ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಚಾಮರಾಜನಗರ ಯುವತಿಗೆ ಆಹ್ವಾನ!
ಸತತ ಮೂರನೇ ಬಾರಿಗೆ ಭಾರತ ಪ್ರಧಾನಮಂತ್ರಿಯಾಗಿ ಇಂದು ನರೇಂದ್ರ ಮೋದಿ ಪ್ರಮಾಣವಚನ ಸ್ವೀಕರಿಸಲಿರುವ ಹಿನ್ನೆಲೆ ಕರಕುಶಲ ಉದ್ಯಮ ನಡೆಸುತ್ತಿರುವ ಚಾಮರಾಜನಗರದ ಯುವತಿಯನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಯಾರು ಈಕೆ? ಯುವತಿಯ ಸಾಧನೆ ಏನು ಇಲ್ಲಿದೆ ವಿವರ
ಚಾಮರಾಜನಗರ(ಜೂ.9): ಸತತ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಭಾರತದ ಪ್ರಧಾನಿಯಾಗಿ ಇಂದು (ಜೂ.9) ರಾತ್ರಿ 7.15ಕ್ಕೆ ಸಂಪುಟ ಸದಸ್ಯರೊಂದಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹಲವು ದೇಶಗಳ ಗಣ್ಯರನ್ನ ಆಹ್ವಾನಿಸಲಾಗಿದೆ. ಜೊತೆಗೆ ದೇಶದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಉಮ್ಮತ್ತೂರಿನಲ್ಲಿ ಕರಕುಶಲ ಉದ್ಯಮ ನಡೆಸುತ್ತಿರುವ ಚಾಮರಾಜನಗರದ ಯುವತಿ ವರ್ಷಾ ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣವಚನ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಮೋದಿ ಅವರ ಮನ್‌ಕಿ ಬಾತ್ ನಿಂದ ಪ್ರೇರಣೆಗೊಂಡು ಕರಕುಶಲ ಉದ್ಯಮ ಆರಂಭಿಸಿರುವ ಯುವತಿ ವರ್ಷಾ. ಉದ್ಯಮ ಆರಂಭಿಸಿ ಸ್ವಾವಲಂಬಿಯಾಗಿದ್ದಲ್ಲದೇ ಹಲವು ಮಹಿಳೆಯರಿಗೆ ಉದ್ಯೋಗ ನೀಡುವ ಜೊತೆಗೆ ಇತರರಿಗೆ ಮಾದರಿಯಾಗಿರುವ ಯುವತಿ ವರ್ಷಾ. ಯುವತಿಯ ಸಾಧನೆ ಬಗ್ಗೆ 'ವೋಕಲ್ ಫಾರ್ ಲೋಕಲ್' ಮನ್ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿಯವರು ಪ್ರಶಂಸಿದ್ದರು. ಇದೀಗ ವರ್ಷಾ ಅವರಿಗೆ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಲಾಗಿದ್ದು, ಯುವತಿ ಈಗಾಗಲೇ ದೆಹಲಿ ತಲುಪಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇವಿಎಂ ಅನುಮಾನಿಸಿದ ಕಾಂಗ್ರೆಸ್‌ಗೆ ಮೋದಿ ಚಾಟಿ
ಯುವತಿ ವರ್ಷಾ ಕುರಿತು
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿಯ ಯುವತಿ ವರ್ಷಾ ಓದಿದ್ದು ಎಂ.ಟೆಕ್ ಆದರೂ ಇಂಥದ್ದೇ ಏಸಿ ರೂಮಿನ ಉದ್ಯೋಗ ಬೇಕು ಅಂತಾ ಅರಸಿ ಹೊರಡಲಿಲ್ಲ. ಬೇರೆಯವರ ಕೈಕೆಳಗೆ ದುಡಿಯುವುದಕ್ಕಿಂತ ಸ್ವಂತ ಉದ್ಯೋಗ ಮಾಡಿ ಏನಾದರೂ ಸಾಧಿಸಬೇಕು ಅಂತಾ ತುಡಿಯುತ್ತಿದ್ದ ಯುವತಿ. ಇದೇ ವೇಳೆ ಪ್ರಧಾನಿ ಮೋದಿಯವರ ಮನ್ ಕೀ ಬಾತ್‌ನಿಂದ ಪ್ರೇರಣೆಗೊಂಡು ಸ್ವಉದ್ಯೋಗ ಆರಂಭಿಸಿದ ಯುವತಿ ಯಶಸ್ಸು ಕಂಡಿದ್ದಾರೆ ಅಲ್ಲದೇ ಇತರೆ ಮಹಿಳೆಯರಿಗೆ ಉದ್ಯೋಗ ನೀಡಿದ್ದಾರೆ. ಯುವತಿ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಕಾರ್ಯಕ್ರಮಕ್ಕೆ ಆಹ್ವಾನ ನೀಡಿರುವುದು ಯುವತಿಯರು ಸ್ವಾವಲಂಬಿಯಾಗಲು ಮತ್ತಷ್ಟು ಪ್ರೇರಣೆ ನೀಡಿದಂತಾಗಿದೆ.