PM Modi Isro Visit: ಚಂದ್ರಯಾನ 3 ಲ್ಯಾಂಡಿಂಗ್ ಸೈಟ್ನ ಹೆಸರು ಘೋಷಿಸಲಿದ್ದಾರೆಯೇ ಪ್ರಧಾನಿ ಮೋದಿ?
ಪ್ರಧಾನಿ ನರೇಂದ್ರ ಮೋದಿ ಗ್ರೀಸ್‌ನ ಅಥೇನ್ಸ್‌ನಿಂದ ನೇರವಾಗಿ ಬೆಂಗಳೂರಿಗೆ ಆಗಮಿಸಿದ್ದು, ಇಸ್ರೋ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಅವರು ಮಹತ್ವದ ಘೋಷಣೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರು (ಆ.26): ದಕ್ಷಿಣ ಆಫ್ರಿಕಾ ಹಾಗೂ ಗ್ರೀಸ್ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿ ಶನಿವಾರ ನೇರವಾಗಿ ಬೆಂಗಳೂರಿಗೆ ಆಗಮಿಸಿದರು. ಪ್ರಧಾನಮಂತ್ರಿಯವರ ನಿಗದಿತ ವೇಳಾಪಟ್‌ಟಿಯಲ್ಲಿ ಈ ಕಾರ್ಯಕ್ರಮವಿದ್ದಿರಲಿಲ್ಲ. ಆದರೆ, ಚಂದ್ರಯಾನ-3 ದೊಡ್ಡ ಮಟ್ಟದ ಯಶಸ್ಸು ಕಂಡ ಬಳಿಕ, ದಕ್ಷಿಣ ಆಫ್ರಿಕಾದಿಂದಲೇ ಇಸ್ರೋ ಅಭಿಮಾನಿಗಳನ್ನು ಮೋದಿ ಅಭಿನಂದಿಸಿದ್ದರು. ಈ ವೇಳೆ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ನೇರವಾಗಿ ದೂರವಾಣಿ ಕರೆ ಮಾಡಿದ್ದ ಪ್ರಧಾನಿ ಮೋದಿ ಇಸ್ರೋಗೆ ಸ್ವತಃ ಬಂದು ತಮ್ಮೊಂದಿಗೆ ಮಾತನಾಡುವುದಾಗಿ ತಿಳಿಸಿದ್ದರು. ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆ ಮುಗಿಸಿ ಶುಕ್ರವಾರ ಅಥೇನ್ಸ್‌ಗೆ ತೆರಳಿದ್ದ ಪ್ರಧಾನಿ ಮೋದಿ, ಅಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅದಲ್ಲದೆ, ಗ್ರೀಸ್ ಸರ್ಕಾರದ 2ನೇ ಅತಿದೊಡ್ಡ ಗೌರವವನ್ನೂ ಪಡೆದುಕೊಂಡಿದ್ದರು. ತಡರಾತ್ರಿ ಗ್ರೀಸ್‌ನ ಅಥೇನ್ಸ್‌ನಿಂದಲೇ ನೇರವಾಗಿ ಬೆಂಗಳೂರಿಗೆ ಆಗಮಿಸಿದ ಅವರು ಬೆಳಗ್ಗೆ 5.30ರ ವೇಳೆಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ ವಂದಿತಾ ಶರ್ಮ ಸ್ವಾಗತ ಮಾಡಿದ್ದರು.
ಇನ್ನು ಪ್ರಧಾನಿ ಮೋದಿ ಇಸ್ರೋಗೆ ಭೇಟಿ ನೀಡಿ ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎನ್ನುವುದನ್ನು ಇಸ್ರೋ ಕೂಡ ಟ್ವೀಟ್ ಮಾಡಿ ಖಚಿತ ಪಡಿಸಿದೆ. ಇದರ ನಡುವೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಚಂದ್ರಯಾನ-3 ಲ್ಯಾಂಡಿಂಗ್ ಸೈಟ್‌ಗೆ ಹೆಸರನ್ನು ಘೋಷಣೆ ಮಾಡಬಹುದು ಎನ್ನಲಾಗಿದೆ. ಚಂದ್ರಯಾನ-1 ವೇಳೆ ಮೂನ್ ಇಂಪ್ಯಾಕ್ಟ್ ಪ್ರೋಬ್ ಬಿದ್ದ ಸ್ಥಳವನ್ನು 2008ರಲ್ಲಿ ಅಂದು ಇದ್ದ ಕೇಂದ್ರ ಸರ್ಕಾರ ಜವಾಹರ್ ಪಾಯಿಂಟ್ ಎಂದು ಹೆಸರು ನೀಡಿತ್ತು. ಈ ಬಾರಿ ಪ್ರಧಾನಿ ಮೋದಿ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳಕ್ಕೆ ಯಾವ ಹೆಸರು ನೀಡಲಿದ್ದಾರೆ ಎನ್ನುವ ಕುತೂಹಲವಿದೆ.
Nehru Point in Moon: ಭೂಮಿಯ ಮೇಲೆ ಇಂದಿರಾ ಪಾಯಿಂಟ್, ಚಂದ್ರನ ಮೇಲಿದೆ ನೆಹರು ಪಾಯಿಂಟ್!
ಚಂದ್ರಯಾನ-3 ಆಯ್ತು.. ಚಂದ್ರಯಾನ-4ಗೆ ರೆಡಿಯಾದ ಇಸ್ರೋ!