Asianet Suvarna News Asianet Suvarna News

ಸಮರ್ಥ ದೇಶ ಕಟ್ಟುವಲ್ಲಿ ಮೋದಿ ಮಹತ್ಸಾಧನೆ: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬಿಜೆಪಿ ಸರ್ಕಾರಕ್ಕೆ 9 ವರ್ಷಗಳು ತುಂಬಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯರ ಒಂದೊಂದು ನಿಲುವು ಈ ದೇಶ ಮಾತ್ರವಲ್ಲ, ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿವೆ: ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ

PM Narendra Modi Great Effort in Building Competent Country says Kota Shrinivas Poojari grg
Author
First Published Jun 18, 2023, 11:49 AM IST

ಬೆಂಗಳೂರು(ಜೂ.18): ಭಾರತದಂತಹ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿರುವ ಸರ್ಕಾರವನ್ನು ಪ್ರಪಂಚದ ಅನೇಕ ರಾಷ್ಟ್ರಗಳು ಆತಂಕದಿಂದ ನೋಡುತ್ತಿದ್ದರೆ, ಮೋದಿಯವರ ಆರ್ಥಿಕ ದೂರದೃಷ್ಟಿಪ್ರಪಂಚದಲ್ಲೇ ಭಾರತವನ್ನು 5ನೇ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳಿಸಿದೆ. ದೇಶದಲ್ಲಿ ಹಿಂದೆಂದೂ ಕಾಣದಷ್ಟು ಮೂಲಸೌಕರ್ಯಗಳ ಅಭಿವೃದ್ಧಿ ಇಂದು ಆಗುತ್ತಿದೆ.

ಮೋದಿ ಆಡಳಿತಕ್ಕೆ 9 ವರ್ಷ

ನಮಗೆಲ್ಲಾ ಅಂದು 26 ಮೇ 2014ರಂದು ರೋಮಾಂಚನಕಾರಿ ಅನುಭವ. ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮಧುರ ಕ್ಷಣ. ಆ ಚುನಾವಣೆಯಲ್ಲಿ ನಾನು ಮತ್ತು ನನ್ನಂತಹ ಬಿಜೆಪಿ ಕಾರ್ಯಕರ್ತರು ದೇಶದ ಗಲ್ಲಿಗಲ್ಲಿಗಳಲ್ಲಿ ಧ್ವನಿವರ್ಧಕ ಎದುರು ನಿಂತು ಸಮರ್ಥ ಭಾರತ ನಿರ್ಮಾಣಕ್ಕೆ, ಸ್ವಾಭಿಮಾನಿ ಭಾರತ ನಿರ್ಮಾಣಕ್ಕೆ, ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ, ಸಮೃದ್ಧ ಭಾರತ ನಿರ್ಮಾಣಕ್ಕೆ ಬಿಜೆಪಿಯನ್ನು ಬೆಂಬಲಿಸಿ, ನರೇಂದ್ರ ಮೋದಿಯನ್ನು ಪ್ರಧಾನ ಮಂತ್ರಿ ಮಾಡಿ ಎಂದು ಜನಸಾಮಾನ್ಯರಲ್ಲಿ ವಿನಂತಿಸಿದ್ದೆವು. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ದೇಶದ ಮತದಾರ ಪ್ರಭು ದೇಶಕ್ಕಾಗಿ ಮೋದಿಗೆ ಆಶೀರ್ವಾದ ಮಾಡಿದ್ದರು. ಅದರ ಪರಿಣಾಮ ಮೋದಿ ಪ್ರಧಾನಿಯಾಗುವುದನ್ನು ಕಣ್ತುಂಬ ನೋಡಿ ಆನಂದಬಾಷ್ಪ ಸುರಿಸಿದ್ದೆವು. ನಮ್ಮೆಲ್ಲರ ಆಶಯದ ಪ್ರತೀಕವಾಗಿ ಭಾರತ ದೇಶದ ಜನಸಂಕುಲದ ನಡುವೆ ಹಾಸಿ ಬೀಸಿ ಹೋದ ಜಾತಿ, ವರ್ಣ, ಧರ್ಮ, ಹಣ, ಹೆಂಡ ಎಲ್ಲವನ್ನೂ ಮೀರಿ ದೇಶಕ್ಕಾಗಿ ಮತದಾರ ಮೋದಿಯವರಿಗೆ ಓಟು ಕೊಟ್ಟಿದ್ದ. ಸಮೃದ್ಧ ದೇಶ ನಿರ್ಮಿಸುವ ಕನಸು ಕಂಡಿದ್ದ. ನಂತರ ಮೋದಿಯವರು ಶ್ರೇಷ್ಠ ಭಾರತ ನಿರ್ಮಿಸುವ ಭರದಲ್ಲಿ ಅವರಿಡುವ ಹೆಜ್ಜೆ ಗುರುತುಗಳ ಬಗ್ಗೆ ಎಲ್ಲೋ ಒಂದೆಡೆ ಮನದ ಮೂಲೆಯಲ್ಲಿ ಆತಂಕ ಸುಳಿದಾಡುತ್ತಿತ್ತು. ಅದಾಗಲೇ 2014ರ ಆಗಸ್ಟ್‌ 15ಕ್ಕೆ ಕೆಂಪುಕೋಟೆಯ ಮೇಲೆ ಭಾರತ ತ್ರಿವರ್ಣ ಧ್ವಜ ಹಾರಿಸುವ ಅವಕಾಶ ಪಡೆದ ಪ್ರಧಾನಿ ಹೇಳಿದ್ದು ಕೇಳಿ ದೇಶ ದಿšೂ್ಮಢವಾಗಿತ್ತು. ‘ನಾನು ದೇಶದ ಪ್ರಧಾನ ಮಂತ್ರಿಯಾಗಿ ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿಲ್ಲ, ಬದಲಾಗಿ ಭಾರತದ ಪ್ರಧಾನ ಸೇವಕನಾಗಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದೇನೆ’ ಎಂದು ಅವರು ಹೇಳಿದ್ದರು. ಸುದೀರ್ಘ 9 ವರ್ಷಗಳ ಅವಧಿಯಲ್ಲಿ ಅವರು ಎಡವಿ ಮಾತಾಡಿದ್ದನ್ನು ನೋಡಿದ ಉದಾಹರಣೆ ನಮಗ್ಯಾರಿಗೂ ಸಿಕ್ಕಿಲ್ಲ. ನಯದ ಸಂಕೇತವಾಗಿ ಜನಮಾನಸದಲ್ಲಿ ಅಚ್ಚೊತ್ತಿ ಬೆಳೆದ ಪ್ರಧಾನಿ ಪ್ರಥಮ ಬಾರಿಗೆ ಸಂಸತ್‌ ಪ್ರವೇಶಿಸುವ ಸಂದರ್ಭ, ಪಾರ್ಲಿಮೆಂಟಿನ ಮೆಟ್ಟಿಲಿಗೆ ತಲೆಬಾಗಿ ನಮಸ್ಕಾರ ಮಾಡಿದ್ದರು. ಭಾರತದ ಜನಪ್ರತಿನಿಧಿಯೊಬ್ಬ ಪ್ರಜಾಪ್ರಭುತ್ವದ ದೇಗುಲದ ಮೆಟ್ಟಿಲುಗಳನ್ನು ಏರುವಾಗ ಸಿಕ್ಕಿದ ಅವಕಾಶದ ಪ್ರತಿಕ್ಷಣವೂ ಜನಸಾಮಾನ್ಯರಿಗೆ ಸಮರ್ಪಿತವಾಗುವ ಕಲ್ಪನೆಯೊಂದಿಗೆ ಪಾರ್ಲಿಮೆಂಟ್‌ ಪ್ರವೇಶಕ್ಕೆ ಸಿಕ್ಕಿದ ಅವಕಾಶಕ್ಕಾಗಿ ಭಾವುಕ ಕ್ಷಣಗಳ ಪ್ರತೀಕವಾಗಿ ಜನದೇಗುಲದ ಮೆಟ್ಟಿಲಿಗೆ ತಲೆಬಾಗಿದ್ದರು ಎಂಬುದು ಅರ್ಥವಾಗಿ ಜಗತ್ತು ಸಂತೃಪ್ತಿಗೊಂಡಿತ್ತು. ಬಿಜೆಪಿ ಸರ್ಕಾರಕ್ಕೆ 9 ವರ್ಷಗಳು ತುಂಬಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯರ ಒಂದೊಂದು ನಿಲುವು ಈ ದೇಶ ಮಾತ್ರವಲ್ಲ, ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿವೆ.

ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕು: ರವಿಕುಮಾರ್‌

ಮೋದಿ ಬದುಕೇ ದೇಶಕ್ಕೆ ಅರ್ಪಣೆ

ವಾಸ್ತವವಾಗಿ ರಾಜಕಾರಣಿಯೊಬ್ಬ ದೇಶದ ಪರಮಾಧಿಕಾರ ನನಗೆ ಸಿಗಬೇಕೆಂದು ಹಂಬಲಿಸುವಾಗ ಮೋದಿಯೊಬ್ಬ ಸಂತೆಯೊಳಗಿನ ಸಂತನಂತೆ ಕಂಡುಬರುತ್ತಾರೆ. ಜವಾಹರಲಾಲ್‌ ನಂತರ ಇಂದಿರಾ, ಇಂದಿರಾ ನಂತರ ರಾಜೀವ್‌, ನಂತರ ಅವಕಾಶವಾದರೆ ರಾಹುಲ್‌ ಎಂಬ ಭಾರತದ ಪ್ರಜಾಪ್ರಭುತ್ವದ ಒಡಲೊಳಗಿನ ಕೌಟುಂಬಿಕ ರಾಜಕಾರಣದ ಪದ್ಧತಿ ಒಂದೆಡೆ, ಮುಖ್ಯಮಂತ್ರಿಯಾಗಿ ತಾನು ಮಾಡಿದ ತಪ್ಪುಗಳು ಏನೇ ಇದ್ದರೂ ಶಿಕ್ಷೆಗಾಗಿ ಜೈಲು ಸೇರುವಾಗಲೂ ತನ್ನ ಪತ್ನಿ ರಾಬ್ಡಿದೇವಿ ಮುಖ್ಯಮಂತ್ರಿ ಆದರೆ ಸಾಕು ಎಂದು ಭಾವಿಸುವ ಲಾಲು ಪ್ರಸಾದ್‌ ಪರಂಪರೆ ಮತ್ತೊಂದೆಡೆ. ಈ ವಂಶಪಾರಂಪರ್ಯದ ಆಡಳಿತದ ನಡುವೆ ನನ್ನ ಮಕ್ಕಳು ಪ್ರಧಾನಿ ಆಗಬೇಕಿಲ್ಲ, ನನ್ನ ಪತ್ನಿ ಮುಖ್ಯಮಂತ್ರಿ ಸಹಿತ ಯಾವ ಹುದ್ದೆಯನ್ನೂ ಅಲಂಕರಿಸುವಂತಿಲ್ಲ, ಬದಲಾಗಿ ನನ್ನ ದೇಶ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ದೇಶವಾದರೆ ಸಾಕು ಎಂದು ಭಾವಿಸಿ ಬದುಕನ್ನು ದೇಶಕ್ಕೆ ಸಮರ್ಪಿಸಿದ ಭಾರತದ ರಾಜಕಾರಣದಲ್ಲಿ ಎದ್ದು ತೋರುವ ವ್ಯಕ್ತಿಯಾಗಿ ಮೋದಿಯವರು ಕಂಡುಬರುತ್ತಾರೆ.

ವಿದೇಶಗಳಲ್ಲಿ ಭಾರತದ ಗೌರವ ಇಮ್ಮಡಿ

ಮೋದಿ ಪ್ರಧಾನಿಯಾಗುತ್ತಲೇ ಭಾರತವೆಂದರೆ ಬಡದೇಶ, ಭಾರತದೆಲ್ಲೆಡೆ ಭಿಕ್ಷುಕರು ಇದ್ದಾರೆ, ಮೌಢ್ಯಗಳಿಂದ ತುಂಬಿ ಅಸ್ಪೃಶ್ಯತೆ ಜೀವಂತವಾಗಿರುವ ದೇಶವಾಗಿ ಭಾರತದ ಬಗ್ಗೆ ನಿರ್ಲಕ್ಷ್ಯದ ಭಾವನೆ ಜಗತ್ತಿನೆಲ್ಲೆಡೆ ತುಂಬಿ ತುಳುಕುತ್ತಿತ್ತು. ಇಸ್ಫೋಸಿಸ್‌ನ ಸುಧಾಮೂರ್ತಿಯವರು ನನ್ನೊಡನೆ ಮಾತನಾಡುವಾಗ ಹೇಳಿದ್ದರು. ಒಂದು ಕಾಲದಲ್ಲಿ ವಿದೇಶದ ವಿಮಾನ ನಿಲ್ದಾಣದಲ್ಲಿ ಭಾರತೀಯರಾದ ನಮ್ಮನ್ನು ಗುರುತಿಸಿ ಇಂಡಿಯನ್ಸ್‌ ಎಂದು ನಿರ್ಲಕ್ಷ್ಯ ಮಾಡುತ್ತಿದ್ದರು. ಆದರೀಗ ಅಮೆರಿಕಾದಂತಹ ದೇಶದ ವಿಮಾನ ನಿಲ್ದಾಣಗಳಲ್ಲಿ ಕೂಡ ಮೋದಿಯವರ ಭಾರತದವರು ನೀವು ಬನ್ನಿ ಎಂದು ಸ್ವಾಗತಿಸುತ್ತಾರೆ. ಮೋದೀಜಿ ಮೂಲಕ ಭಾರತ ಜಗತ್ತಿನೆಲ್ಲೆಡೆ ಹೆಚ್ಚು ಗೌರವ ಪಡೆಯುವ ದೇಶವಾಗಿ ಕಂಡುಬರುತ್ತದೆ ಎಂದಿದ್ದರು.

ಒಂದು ಕಾಲದಲ್ಲಿ ಪ್ರಪಂಚದಲ್ಲೇ ಅತ್ಯಂತ ಪ್ರಬಲ ರಾಷ್ಟ್ರ ಯಾವುದು ಎಂದು ಕೇಳಿದರೆ ಅಮೆರಿಕ, ರಷ್ಯಾ, ಚೀನಾ, ಬ್ರಿಟನ್‌ ಮುಂತಾದ ಹೆಸರು ಕೇಳಿಬರುತ್ತಿತ್ತು. ಆದರೀಗ ಪ್ರಪಂಚದ ಬಹುದೊಡ್ಡ ಆರ್ಥಿಕ ತಜ್ಞರು, ನಿವೃತ್ತ ಸೇನಾಧಿಕಾರಿಗಳು, ಸಾಮಾಜಿಕ ಶೈಕ್ಷಣಿಕ ವಿಷಯದಲ್ಲಿ ಅಧ್ಯಯನ ಮಾಡಿದ ಗಣ್ಯರು ಮುಂದಿನ ದಿನಗಳಲ್ಲಿ ಪ್ರಪಂಚದಲ್ಲೇ ಶ್ರೇಷ್ಠ ದೇಶವಾಗಿ ಮೂಡಿಬರಲು ಭಾರತ ಮುನ್ನುಗ್ಗುತ್ತಿದೆ, ಅದಕ್ಕೆ ಕಾರಣ ಮೋದಿ ಎಂದು ಒಕ್ಕೊರಲಿನಿಂದ ಹೇಳುತ್ತಿದ್ದಾರೆ. ಒಂದು ಕಾಲದಲ್ಲಿ ಕಾಶ್ಮೀರದ ನೆಲದಲ್ಲಿ ನಿಂತು ಭಾರತದ ಅನ್ನ ಉಂಡು, ಭಾರತದ ನೀರು ಕುಡಿದು, ಹೆಗಲಿಗೆ ಎ.ಕೆ.47 ಹಾಕಿಕೊಂಡು ಭಾರತ ದೇಶದ ಗಡಿಕಾಯುವ ಸೈನಿಕರನ್ನೇ ಹೊಡೆಯುತ್ತಿದ್ದ ಉಗ್ರಗಾಮಿಗಳಿದ್ದರು. ಈಗ ಮೋದಿ ಪ್ರಧಾನಿಯಾದ ನಂತರ ಆಗಿರುವ ಬದಲಾವಣೆಯನ್ನು ಒಮ್ಮೆ ಗಮನಿಸಿ ನೋಡಿ. ಕಾಶ್ಮೀರದಲ್ಲಿ ಭಾರತದ ತ್ರಿವರ್ಣ ಧ್ವಜ ಮುಕ್ತವಾಗಿ ಹಾರಾಡುತ್ತಿದೆ. ಅದಕ್ಕೆ ಕಾರಣ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ಮೋದಿ ಸರ್ಕಾರದ ನಿರ್ಧಾರ. ಕಾಶ್ಮೀರದಲ್ಲಿ ಪಾಕಿಸ್ತಾನದ ಕುತಂತ್ರಗಳು ನಿಂತಿವೆ. ಭಯೋತ್ಪಾದಕರ ಸ್ವರ್ಗವೀಗ ಪ್ರವಾಸಿಗರ ಸ್ವರ್ಗವಾಗಿದೆ. ಕಲ್ಲು ಹಿಡಿದು ತಿರುಗುತ್ತಿದ್ದ ಕಾಶ್ಮೀರದ ಹುಡುಗರ ಕೈಗೆ ಲ್ಯಾಪ್‌ಟಾಪ್‌ ನೀಡಿದ ಕೀರ್ತಿ ಮೋದಿಯವರದು.

ಸವಾಲುಗಳನ್ನು ಮೆಟ್ಟಿನಿಂತ ಸಾಧಕ

ಪ್ರಪಂಚದ ಇತಿಹಾಸದಲ್ಲಿ ಕಂಡುಕೇಳಿರದ ಕೊರೋನಾ ಮಹಾಮಾರಿ ಬಂದಾಗ ಈ ಹಿಂದಿನ ಕಾಲವಾಗಿದ್ದರೆ ವಿದೇಶಗಳ ಎದುರು ಕೈಯೊಡ್ಡಿ ವ್ಯಾಕ್ಸಿನ್‌ ಪಡೆಯಬೇಕಾಗಿತ್ತು. ಆದರೆ ಮೋದಿ ಯೋಚಿಸಿದ್ದೇ ಬೇರೆ. ಭಾರತದ ಪ್ರತಿಯೊಬ್ಬ ಪ್ರಜೆಗೂ ಕೊರೋನಾದ ವಿರುದ್ಧ ಧೈರ್ಯ ತುಂಬುವ ನೆಲೆಯಲ್ಲಿ ಸ್ವತಃ ಸ್ವದೇಶದ ಮೂಲಕವೇ ವ್ಯಾಕ್ಸಿನ್‌ ಉತ್ಪಾದಿಸಿ ಪ್ರತಿ ಪ್ರಜೆಗೂ ಉಚಿತವಾಗಿ ನೀಡಿದ್ದಲ್ಲದೆ, ಇತರ ದೇಶಗಳಿಗೆ ನೆರವು ನೀಡಿದ್ದು ಒಂದು ಕ್ರಾಂತಿಕಾರಿ ಕಲ್ಪನೆ.
ಹಿಂದೆ ಭಾರತದಲ್ಲಿ ಒಂದಾದ ಮೇಲೊಂದು ಭಯೋತ್ಪಾದಕ ದಾಳಿಗಳನ್ನು ಸಂಘಟಿಸುತ್ತಿದ್ದ ಪಾಕಿಸ್ತಾನವು ಮೋದಿ ಕಾಲದ ಸರ್ಜಿಕಲ್‌ ಸ್ಟೆ್ರೖಕ್‌ ನಂತರ ಮತ್ತೆಂದೂ ಈ ದೇಶದ ಕಡೆ ಮುಖ ಹಾಕಿಲ್ಲ. ದೇಶದ ನಾಯಕನೊಬ್ಬ ಬಲಿಷ್ಠನಾಗಿದ್ದರೆ ಜಗತ್ತಿಗೆ ಎಂತಹ ಸಂದೇಶ ಹೋಗುತ್ತದೆ ಎನ್ನುವುದಕ್ಕೆ ಮೋದಿ ಉದಾಹರಣೆ. ಒಂದು ಕಾಲದಲ್ಲಿ ನಮ್ಮ ದೇಶದ ಸೈನಿಕರಿಗೆ ಆಧುನಿಕ ಶಸ್ತ್ರಾಸ್ತ್ರಗಳು ಕೂಡ ಸಿಗುತ್ತಿರಲಿಲ್ಲ. ಅವುಗಳನ್ನು ಅಮೆರಿಕಾ, ರಷ್ಯಾ, ಇಸ್ರೇಲ್‌, ಬ್ರಿಟನ್‌ಗಳಿಂದ ಆಮದು ಮಾಡಿಕೊಳ್ಳಬೇಕಿತ್ತು. ಈಗ ಬದಲಾದ ಕಾಲಘಟ್ಟದಲ್ಲಿ ಮೋದಿಯವರ ಆತ್ಮನಿರ್ಭರ ಕಲ್ಪನೆಯಡಿ ಭಾರತದ ರಕ್ಷಣೆಗೆ ಭಾರತವೇ ಆಧುನಿಕ ಶಸ್ತ್ರಾಸ್ತ್ರಗಳನ್ನು ನಿರ್ಮಿಸುವ ಶಕ್ತಿ ಪಡೆದಿದೆ. ಭಾರತಕ್ಕೆ ಸ್ವತಂತ್ರ ಬಂದು 7 ದಶಕಗಳು ಸಂದರೂ ಮೋದಿ ಅಧಿಕಾರ ಸ್ವೀಕಾರ ಮಾಡುವ ಮುಂಚೆ 18000 ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕವಿರಲಿಲ್ಲ. ಆದರೆ ಮೋದಿ ಅಧಿಕಾರಕ್ಕೆ ಬಂದ ಒಂದೂವರೆ ವರ್ಷದಲ್ಲಿ ಭಾರತದಲ್ಲಿ ವಿದ್ಯುತ್‌ ಸಂಪರ್ಕವಿಲ್ಲದ ಹಳ್ಳಿಗಳೆ ಇಲ್ಲ ಎಂಬಂತಾಗಿದೆ.

ನಾನು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದಾಗ ಕೊರೋನಾದ ಸಂಕಷ್ಟದೇಶವಾಸಿಗಳನ್ನು ಕಾಡಿತ್ತು. ಆಸ್ಪತ್ರೆಗಳು ಕೊರೋನಾ ಪೀಡಿತರಿಂದ ತುಂಬಿ ತುಳುಕುತ್ತಿದ್ದವು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾಹಿತಿ ಕೇಳುವಾಗ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿ ನಾನಂದಿದ್ದೆ, ‘ದಕ್ಷಿಣ ಕನ್ನಡದಲ್ಲಿ 8 ಮೆಡಿಕಲ್‌ ಕಾಲೇಜುಗಳಿವೆ, 64 ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ನೀಡುತ್ತಿದ್ದೇವೆ. ಸೋಂಕಿತರ ಪೈಕಿ 84% ಜನ ಮೋದಿ ಸರ್ಕಾರದ ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಒಂದು ರುಪಾಯಿ ಖರ್ಚಿಲ್ಲದಂತೆ ಚಿಕಿತ್ಸೆ ಪಡೆದಿದ್ದಾರೆ.’ ಅಚ್ಚರಿಗೊಂಡ ಯಡಿಯೂರಪ್ಪ ಅಧಿಕಾರಿಗಳ ಮೂಲಕ ಪುನರ್‌ ಪರಿಶೀಲಿಸಿಕೊಂಡು ನೆಮ್ಮದಿಯ ಮುಗುಳ್ನಕ್ಕಿದ್ದರು. ಇಂತಹ ಆಯುಷ್ಮಾನ್‌ ಯೋಜನೆಯನ್ನು ತಂದಿದ್ದು ನರೇಂದ್ರ ಮೋದಿ.

ನೆಹರು ಸಂಗ್ರಹಾಲಯ ಮರು ನಾಮಕರಣ, ಮೋದಿ ಬೆಂಬಲಿಸಿದ ಮಾಜಿ ಪ್ರಧಾನಿ ದೇವೇಗೌಡ!

ದೇಶದಲ್ಲಿ ಮೂಲಸೌಕರ‍್ಯ ಕ್ರಾಂತಿ

ಭಾರತದಂತಹ ಅಭಿವೃದ್ಧಿ ಪಥದಲ್ಲಿ ಮುಂದೆ ಸಾಗುತ್ತಿರುವ ಸರ್ಕಾರವನ್ನು ಪ್ರಪಂಚದ ಅನೇಕ ರಾಷ್ಟ್ರಗಳು ಆತಂಕದಿಂದ ನೋಡುತ್ತಿದ್ದರೆ, ಮೋದಿಯವರ ಆರ್ಥಿಕ ದೂರದೃಷ್ಟಿಪ್ರಪಂಚದಲ್ಲೇ ಭಾರತವನ್ನು 5ನೇ ಬಹುದೊಡ್ಡ ಆರ್ಥಿಕ ಶಕ್ತಿಯಾಗಿ ರೂಪುಗೊಳಿಸಿದೆ. ದೇಶದಲ್ಲಿ ಹಿಂದೆಂದೂ ಕಾಣದಷ್ಟುಮೂಲಸೌಕರ್ಯ ಅಭಿವೃದ್ಧಿ ಆಗುತ್ತಿದೆ. ಹೆದ್ದಾರಿ ಮತ್ತು ರೈಲ್ವೆ ಕಾಮಗಾರಿಗಳು ಶರವೇಗದಲ್ಲಿ ನಡೆಯುತ್ತಿದ್ದರೆ, ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ದೇಶದ ಮೂಲೆ ಮೂಲೆ ತಲುಪುತ್ತಿವೆ. ಈಶಾನ್ಯ ರಾಜ್ಯಗಳಲ್ಲಿ ಮೋದಿ ಆಡಳಿತದ ಮಾಂತ್ರಿಕತೆ ಬಡವರ ಬದುಕಿನಲ್ಲಿ ಹೊಸ ದೀಪ ಹಚ್ಚಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲರ ಏಕತಾ ಪ್ರತಿಮೆ ರಾಷ್ಟ್ರಪ್ರೇಮಿಗಳ ಮನದಲ್ಲಿ ಏಕತೆಯ ಸಂದೇಶ ಮೂಡಿಸಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣ ಮೋದಿ ಆಡಳಿತದಲ್ಲಿ ವಿಶ್ವಾಸ ಮೂಡಿಸಲು ಕಾರಣವಾಗಿದೆ. ಕೇಂದ್ರ ಸರ್ಕಾರ ನೀಡುತ್ತಿರುವ ಉದ್ಯೋಗದ ಆದೇಶ ಪ್ರತಿಗಳು ಯುವಜನಾಂಗದಲ್ಲಿ ಭರವಸೆಯ ಬೀಜ ಬಿತ್ತಿವೆ. ಪ್ರತಿ ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ನೀಡುವ ಮನೆಮನೆಗೂ ಗಂಗೆ, ಕುಟುಂಬಕ್ಕೊಂದು ಶೌಚಾಲಯ ನೀಡುವ ಸ್ವಚ್ಛಭಾರತ, ಅರ್ಜಿ ಕೊಡದೆಯೇ ರೈತನೊಬ್ಬನ ಖಾತೆಗೆ ಬರುವ 10,000 ರು. ಆರ್ಥಿಕ ನೆರವಿನ ಕೃಷಿಕ ಸಮ್ಮಾನ್‌ ಯೋಜನೆ ಇವೆಲ್ಲವೂ 9 ವರ್ಷ ಪೂರೈಸುತ್ತಿರುವ ಮೋದಿ ಸರ್ಕಾರದ ಸಾಧನೆಯ ಮೈಲುಗಲ್ಲುಗಳು.

ಕಳೆದ ಒಂಭತ್ತು ವರ್ಷಗಳಿಂದ ನರೇಂದ್ರ ಮೋದಿ ಸರ್ವಶ್ರೇಷ್ಠ ಪ್ರಧಾನಿಯಾಗಿ ದೇಶಕ್ಕೆ ದೇಶವೇ ಹೆಮ್ಮೆಪಡುವ ಆಡಳಿತ ನೀಡಿದ್ದಾರೆ. ಅದು 10ನೇ ವರ್ಷಕ್ಕೆ ಕಾಲಿಡುವ ದಿನಗಳಲ್ಲಿ ಆಡಳಿತ ಮತ್ತು ದೇಶಭದ್ರತೆಯ ವಿಚಾರದಲ್ಲಿ ಶತಗಜ ತ್ರಾಣಿಯಾಗಲಿ ಎಂಬುದೇ ಹರಕೆ ಮತ್ತು ಹಾರೈಕೆ.

Follow Us:
Download App:
  • android
  • ios