Asianet Suvarna News Asianet Suvarna News

52000 ಮಂದಿಗೆ ಹಕ್ಕುಪತ್ರ ಗಿನ್ನೆಸ್‌ ದಾಖಲೆಗೆ ಸೇರ್ಪಡೆ: ಸಚಿವ ಅಶೋಕ್‌ಗೆ ಪ್ರಮಾಣಪತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಮಳಖೇಡದಲ್ಲಿ 52,072 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಸಮಾರಂಭ ಇದೀಗ ಗಿನ್ನೆಸ್‌ ದಾಖಲೆ ಸೇರ್ಪಡೆಯಾಗಿದೆ. 

pm narendra modi event enters guinness record book with over 50000 title deeds in a day gvd
Author
First Published Jan 20, 2023, 12:53 PM IST

ಮಳಖೇಡ (ಕಲಬುರಗಿ) (ಜ.20): ಪ್ರಧಾನಿ ನರೇಂದ್ರ ಮೋದಿ ಅವರು ಮಳಖೇಡದಲ್ಲಿ 52,072 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಸಮಾರಂಭ ಇದೀಗ ಗಿನ್ನೆಸ್‌ ದಾಖಲೆ ಸೇರ್ಪಡೆಯಾಗಿದೆ. ಗುರುವಾರ ನಡೆದ ಸಮಾರಂಭದಲ್ಲಿ 5 ಜಿಲ್ಲೆಗಳ 342 ಗ್ರಾಮಗಳ 52,072 ತಾಂಡಾ ನಿವಾಸಿಗಳಿಗೆ ಪ್ರಧಾನಿ ಮೋದಿ ಅವರ ಮೂಲಕ ಏಕಕಾಲದಲ್ಲಿ ಹಕ್ಕುಪತ್ರ ವಿತರಿಸಲಾಯಿತು. ಒಂದೇ ಸಮಾರಂಭದಲ್ಲಿ ಇಷ್ಟೊಂದು ಫಲಾನುಭವಿಗಳಿಗೆ ಏಕಕಾಲದಲ್ಲಿ ಹಕ್ಕುಪತ್ರ ವಿತರಿಸಿದ್ದು ವಿಶ್ವದಲ್ಲಿ ಇದೇ ಮೊದಲು. ಈ ಹಿನ್ನೆಲೆಯಲ್ಲಿ ಗಿನ್ನೆಸ್‌ ವಲ್ಡ್‌ ರೆಕಾರ್ಡ್‌ ತಂಡ ರಾಜ್ಯ ಸರ್ಕಾರಕ್ಕೆ ವೇದಿಕೆ ಮೇಲೆಯೇ ಪ್ರಮಾಣ ಪತ್ರ ನೀಡಿತು.

ಪಂಚ ಜಿಲ್ಲೆಗಳ ಜಿಲ್ಲಾಡಳಿತ ಹಾಗೂ ಸರ್ಕಾರದ ಪರ ಕಂದಾಯ ಸಚಿವ ಅಶೋಕ್‌, ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಪ್ರಮಾಣ ಪತ್ರ ಸ್ವೀಕರಿಸಿದರು. ಗಿನ್ನೆಸ್‌ ವಲ್ಡ್‌ ರೆಕಾರ್ಡ್‌ ಕರ್ನಾಟಕ ವಿಭಾಗದ ಉಪಾಧ್ಯಕ್ಷೆ ವಸಂತ ಕವಿತಾ (ಕೆ.ಸಿ.ರೆಡ್ಡಿ) ನೇತೃತ್ವದ ತಂಡ ಹಕ್ಕು ಪತ್ರ ವಿತರಣೆ ಕುರಿತು ಜಿಲ್ಲಾಡಳಿತದ ಕೋರಿಕೆ ಮೇರೆಗೆ ಮಳಖೇಡ ಸಮಾರಂಭದಲ್ಲಿ ಪಾಲ್ಗೊಂಡಿತ್ತು. ಕರ್ನಾಟಕ ತಂಡದ ಅಧಿಕಾರಿಗಳು ಕಾರ್ಯಕ್ರಮದ ಪ್ರಕ್ರಿಯೆಗಳನ್ನು ಖುದ್ದಾಗಿ ದಾಖಲೀಕರಣ ಮಾಡಿಕೊಂಡರು. ಈ ಕುರಿತು ಪ್ರತಿಕ್ರಿಯೆ ನೀಡಿದ ವಸಂತ ಕವಿತಾ, ಕಲಬುರಗಿ ಜಿಲ್ಲಾಡಳಿತ ಕೋರಿಕೆಯಂತೆ ನಮ್ಮ ತಂಡ ಕಳೆದ 3 ತಿಂಗಳಿನಿಂದ 5 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಯಿಂದ ದಾಖಲೆಗಳನ್ನು ಪಡೆದು ಪರಿಶೀಲಿಸಿ ಇಂದು ದಾಖಲೀಕರಣ ಮಾಡಿದ್ದೇವೆ ಎಂದರು.

ನಾನು ದಿಲ್ಲಿಯಲ್ಲಿರುವ ನಿಮ್ಮ ಮಗ: ಪ್ರಧಾನಿ ನರೇಂದ್ರ ಮೋದಿ

10000 ಕೋಟಿ ಕಾಮಗಾರಿಗೆ ಮೋದಿ ಚಾಲನೆ: ಹಿಂದಿನ ಸರ್ಕಾರಗಳು ವೋಟ್‌ ಬ್ಯಾಂಕ್‌ ರಾಜಕೀಯ ಮಾಡಿದ್ದವು, ಜಾತಿ-ಧರ್ಮದ ಆಧಾರದ ಮೇಲೆ ಆಡಳಿತ ನಡೆಸಿದ್ದವು. ಆದರೆ, ನಮ್ಮ ಸರ್ಕಾರ ಅಭಿವೃದ್ಧಿ ಹೆಸರಲ್ಲಿ ಆಡಳಿತ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಜಿಲ್ಲೆಯ ಹುಣಸಗಿ ತಾಲೂಕಿನ ಕೊಡೇಕಲ್‌ ಗ್ರಾಮದ ಹೊರವಲಯದಲ್ಲಿ ಗುರುವಾರ ಸುಮಾರು 10 ಸಾವಿರ ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಯಾದಗಿರಿ ಸೇರಿದಂತೆ ಕಲ್ಯಾಣ ಕರ್ನಾಟಕದ ಭಾಗ ಹಿಂದುಳಿಯಲು ಹಿಂದಿನ ಸರ್ಕಾರಗಳೇ ಕಾರಣ ಎಂದು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬಲ್‌ ಎಂಜಿನ್‌ ಸರ್ಕಾರದಿಂದಾಗಿ ದೇಶದ ಅಭಿವೃದ್ಧಿ ಸಾಧ್ಯ. ಈ ಭಾಗದ ಅಭಿವೃದ್ಧಿಗೆ ಡಬಲ್‌ ಎಂಜಿನ್‌ ಸರ್ಕಾರ ಶ್ರಮಿಸುತ್ತಿದೆ. ಹಿಂದುಳಿದ ಭಾಗ ಮುಂದುವರೆಯುವಂತೆ ಮಾಡಿದೆ. ಯಾದಗಿರಿ ಜಿಲ್ಲೆ ಮಹತ್ವಾಕಾಂಕ್ಷಿ ಜಿಲ್ಲೆ. ಇಲ್ಲೀಗ ಅಪೌಷ್ಟಿಕತೆ ಕಡಿಮೆಯಾಗಿದೆ, ಶಿಕ್ಷಣ ಮಟ್ಟಸುಧಾರಿಸಿದೆ, ರಸ್ತೆ, ವಿದ್ಯುತ್‌ ಸುಧಾರಿಸಿದೆ, ಈ ಎಲ್ಲ ಅಭಿವೃದ್ಧಿಗಳಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದರು. ಭಾಷಣದ ಆರಂಭದಲ್ಲಿ ಸುರಪುರ ಸಂಸ್ಥಾನದರಸ ರಾಜಾ ವೆಂಕಟಪ್ಪ ನಾಯಕರ ಸ್ವಾತಂತ್ರ್ಯ ಹೋರಾಟ ನೆನೆದ ಮೋದಿ, ಯಾದಗಿರಿ ಐತಿಹಾಸಿಕ ಜಿಲ್ಲೆ. ಇಲ್ಲಿನ ಬಸವ ಸಾಗರ ಜಲಾಶಯದ ಎಡದಂಡೆ ಕಾಲುವೆ, ಸ್ಕಾಡಾ ವ್ಯವಸ್ಥೆ, ಕುಡಿಯುವ ನೀರು, ರಸ್ತೆ ಮುಂತಾದವುಗಳು ಅಭಿವೃದ್ಧಿಯ ಸಂಕೇತ ಎಂದರು.

ಬೊಮ್ಮಾಯಿ ಆಡಳಿತಕ್ಕೆ ಮೋದಿ ಶಹಬ್ಬಾಸ್‌ಗಿರಿ: ಡಬಲ್‌ ಎಂಜಿನ್‌ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ

ನೀರು ಸದ್ಬಳಕೆಗೆ ಮೋದಿ ಸಲಹೆ: ದೇಶದ ಗಡಿ ಭದ್ರತೆ ವಿಚಾರದಲ್ಲಿ ನಾವು ಎಷ್ಟುಮಹತ್ವ ನೀಡುತ್ತೇವೆಯೋ, ಅಷ್ಟೇ ಮಹತ್ವವನ್ನು ನೀರು ಬಳಕೆ ವಿಚಾರಕ್ಕೂ ನೀಡಬೇಕು ಎಂದರು. ಮೂರೂವರೆ ವರ್ಷದ ಹಿಂದೆ ಜಲಜೀವನ ಮಿಷನ್‌ ಆರಂಭಿಸಿದಾಗ 18 ಲಕ್ಷ ಗ್ರಾಮೀಣ ಕುಟುಂಬಗಳಲ್ಲಿ 3 ಕೋಟಿ ಗ್ರಾಮೀಣ ಕುಟುಂಬಗಳು ಮಾತ್ರ ನಳ ಸಂಪರ್ಕ ಹೊಂದಿದ್ದವು. ಆದರೆ ಈಗ 11 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಳ ನೀರು ಸೌಲಭ್ಯ ಸಿಕ್ಕಿದೆ. ಇದೇ ವೇಳೆ 2 ಸಾವಿರ ಕೋಟಿ ರು. ವೆಚ್ಚದಲ್ಲಿ 65.5 ಕಿ.ಮೀ. ಉದ್ದದ ಸೂರತ್‌-ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿಗೂ ಅಡಿಗಲ್ಲು ಹಾಕಿದ ಅವರು, ಬಿಜೆಪಿ ಸರ್ಕಾರವು ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಈ ರಸ್ತೆ ಯೋಜನೆಯು ಉತ್ತರ ಕರ್ನಾಟಕದ ರಸ್ತೆ ಸಂಪರ್ಕದ ಸಮಸ್ಯೆಯನ್ನು ನಿವಾರಿಸುತ್ತದೆ. ಇದರಿಂದ ಈ ಭಾಗದ ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದರು.

Follow Us:
Download App:
  • android
  • ios