Koppal: ಅಂಜನಾದ್ರಿ ಬೆಟ್ಟಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ: ವಿಶೇಷ ಪೂಜೆ
ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದರ ಭಾಗವಾಗಿ ಇದೀಗ ಅಂಜನಾದ್ರಿಗೆ ಇಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಭೇಟಿ ನೀಡಿದರು.
ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಪ್ಪ
ಕೊಪ್ಪಳ (ಡಿ.09): ಇತ್ತೀಚಿನ ದಿನಗಳಲ್ಲಿ ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿ ಪರ್ವತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದರ ಭಾಗವಾಗಿ ಇದೀಗ ಅಂಜನಾದ್ರಿಗೆ ಇಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಭೇಟಿ ನೀಡಿದರು. ಹಾಗಾದ್ರೆ ಬನ್ನಿ ರಾಜ್ಯಪಾಲರ ಅಂಜನಾದ್ರಿಯ ಭೇಟಿಯ ಹೈಲೈಟ್ಸ್ ಏನು ಅನ್ನೋದನ್ನ ನೋಡೋಣ.
ರಾಜ್ಯಪಾಲರಿಂದ ವಿಶೇಷ ಪೂಜೆ: ನಿನ್ನೆ (ಗುರುವಾರ) ಹಂಪಿ ಕನ್ನಡ ವಿವಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಇಂದು ಬೆಳಿಗ್ಗೆ 7.30 ಕ್ಕೆ ಅಂಜನಾದ್ರಿಗೆ ಭೇಟಿ ನೀಡಿದರು. ಅಂಜನಾದ್ರಿ ಬೆಟ್ಟ ಏರಲು ಸಾಧ್ಯವಾಗದ ಕಾರಣ ಜಿಲ್ಲಾ ಆಡಳಿತ ಅಂಜನಾದ್ರಿ ಬೆಟ್ಟದ ಕೆಳಗಡೆ ಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ಮೊದಲು ಪೂರ್ಣ ಕುಂಭದ ಮೂಲಕ ಅರ್ಚಕರು ರಾಜ್ಯಪಾಲ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು. ಬಳಿಕ ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿನ ಆಂಜನೇಯನ ಮೂರ್ತಿಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯಪಾಲರ ಆಗಮನದ ವೇಳೆ ಅಂಜನಾದ್ರಿಯಲ್ಲಿ ಪೂಜೆಗೆ ಪಟ್ಟು ಹಿಡಿದ ಅರ್ಚಕ ವಿದ್ಯಾದಾಸ ಬಾಬಾ
ರಾಜ್ಯಪಾಲರ ಆಗಮನದ ಮುನ್ನ ವಿದ್ಯಾದಾಸ್ ಬಾಬಾನಿಂದ ಹೈಡ್ರಾಮಾ: ಇನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರ ಅಂಜನಾದ್ರಿ ಭೇಟಿ 7.40 ಕ್ಕೆ ನಿಗದಿಯಾಗಿತ್ತು. ಇದಕ್ಕೂ ಅರ್ಧಗಂಟೆ ಪೂರ್ವದಲ್ಲಿ ಈ ಮುಂಚೆ ಅಂಜನಾದ್ರಿಯ ಪ್ರಧಾನ ಅರ್ಚಕರಾಗಿದ್ದ ವಿದ್ಯಾದಾಸ್ ಬಾಬಾ ಹಾಗೂ ಜಿಲ್ಲಾ ಆಡಳಿತ,ಪೊಲೀಸ್ ಇಲಾಖೆ ನಡುವೆ ಹೈಡ್ರಾಮಾ ನಡೆಯಿತು. ಇನ್ನು ವಿದ್ಯಾದಾಸ್ ಬಾಬಾಗೆ ಜಿಲ್ಲಾ ಆಡಳಿತ ಅಂಜನಾದ್ರಿಯಲ್ಲಿನ ಆಂಜನೇಯನಿಗೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆವರೆಗೂ ಪೂಜೆ ಮಾಡಲು ಅವಕಾಶ ನೀಡಿದೆ.
ಇದನ್ನೇ ಇಟ್ಟುಕೊಂಡು ವಿದ್ಯಾದಾಸ್ ಬಾಬಾ ರಾಜ್ಯಪಾಲರು ಪೂಜೆ ಸಲ್ಲಿಸುವ ಕೆಳ ಭಾಗಕ್ಕೆ ಬಂದು ನಾನು ಪೂಜೆ ಮಾಡುತ್ತೇನೆಂದು ಹೇಳಿದ್ದಾನೆ. ಆದರೆ ಇದಕ್ಕೆ ಜಿಲ್ಲಾ ಆಡಳಿತ ಒಪ್ಪಿಲ್ಲ. ಹೀಗಾಗಿ ವಿದ್ಯಾದಾಸ್ ಬಾಬಾ ಗಲಾಟೆ ಮಾಡಲು ಆರಂಭ ಮಾಡಿದ. ಈ ವೇಳೆ ಪೊಲೀಸರು ವಿದ್ಯಾದಾಸ್ ಬಾಬಾನನ್ನು ವಶಕ್ಕೆ ಪಡೆಯಲು ಮುಂದಾದರು. ಆದರೆ ಕೊನೆ ಗಳಿಗೆಯಲ್ಲಿ ವಿದ್ಯಾದಾಸ್ ಬಾಬಾ ಅಂಜನಾದ್ರಿ ಬೆಟ್ಟದ ಮೇಲೆ ಹೋಗಿದ್ದರಿಂದ ಪ್ರಕರಣ ಸುಖಾಂತ್ಯವಾಯಿತು.
ಅಂಜನಾದ್ರಿ ಬೆಟ್ಟ ಏರಿದ ಮುಸ್ಲಿಂ ಮಹಿಳೆಯರು: ಇನ್ನು ಇತ್ತೀಚೆಗಷ್ಟೆ ಅಂಜನಾದ್ರಿಯಲ್ಲಿ ಧರ್ಮ ದಂಗಲ್ ಆರಂಭವಾಗಿತ್ತು. ಹಿಂದೂ ಧರ್ಮಿಯರನ್ನು ಹೊರತುಪಡಿಸಿ ಅನ್ಯಧರ್ಮೀಯರಿಗೆ ವ್ಯಾಪಾರ ಮಾಡಲು ಅವಕಾಶ ನೀಡಬಾರದೆಂದು ಹಿಂದೂ ಜಾಗರಣೆ ವೇದಿಕೆಯವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು.ಇದಾದ ಒಂದು ವಾರದ ಆಗುವಷ್ಟರಲ್ಲೇ ಇದೀಗ ಮುಸ್ಲಿಂ ಧರ್ಮದ ಮಹಿಳೆಯರು ಅಂಜನಾದ್ರಿಗೆ ಭೇಟಿ ನೀಡಿದ್ದರು. ರಾಯಚೂರು ಜಿಲ್ಲೆಯ ಸಿಂಧನೂರಿನ ಮಹಿಳೆಯರ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದು 575 ಮೆಟ್ಟಿಲುಗಳನ್ನು ಹತ್ತುವ ಮೂಲಕ ಆಂಜನೇಯನ ದರ್ಶನ ಪಡೆದುಕೊಂಡರು. ಈ ಮೂಲಕ ಮುಸ್ಲಿಂ ಮಹಿಳೆಯರು ಭಾವೈಕ್ಯತೆ ಸಾರುವ ಕಾರ್ಯ ಮಾಡಿದ್ದಾರೆ.
ಗಂಗಾವತಿ: ‘ಅಂಜನಾದ್ರಿಯಲ್ಲಿ ಅನ್ಯ ಧರ್ಮದವರಿಗೆ ವ್ಯಾಪಾರ ನಿಷೇಧ’ ನಾಮಫಲಕ ತೆರವು
ಇನ್ನು ಈ ಹಿಂದಿನ ರಾಜ್ಯಪಾಲರಾದ ವಜುಭಾಯ್ ವಾಲಾ ಅವರು ಸಹ ಅಂಜನಾದ್ರಿಗೆ ಭೇಟಿ ನೀಡಿದ್ದರು. ಇದೀಗ ಪ್ರಸ್ತುತ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಸಹ ಭೇಟಿ ನೀಡಿರುವುದು ಇದರ ಪ್ರಸಿದ್ಧಿಗೆ ಸಾಕ್ಷಿಯಾಗಿದೆ. ಇನ್ನು ಪೂಜೆಯ ಬಳಿಕ ರಾಜ್ಯಪಾಲರಿಗೆ ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಆಂಜನೇಯನ ಫೋಟೋ ನೀಡಿ ಗೌರವಿಸಿದರು. ಇನ್ನು ರಾಜ್ಯಪಾಲರ ಆಗಮನದ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ಮೂಲಕ ರಾಜ್ಯಪಾಲರ ಅಂಜನಾದ್ರಿ ಭೇಟಿಯನ್ನು ಯಶಸ್ವಿಗೊಳಿಸಿದೆ.