Asianet Suvarna News Asianet Suvarna News

ಮೋದಿ 3ನೇ ಬಾರಿಗೆ ಪ್ರಧಾನಿಯಾಗಬೇಕು: ರವಿಕುಮಾರ್‌

ದೇಶದ ಶೇ.73ರಷ್ಟುಜನತೆ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಹಾಗಾಗಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ. ಇದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮನಸ್ಸಿನಲ್ಲಿಟ್ಟು ಕೊಂಡು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

Modi should become PM for 3rd time: Ravikumar snr
Author
First Published Jun 18, 2023, 11:05 AM IST

 ತುಮಕೂರು :  ದೇಶದ ಶೇ.73ರಷ್ಟುಜನತೆ ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಹಾಗಾಗಿ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಖಚಿತ. ಇದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮನಸ್ಸಿನಲ್ಲಿಟ್ಟು ಕೊಂಡು ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ತಿಳಿಸಿದ್ದಾರೆ.

ನಗರದ ಶ್ರೀ ಸಿದ್ದಿವಿನಾಯಕ ಸಮುದಾಯ ಭವನದಲ್ಲಿ ಬಿಜೆಪಿ ನಗರ ಮಂಡಲದಿಂದ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 9 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಮತದಾರರಿಗೆ ಕೃತಜ್ಞತಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಮೋದಿಯವರ ಮೇಕ್‌ಇನ್‌ ಇಂಡಿಯಾ ಮತ್ತು ಮೇಡ್‌ ಇನ್‌ ಇಂಡಿಯಾ ಪರಿಕಲ್ಪನೆ ಅದ್ಬುತವಾಗಿದೆ. ತಂತ್ರಜ್ಞಾನವನ್ನು ಎರವಲು ಪಡೆದು, ವಸ್ತುಗಳನ್ನು ಭಾರತದಲ್ಲಿಯೇ ಉತ್ಪಾದಿಸುವ ಕೆಲಸ ನಡೆದಿದೆ. ಇದರ ಭಾಗವಾಗಿಯೇ ಅಮದಿಗಿಂತ ರಫ್ತು ಪ್ರಮಾಣ ಹೆಚ್ಚಾಗಿ, ದೇಶದ ಜಿಡಿಪಿ 7.5ಕ್ಕೆ ಜಿಗಿದಿದೆ. ಭಾರತದ ಮುಂದೆ ಬೇರೆಲ್ಲಾ ದೇಶಗಳ ಜಿಡಿಪಿ ಕಡಿಮೆ ಇದ್ದು, ಭಾರತ ಅಭಿವೃದ್ಧಿ ಪಥದಲ್ಲಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ ಎಂದು ಎನ್‌.ರವಿಕುಮಾರ್‌ ಪ್ರಶ್ನಿಸಿದರು.

ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು 9 ವರ್ಷಗಳ ಆಡಳಿತ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಮಹತ್ವದ ದಿನಗಳು. ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ, ರಕ್ಷಣಾ ವಲಯದಲ್ಲಿಯೂ ಭಾರತ ಶರವೇಗದಲ್ಲಿ ಮುನ್ನುಗುತ್ತಿದೆ. ಈ ವೇಗವನ್ನು ಕಾಯ್ದುಕೊಳ್ಳಬೇಕೆಂದರೆ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾಗುವ ಅಗತ್ಯವಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್‌ ಹೆಬ್ಬಾಕ ಮಾತನಾಡಿ, 2014ರಿಂದ ಇದುವರೆಗೂ ದೇಶದ ಅಭಿವೃದ್ಧಿಯ ವೇಗ ಬದಲಾಗಿದೆ. ಕರ್ನಾಟಕದ ಚುನಾವಣೆಯಲ್ಲಿ ಸೋಲಾಗಿದ್ದರೂ, ಲೋಕಸಭಾ ಚುನಾವಣೆ ಗೆಲ್ಲಲು ಅಗತ್ಯ ತಯಾರಿಯನ್ನು ಮಾಡಿಕೊಳ್ಳಬೇಕಿದೆ ಎಂದರು.

ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌, ನರೇಂದ್ರ ಮೊದಿ ಅವರ ದೂರದೃಷ್ಟಿಯ ಫಲವಾಗಿ ಇಂದು ನಾಡಿನ ಜನರು ಉತ್ತಮ ಸಂಪರ್ಕ ರಸ್ತೆ, ಜನರ ಸಂಕಷ್ಟಗಳ ಪರಿಹಾರಕ್ಕೆ ಉಜ್ವಲ ಯೋಜನೆ, ನೀರಾವರಿ, ರೈತರ ಆದಾಯ ದ್ವಿಗುಣ ಗೊಂಡಿದೆ. ವಿಧಾನಸಭಾ ಚುನಾವಣೆಯ ಕಹಿಯನ್ನು ಮರೆತು ಜನತೆ ಆಶಯದಂತೆ 2024ಕ್ಕೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಪಣತೋಡೋಣ ಎಂದರು.

ವೇದಿಕೆಯಲ್ಲಿ ಎಂ.ಎಲ್‌.ಸಿ.ಚಿದಾನಂದ ಎಂ.ಗೌಡ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವೈ.ಎಚ್‌.ಹುಚ್ಚಯ್ಯ, ರೈತಮೋರ್ಚಾ ಶಿವಪ್ರಸಾದ್‌, ಮುಖಂಡರಾದ ಎಂ.ವೈ.ರುದ್ರೇಶ್‌, ಪ್ರೇಮಹೆಗಡೆ, ನಂದ ಗಿರೀಶ್‌,ಬೆಳ್ಳಿಲೋಕೇಶ್‌, ವಿಷ್ಣುವರ್ಧನ, ಸಂದೀಪಗೌಡ, ಎಚ್‌.ಎನ್‌.ಚಂದ್ರಶೇಖರ್‌, ಟಿ.ಎಸ್‌.ನಿರಂಜನ್‌, ಸತ್ಯಮಂಗಲ ಜಗದೀಶ್‌, ಜೆ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಮುಖಂಡರಿಂದ ಪಕ್ಷ ಸೋಲು: ರವಿ

20 ವರ್ಷಗಳ ಕಾಲ ಗುಜರಾತ್‌ ಮುಖ್ಯಮಂತ್ರಿಯಾಗಿ, 9 ವರ್ಷಗಳ ಕಾಲ ದೇಶದ ಪ್ರಧಾನಿಯಾಗಿ ಅವರು ತೆಗದುಕೊಂಡಿರುವ ನಿರ್ಧಾರಗಳ ಫಲವಾಗಿ ಇಂದು ದೇಶ ಎಲ್ಲಾ ವಿಭಾಗಗಳಲ್ಲಿಯೂ ಅಭಿವೃದ್ಧಿ ಹೊಂದಿದೆ. ಅಭಿವೃದ್ಧಿ ಶೀಲ ರಾಷ್ಟ್ರಗಳ ಸಾಲಿನಲ್ಲಿ ಐದನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ 136 ಸೀಟುಗಳನ್ನು ಪಡೆದು, ಅಧಿಕಾರಕ್ಕೇರುವಲ್ಲಿ ಬಿಜೆಪಿ ಮುಖಂಡರ ತಪ್ಪು ಹೆಚ್ಚಾಗಿದೆ. ಅಧಿಕಾರದ ರುಚಿ ಕಂಡ ನಾವು, ಚುನಾವಣೆ ಸಂದರ್ಭದಲ್ಲಿ ಅದನ್ನು ಸಾರ್ವಜನಿಕ ಅಭಿಪ್ರಾಯವಾಗಿಸುವಲ್ಲಿ ವಿಫಲರಾದೆವು. ಇದರ ಭಾಗವಾಗಿಯೇ ಬಿಜೆಪಿ ಸೋಲು ಕಾಣಬೇಕಾಯಿತು ಎಂದ ರವಿಕುಮಾರ್‌, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳ ನಡುವೆ ಭಾರಿ ವ್ಯತ್ಯಾಸವಿದ್ದು, ಎಲ್ಲವನ್ನು ಮರೆತು ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರ ಹಿಡಿಯಲು ಪ್ರಯತ್ನಿಸೋಣ ಎಂದು ಕಾರ್ಯಕರ್ತರಿಗೆ ಹುರಿದುಂಬಿಸಿದರು.

Follow Us:
Download App:
  • android
  • ios