ಪೋಕ್ಸೋ: ಸಂತ್ರಸ್ತರಿಗೆ ಆರೋಪಿ ಜಾಮೀನು ಮಾಹಿತಿ ನೀಡೋದು ಕಡ್ಡಾಯ -ಹೈಕೋರ್ಟ್
ಪೋಕ್ಸೋ ಕಾಯ್ದೆಯಡಿ ದಾಖಲಾದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸಮಯದಲ್ಲಿ ಸಂತ್ರಸ್ತರು ಬದುಕುಳಿದಿದ್ದರೆ ಅವರಿಗೆ ಅಥವಾ ದೂರುದಾರರಿಗೆ ವಿಚಾರಣೆಯ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಬೆಂಗಳೂರು (ಅ.16) : ಪೋಕ್ಸೋ ಕಾಯ್ದೆಯಡಿ ದಾಖಲಾದ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಸಮಯದಲ್ಲಿ ಸಂತ್ರಸ್ತರು ಬದುಕುಳಿದಿದ್ದರೆ ಅವರಿಗೆ ಅಥವಾ ದೂರುದಾರರಿಗೆ ವಿಚಾರಣೆಯ ಮಾಹಿತಿ ನೀಡುವುದು ಕಡ್ಡಾಯ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪೋಕ್ಸೋ ಪ್ರಕರಣವೊಂದರಲ್ಲಿ ಆರೋಪಿಗೆ ಅಧೀನ ನ್ಯಾಯಾಲಯ ನೀಡಿದ್ದ ಜಾಮೀನು ರದ್ದುಪಡಿಸಿದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅವರ ಪೀಠ, ಪೋಕ್ಸೋ ಪ್ರಕರಣಗಳಲ್ಲಿನ ಆರೋಪಿಯ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯಗಳು ಪಾಲಿಸಬೇಕಾದ ನಿಯಮಗಳ ಕುರಿತು ಹಲವು ನಿರ್ದೇಶನಗಳನ್ನು ನೀಡಿದೆ.
ಚಿತ್ರದುರ್ಗ ಮುರುಘಾ ಶ್ರೀಗಳ ಪೋಕ್ಸೋ ಕೇಸ್ ಆರೋಪಿ ಪರಮಶಿವಯ್ಯಗೆ ಜಾಮೀನು ಮಂಜೂರು
ನಿರ್ದೇಶನಗಳು:
ಪೋಕ್ಸೋ ಪ್ರಕಣದ ಯಾವುದೇ ಆರೋಪಿ ಸಾಮಾನ್ಯ ಅಥವಾ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದರೆ, ಅರ್ಜಿಯ ಬಗ್ಗೆ ಹಾಗೂ ಅದರ ವಿಚಾರಣಾ ದಿನಾಂಕದ ಮಾಹಿತಿಯನ್ನು ಸಂತ್ರಸ್ತರು ಅಥವಾ ದೂರುದಾರರಿಗೆ ನ್ಯಾಯಾಲಯದ ರಿಜಿಸ್ಟ್ರಿ ಒದಗಿಸಬೇಕು. ಆರೋಪಿ ಮಧ್ಯಂತರ ಜಾಮೀನು ಕೋರಿದ್ದರೆ, ಅಂತಹ ಸಮಯದಲ್ಲಿ ನ್ಯಾಯಾಲಯ ಕಾರಣ ನಮೂದಿಸಿ ಸೂಕ್ತ ಆದೇಶ ಹೊರಡಿಸಬಹುದು. ಒಂದೊಮ್ಮೆ ದೂರುದಾರರು/ ಸಂತ್ರಸ್ತರು ದೊರಕದೇ ಇದ್ದಾಗ, ಆ ಕಾರಣಗಳನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್ (ಸರ್ಕಾರ) ವಸ್ತುಸ್ಥಿತಿ ವರದಿ ಸಲ್ಲಿಸಬೇಕು. ಅದನ್ನು ಪರಿಗಣಿಸಿ ನ್ಯಾಯಾಲಯ ಸೂಕ್ತ ಆದೇಶ ಮಾಡಬಹುದು ಎಂದು ಹೈಕೋರ್ಟ್ ನಿರ್ದೇಶಿಸಿದೆ.
ಅಲ್ಲದೆ, ನೋಟಿಸ್ ನೀಡಿದ ನಂತರವೂ ದೂರುದಾರರು/ಸಂತ್ರಸ್ತರು ವಿಚಾರಣೆಯಲ್ಲಿ ಭಾಗವಹಿಸದಿದ್ದರೆ ನ್ಯಾಯಾಲಯ ಆರೋಪಿಯ ಜಾಮೀನು ಅರ್ಜಿಯನ್ನು ಮೆರಿಟ್ ಆಧಾರದ ಮೇಲೆ ನಿರ್ಧರಿಸಬಹುದು. ದೂರುದಾರರು/ಸಂತ್ರಸ್ತರಿಗೆ ಅಪ್ರಾಪ್ತರಾಗಿದ್ದರೆ, ಅವರನ್ನು ವಿಚಾರಣಾ ಪ್ರಕ್ರಿಯೆಯಲ್ಲಿ ಪಕ್ಷಗಾರರನ್ನಾಗಿ ಮಾಡಬಾರದು. ಅಪ್ರಾಪ್ತ ಮಾಹಿತಿದಾರ/ಸಂತ್ರಸ್ತೆಗೆ ನೋಟಿಸ್ ನೀಡುವಂತಿಲ್ಲ. ಅವರ ಪೋಷಕರಿಗೆ, ಪಾಲಕರಿಗೆ ನೋಟಿಸ್ ನೀಡಬೇಕು. ಆರೋಪಿ ಜಾಮೀನು ಅರ್ಜಿಯಲ್ಲಿ ಸಂತ್ರಸ್ತರು/ದೂರುದಾರರನ್ನು ಪ್ರತಿವಾದಿ ಮಾಡದಿದ್ದರೆ ಆಗ ಅವರಿಗೆ ನೋಟಿಸ್ ತಲುಪಿಸಲು ಕೋರ್ಟ್ ರಿಜಿಸ್ಟ್ರಿ ಕ್ರಮ ತೆಗೆದುಕೊಳ್ಳಬೇಕು. ಸಂತ್ರಸ್ತೆಯ ವಾದ ಆಲಿಸಿದ ನಂತರವೇ ಜಾಮೀನು ಅರ್ಜಿ ಇತ್ಯರ್ಥಪಡಿಸಬೇಕು ಎಂದು ಹೈಕೋರ್ಟ್ ಆದೇಶದಲ್ಲಿ ಸೂಚಿಸಿದೆ.
ಪ್ರಕರಣದ ಹಿನ್ನೆಲೆ:
ಪ್ರಕರಣದ ಸಂತ್ರಸ್ತೆಗೆ ಸದ್ಯ 24 ವರ್ಷ. 2014ರಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ವೇಳೆ ಸಂತ್ರಸ್ತೆಯನ್ನು ಆರೋಪಿ ಪ್ರೀತಿಸುತ್ತಿದ್ದ. ಸಂತ್ರಸ್ತೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಹಾಗೂ ಮನೆಯಲ್ಲಿ ಪೋಷಕರು ಇಲ್ಲದ ವೇಳೆ ಅನೇಕ ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದನು. 2020ರಲ್ಲಿ ಸಂತ್ರಸ್ತೆ ಗರ್ಭಿಣಿಯಾಗಿದ್ದಾಗ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸಿದ್ದ. 2021ರಲ್ಲಿ ಸಂತ್ರಸ್ತೆ ಮತ್ತು ಆರೋಪಿಯ ವಿವಾಹ ನಿಶ್ಚಿತಾರ್ಥ ನಡೆದಿತ್ತು. ಆದರೆ, ತನ್ನ ಪೋಷಕರಿಗೆ ಈ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದ ಆರೋಪಿ, ಸ್ನೇಹಿತರನ್ನು ಸಂತ್ರಸ್ತೆ ಮನೆಗೆ ಕಳುಹಿಸಿ ಮದುವೆಯಾದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿಸಿದ್ದ.
ಹೆಂಡತಿ ಅನೈತಿಕ ಸಂಬಂಧವಿಟ್ಟುಕೊಂಡು ಜೀವನಾಂಶ ಕೇಳುವಂತಿಲ್ಲ: ಹೈಕೋರ್ಟ್
2022ರಲ್ಲಿ ಸಂತ್ರಸ್ತೆ ದೂರು ನೀಡಿದ್ದರು. ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ 2022ರ ಡಿ.30ರಂದು ವಿಚಾರಣಾ ನ್ಯಾಯಾಲಯ ಆದೇಶಿಸಿತ್ತು.
ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೇಟ್ಟಿಲೇರಿದ್ದ ಸಂತ್ರಸ್ತೆ, ಆರೋಪಿಯ ಜಾಮೀನು ಅರ್ಜಿ ವಿಚಾರಣೆ ಕುರಿತ ಮಾಹಿತಿಯನ್ನು ನಮಗೆ ನೀಡಿಲ್ಲ. ನಮ್ಮ ವಾದ ಆಲಿಸದೇ ಜಾಮೀನು ನೀಡಲಾಗಿದೆ ಎಂದು ಆಕ್ಷೇಪಿಸಿದ್ದರು. ಇದೀಗ ಹೈಕೋರ್ಟ್, ಆರೋಪಿಗೆ ಜಾಮೀನು ಮಂಜೂರು ಆದೇಶ ರದ್ದುಪಡಿಸಿ ಸಂತ್ರಸ್ತೆ ವಾದ ಆಲಿಸಿ ಮೆರಿಟ್ ಆಧಾರದ ಮೇಲೆ ಆರೋಪಿಯ ಜಾಮೀನು ಅರ್ಜಿ ಇತ್ಯರ್ಥಪಡಿಸಬೇಕೆಂದು ವಿಚಾರಣಾ ನ್ಯಾಯಾಲಯಕ್ಕೆ ಆದೇಶಿಸಿದೆ.