ಜನಗೌಡರ್‌ ಅವರಿಗೆ ಪೆಟ್ಟಾಗಿದೆ. ತಕ್ಷಣವೇ ಆತ್ಮರಕ್ಷಣೆಗೆ ಭಾರತಿನಗರ ಠಾಣೆ ಇನ್ಸ್‌ಪೆಕ್ಟರ್‌ ಆನಂದ್‌ ನಾಯ್ಕ ಅವರು ಹಾರಿಸಿದ ಗುಂಡು ಮೊಹಮ್ಮದ್‌ ಬಲಗಾಲಿಗೆ ಬಿದ್ದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕಮಲ್‌ ಪಂತ್‌ ವಿವರಿಸಿದರು.

ನಾಪತ್ತೆ, ಬಳಿಕ ಕಿಡ್ನಾಪ್‌

ತಮ್ಮ ಪುತ್ರ ಆಟವಾಡಲು ಹೋಗಿ ತಪ್ಪಿಸಿಕೊಂಡಿದ್ದಾನೆ ಎಂದು ಭಾವಿಸಿದ್ದ ಪೋಷಕರು, ಮೊದಲು ಕಣ್ಮೆರೆ ಬಗ್ಗೆ ದೂರು ದಾಖಲಿಸಿದ್ದರು. ಆದರೆ ರಾತ್ರಿ 1 ಗಂಟೆ ವ್ಯಾಪಾರಿಗೆ ಕರೆ ಮಾಡಿದ ಆಸೀಂ, ನಿನ್ನ ಮಗನನ್ನು ಅಪಹರಿಸಿದ್ದೇನೆ. 2 ಕೋಟಿ ಕೊಟ್ಟರೆ ಬಿಡುತ್ತೇವೆ. ನಿನ್ನ ಅಂಗಡಿಯಲ್ಲಿ ಒಂದು ಪತ್ರವಿದೆ. ಅದನ್ನು ಓದಿಕೋ. ಪೊಲೀಸರಿಗೆ ದೂರು ಕೊಟ್ಟರೆ ಸರಿಯಿರಲ್ಲ ಎಂದು ಬೆದರಿಸಿದ್ದ. ಬಳಿಕ ಶುಕ್ರವಾರ ನಸುಕಿನಲ್ಲಿ ಮಗು ಅಪಹರಣವಾಗಿರುವ ಬಗ್ಗೆ ಪ್ರಕರಣ ದಾಖಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಲಕನ ಪ್ರಕರಣವನ್ನು ಶೀಘ್ರವೇ ಪತ್ತೆ ಹಚ್ಚಿದ ಪೂರ್ವ ವಿಭಾಗದ ಪೊಲೀಸರ ಕಾರ್ಯ ಪ್ರಶಂಸನೀಯ. ತನಿಖಾ ತಂಡಕ್ಕೆ 50 ಸಾವಿರ ಬಹುಮಾನ ನೀಡಿ ಅಭಿನಂದಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಅವರು ತಿಳಿಸಿದ್ದಾರೆ. 
 

Follow Us:
Download App:
  • android
  • ios