ಬೆಂಗಳೂರು (ನ.30):  ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಳೆದ ಏಳು ತಿಂಗಳಿನಿಂದ ಪಡಿತರ ಚೀಟಿದಾರರಿಗೆ ನೀಡುತ್ತಿದ್ದ ಉಚಿತ ಅಕ್ಕಿ, ಬೇಳೆ ನ.30ಕ್ಕೆ ಅಂತ್ಯಗೊಳ್ಳಲಿದೆ. ಫಲಾನುಭವಿಗಳಿಗೆ ಡಿಸೆಂಬರ್‌ನಿಂದ ಕೇವಲ ರಾಜ್ಯದ ಪಾಲಿನ ಆಹಾರ ಧಾನ್ಯ ಮಾತ್ರ ಲಭ್ಯವಾಗಲಿದೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಕಳೆದ ಏಪ್ರಿಲ್‌ನಿಂದ ಪಡಿತರಚೀಟಿ ಹೊಂದಿರುವ ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ 1 ಕೆಜಿ ಕಡಲೆಕಾಳನ್ನು ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ ಯೋಜನೆಯಡಿ ಹಂಚಿಕೆ ಮಾಡಿತ್ತು. ಹಾಗಾಗಿ ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ ತಲಾ 2 ಕೆಜಿ ಗೋಧಿ, 1ಕೆಜಿ ಕಡಲೆಕಾಳು ಲಭ್ಯವಾಗುತ್ತಿತ್ತು. ಇದೀಗ ಕೇಂದ್ರ ಸರ್ಕಾರದ ಆದೇಶದಂತೆ ಈ ಯೋಜನೆ ನವೆಂಬರ್‌ ಅಂತ್ಯಕ್ಕೆ ಕೊನೆಗೊಳ್ಳಲಿದೆ.

ಪಡಿತರ ಫಲಾನುಭವಿಗಳಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್ : ಸಿಗುತ್ತೆ ಸ್ಪೆಷಲ್ ಅಕ್ಕಿ .

ರಾಜ್ಯದಲ್ಲಿ ಅಂತ್ಯೋದ್ಯಮ ಮತ್ತು ಬಿಪಿಎಲ್‌ ಪಡಿತರ ಚೀಟಿ ಒಟ್ಟು 1,27,86,213 ಇದ್ದು, 4,35,519,938 ಫಲಾನುಭವಿಗಳು ಇದ್ದಾರೆ. ಪ್ರತಿ ತಿಂಗಳು ರಾಜ್ಯ ಸರ್ಕಾರ ಅಂದಾಜು 2.40 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಧಾನ್ಯಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತಿದೆ. ಕೇಂದ್ರ ಸರ್ಕಾರ ಗರೀಬ್‌ ಕಲ್ಯಾಣ್‌ ಯೋಜನೆಯಡಿ ಕಳೆದ ಏಪ್ರಿಲ್‌ನಿಂದ ನವೆಂಬರ್‌ ಅಂತ್ಯದವರಗೆ ಪ್ರತಿ ತಿಂಗಳು ಅಷ್ಟೇ ಪ್ರಮಾಣದ (2.40 ಲಕ್ಷ ಮೆಟ್ರಿಕ್‌ ಟನ್‌) ಆಹಾರ ಧಾನ್ಯವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿತ್ತು.

ಕೋವಿಡ್‌-19 ಸಂಕಷ್ಟದ ಪರಿಸ್ಥಿತಿ ನಿರ್ವಹಿಸಲು ಕೇಂದ್ರ ಸರ್ಕಾರ ನವೆಂಬರ್‌ವರೆಗೂ ಉಚಿತ ಅಕ್ಕಿ, ಬೆಳೆಯನ್ನು ಗರೀಬ್‌ ಕಲ್ಯಾಣ್‌ ಯೋಜನೆಯಡಿ ವಿತರಿಸುವಂತೆ ಆದೇಶಿಸಿತ್ತು. ಇದೀಗ ನವೆಂಬರ್‌ ಮುಕ್ತಾಯದ ಹಂತದಲ್ಲಿದ್ದು ಉಚಿತ ಪಡಿತರ ಯೋಜನೆಯನ್ನು ಮುಂದುವರೆಸಬೇಕೇ? ಬೇಡವೇ? ಎಂಬುದವರ ಕುರಿತು ಇಲಾಖೆಗೆ ಯಾವುದೇ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿಲ್ಲ.

ಹೀಗಾಗಿ ನವೆಂಬರ್‌ ಅಂತ್ಯಕ್ಕೆ ಯೋಜನೆ ಅಂತ್ಯಗೊಳ್ಳಲಿದ್ದು, ಡಿಸೆಂಬರ್‌ನಿಂದ ಅಂತ್ಯೋದಯ ಪಡಿತರ ಕಾರ್ಡು ಹೊಂದಿರುವ ಕುಟುಂಬಕ್ಕೆ 30 ಕೆಜಿ ಅಕ್ಕಿ 2 ಕೆಜಿ ಗೋಧಿ ಹಾಗೂ ಬಿಪಿಎಲ್‌ ಪಡಿತರ ಚೀಟಿ ಫಲಾನುವಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕುಟುಂಬಕ್ಕೆ ಎರಡು ಕೆಜಿ ಗೋಧಿ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಡಾ.ಶಮ್ಲಾ ಇಕ್ಬಾಲ್‌ ಅವರು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.