Asianet Suvarna News Asianet Suvarna News

ಬೊಮ್ಮಾಯಿ ಆಡಳಿತಕ್ಕೆ ಮೋದಿ ಶಹಬ್ಬಾಸ್‌ಗಿರಿ: ಡಬಲ್‌ ಎಂಜಿನ್‌ ಸರ್ಕಾರದಿಂದ ಕರ್ನಾಟಕ ಅಭಿವೃದ್ಧಿ

ವಾರದ ಹಿಂದಷ್ಟೇ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿ ಅಭಿವೃದ್ಧಿಯ ಮಂತ್ರ ಪಠಿಸಿದ್ದಾರೆ. 

PM Narendra Modi Praises CM Basavaraj Bommai At Kalyana Karnataka gvd
Author
First Published Jan 20, 2023, 7:03 AM IST

ಯಾದಗಿರಿ/ಕಲಬುರಗಿ (ಜ.20): ವಾರದ ಹಿಂದಷ್ಟೇ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಅವರು ಇದೀಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರೂರು ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳಿಗೆ ಗುರುವಾರ ಭೇಟಿ ನೀಡಿ ಅಭಿವೃದ್ಧಿಯ ಮಂತ್ರ ಪಠಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಆಡಳಿತಕ್ಕೆ ಶಹಬ್ಬಾಸ್‌ಗಿರಿಯನ್ನೂ ನೀಡಿದ್ದಾರೆ. ನಮ್ಮ ಸರ್ಕಾರದಲ್ಲೇನಿದ್ದರೂ ಅಭಿವೃದ್ಧಿಗೇ ಆದ್ಯತೆ ಹೊರತು ವೋಟ್‌ ಬ್ಯಾಂಕ್‌ ರಾಜಕಾರಣಕ್ಕಲ್ಲ ಎನ್ನುವ ಮೂಲಕ ಪ್ರತಿಪಕ್ಷಗಳನ್ನು ತಿವಿದ ಅವರು, ಮುಂಬರುವ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಕಲ್ಯಾಣ ಕರ್ನಾಟಕದಲ್ಲಿ ಈಗಿನಿಂದಲೇ ರಣಕಹಳೆ ಮೊಳಗಿಸಿದರು.

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಕೊಡೇಕಲ್‌ ಗ್ರಾಮದ ಹೊರವಲಯದಲ್ಲಿ ಸುಮಾರು .10 ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಂಕುಸ್ಥಾಪನೆ, ನಂತರ ಕಲಬುರಗಿಯ ಮಳಖೇಡದಲ್ಲಿ 52,070 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟವಚನ ನೀಡಿದರು. ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿಯ ಡಬಲ್‌ ಎಂಜಿನ್‌ ಸರ್ಕಾರ ಮೂಲಸೌಲಭ್ಯ ವಂಚಿತ ಸಮುದಾಯಗಳ ಜತೆಗಿದೆ ಎಂದು ಪುನರುಚ್ಚರಿಸಿದ ಅವರು, ಈ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಹಿಂದುಳಿದ ಪಟ್ಟಿಗೆ ಸೇರಿದ್ದ ಜಿಲ್ಲೆಗಳಿಗೆ ನಾವು ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಕೊಡುಗೆ ನೀಡಿದ್ದೇವೆ ಎಂದರು.

ಬೆಂಗಳೂರು ಯುಜಿಸಿ ಕಚೇರಿ ಸದ್ದಿಲ್ಲದೆ ದಿಲ್ಲಿಗೆ: ಪ್ರಮುಖ ಉನ್ನತ ಶಿಕ್ಷಣ ಕಚೇರಿ ನಷ್ಟ

ಇದೇ ವೇಳೆ, ರಾಜ್ಯದಲ್ಲಿ ಆಡಳಿತದಲ್ಲಿರುವ ಬೊಮ್ಮಾಯಿ ನೇತೃತ್ವದ ಸರ್ಕಾರ ಅತ್ಯಂತ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ ಅವರು, ಪ್ರತಿಪಕ್ಷಗಳ ಹೆಸರೆತ್ತದೆ ಕಾಲೆಳೆದರು. ಹಿಂದಿನ ಸರ್ಕಾರಗಳೆಲ್ಲ ವೋಟ್‌ ಬ್ಯಾಂಕ್‌ ರಾಜಕೀಯ ಮಾಡಿದ್ದವು. ಜಾತಿ-ಧರ್ಮದ ಆಧಾರದ ಮೇಲೆ ಆಡಳಿತ ನಡೆಸಿದ್ದವು. ಆದರೆ ಬಿಜೆಪಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರದಿಂದ ರಾಜ್ಯದಲ್ಲಿ ಅಭಿವೃದ್ಧಿಯ ಶಕೆ ಶುರುವಾಗಿದೆ. ಡಬಲ್‌ ಎಂಜಿನ್‌ ಸರ್ಕಾರ ಪಶುಪಾಲನೆ, ಕೃಷಿಗೆ ಪ್ರೋತ್ಸಾಹ ನೀಡುತ್ತಿದೆ, ಮುದ್ರಾ ಯೋಜನೆ ಮೂಲಕ ಆರ್ಥಿಕ ನೆರವು ನೀಡಲಾಗುತ್ತಿದೆ, ರೈತ ಸಮ್ಮಾನ್‌ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗಿದೆ. 

ಹರ್‌ಘರ್‌ ಜಲ ಅಭಿಯಾನ್‌ ನೋಡಿದರೆ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆ ಏನೆಂಬುದು ಮನದಟ್ಟಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದಲ್ಲಿ ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾರ್ಯಗಳ ಕುರಿತೂ ಖುಷಿ ವ್ಯಕ್ತಪಡಿಸಿದ ಅವರು, ಬಸವಾದಿ ಶರಣರು ಅನುಭವ ಮಂಟಪ ಮೂಲಕ ಹಿಂದೆಯೇ ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದ್ದರು, ಇದೇ ಸಿದ್ಧಾಂತದೊಂದಿಗೆ ನಾವು ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌, ಸಬ್‌ ಕಾ ವಿಶ್ವಾಸ್‌ ಹಾಗೂ ಸಬ್‌ ಕಾ ಪ್ರಯಾಸ್‌ ತತ್ವದದಿ ಸರ್ಕಾರ ಮುನ್ನಡೆಸುತ್ತಿದ್ದೇವೆ ಎಂದರು. ಈಗ ಹಕ್ಕುಪತ್ರ ವಿತರಿಸಲಾಗಿರುವ ಕುಟುಂಬಗಳ ಮನೆಗಳಿಗೆ ಮುಂದಿನ ದಿನಗಳಲ್ಲಿ ವಿದ್ಯುತ್‌, ನೀರು, ಗ್ಯಾಸ್‌ ಸೇರಿದಂತೆ ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದರು.

ಒಂದೇ ದಿನ 52000 ಹಕ್ಕುಪತ್ರ ವಿತರಣೆ, ಗಿನ್ನೆಸ್‌ ದಾಖಲೆ!: ಒಂದೇ ದಿನ 52,072 ಅಲೆಮಾರಿ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಕಾರ್ಯಕ್ರಮ ಇದೀಗ ಗಿನ್ನೆಸ್‌ ವಿಶ್ವದಾಖಲೆ ಬರೆದಿದೆ. ಸಚಿವ ಆರ್‌.ಅಶೋಕ್‌ ನೇತೃತ್ವದ ಕಂದಾಯ ಇಲಾಖೆ ವತಿಯಿಂದ ಹಕ್ಕುಪತ್ರ ನೀಡಲಾಗಿದ್ದು, ಇಷ್ಟೊಂದು ಫಲಾನುಭವಿಗಳಿಗೆ ಏಕಕಾಲದಲ್ಲಿ ದಾಖಲೆಪತ್ರ ವಿತರಿಸಿದ್ದು ವಿಶ್ವದಲ್ಲಿ ಇದೇ ಮೊದಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

5 ಜಿಲ್ಲೆಗಳ ಅಲೆಮಾರಿ ಸಮುದಾಯಗಳಿಗೆ ಜಮೀನು ಹಕ್ಕುಪತ್ರ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್‌, ರಾಯಚೂರು, ಯಾದಗಿರಿ ಹಾಗೂ ಕಿತ್ತೂರು ಕರ್ನಾಟಕದ ವಿಜಯಪುರ ಜಿಲ್ಲೆಗಳಲ್ಲಿನ 342 ತಾಂಡಾ, ಹಟ್ಟಿ, ಹಾಡಿಗಳನ್ನು ಈಗಾಗಲೇ ಕಂದಾಯ ಗ್ರಾಮಗಳೆಂದು ಘೋಷಿಸಲಾಗಿದ್ದು, ಅಲ್ಲಿ ನೆಲೆಸಿರುವ 52,072 ಅಲೆಮಾರಿ ಸಮುದಾಯದವರಿಗೆ ಗುರುವಾರ ಒಂದೇ ದಿನ ಜಮೀನು ಹಕ್ಕುಪತ್ರ ವಿತರಿಸಲಾಯಿತು.

SSC Exam In Kannada: 11,400 ಕೇಂದ್ರ ಸರ್ಕಾರಿ ಹುದ್ದೆಗೆ ಕನ್ನಡದಲ್ಲೂ ಪರೀಕ್ಷೆ

10800 ಕೋಟಿಯ ಅಭಿವೃದ್ಧಿ ಯೋಜನೆಗೆ ಪ್ರಧಾನಿ ಹಸಿರು ನಿಶಾನೆ: ನಾರಾಯಣಪುರ ಎಡದಂಡೆ ಕಾಲುವೆ ಮೂಲಕ ರೈತರಿಗೆ ಸಮಾನ ನೀರು ಹಂಚಿಕೆ ಮಾಡುವ ನಿಟ್ಟಿನಲ್ಲಿ ಅತ್ಯಾಧುನಿಕ ಸ್ಕಾಡಾ ಆಧರಿತ ಸ್ವಯಂಚಾಲಿತ ಗೇಟು ಸೇರಿದಂತೆ ವಿವಿಧ ನೀರಾವರಿ ಕಾಮಗಾರಿಗಳ ಉದ್ಘಾಟನೆ, ಯಾದಗಿರಿ ಜಿಲ್ಲೆಯ 3 ಪಟ್ಟಣ, 710 ಗ್ರಾಮೀಣ ವಸತಿ ಪ್ರದೇಶಗಳ 16 ಲಕ್ಷ ಜನರಿಗೆ ಶುದ್ಧೀಕರಿಸಿದ ನೀರು ಪೂರೈಸುವ ಜಲಜೀವನ್‌ ಮಿಷನ್‌ ಯೋಜನೆಯ ಕಾಮಗಾರಿಗಳಿಗೆ ಚಾಲನೆ ಹಾಗೂ ಸೂರತ್‌-ಚೆನ್ನೈ ಹೆದ್ದಾರಿಯ ಕಲಬುರಗಿ ಮತ್ತು ಯಾದಗಿರಿ ಮಾರ್ಗಗಳಿಗೆ ಶಂಕುಸ್ಥಾಪನೆ ಸೇರಿ ಒಟ್ಟು .10,800 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಗುರುವಾರ ಹಸಿರು ನಿಶಾನೆ ತೋರಿದರು.

Follow Us:
Download App:
  • android
  • ios