ಅನಂತಸ್ವಾಮಿ ಧಾಟಿಯ ನಾಡಗೀತೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ
ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅರ್ಜಿ ಸಲ್ಲಿಕೆ, ರಾಜ್ಯ ಸರ್ಕಾರದ ಆದೇಶ ರದ್ದು ಪಡಿಸಲು ಮನವಿ
ಬೆಂಗಳೂರು(ಅ.01): ರಾಗ ಸಂಯೋಜಕ ದಿ.ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ ಹಾಡುವುದನ್ನು ಕಡ್ಡಾಯಗೊಳಿಸಿ ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿದ ಆದೇಶ ರದ್ದು ಪಡಿಸುವಂತೆ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಲಾಗಿದೆ. ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ಸೆ.25ರಂದು ಹೊರಡಿಸಲಾಗಿರುವ ಆದೇಶ ರದ್ದುಪಡಿಸುವಂತೆ ಕೋರಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಶುಕ್ರವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ, ಪ್ರತಿವಾದಿಗಳಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಅದರ ನಿರ್ದೇಶಕರು ಮತ್ತು ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗೆ ತುರ್ತು ನೋಟಿಸ್ ಜಾರಿಗೊಳಿಸಿ, ಯಾವ ನಿಯಮ ಹಾಗೂ ಯಾವ ಅಧಿಕಾರದಡಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂಬ ಬಗ್ಗೆ ವಿವರಣೆ ನೀಡುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.
Karnataka State Anthem: ನಾಡಗೀತೆಗೆ ಅನಂತ ಸ್ವಾಮಿ ಧಾಟಿ ಅಂತಿಮ
ಅರ್ಜಿದಾರರ ಆಕ್ಷೇಪವೇನು?
ಮೈಸೂರು ಅನಂತಸ್ವಾಮಿ ಸಂಯೋಜಿಸಿದ್ದ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್‌ಗಳಲ್ಲಿ ನಾಡಗೀತೆ ಹಾಡುವ ಸಂಬಂಧ ಸೆ.25ರಂದು ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಅನಂತಸ್ವಾಮಿ ಅವರು ಪೂರ್ಣ ನಾಡಗೀತೆಗೆ ರಾಗ ಸಂಯೋಜನೆ ಮಾಡಿದ್ದರು ಎಂಬುದಕ್ಕೆ ಯಾವುದೇ ಪುರಾವೆಗಳು ಇಲ್ಲ. ವಾಸ್ತವಾಗಿ ನಾಡಗೀತೆಗೆ ಡಾ.ಸಿ. ಅಶ್ವಥ್ ಅವರು ರಾಗ ಸಂಯೋಜಿಸಿದ್ದು, ಅದನ್ನು ಮುಂದುವರಿಸುವಂತೆ ಸಾಹಿತಿ ಚನ್ನವೀರ ಕಣವಿ ನೇತೃತ್ವದ ಸಮಿತಿ ಮಾಡಿರುವ ಶಿಫಾರಸನ್ನು ಸರ್ಕಾರ ಕಡೆಗಣಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಕುವೆಂಪು ಕವನಗಳನ್ನು ನಾಡಗೀತೆ, ರೈತಗೀತೆ ಮಾಡಿದ್ದು ಬಿಜೆಪಿ: ಸದಾನಂದಗೌಡ
ಡಾ.ಸಿ. ಅಶ್ವಥ್ ಅವರು ಪೂರ್ಣ ನಾಡಗೀತೆಗೆ ರಾಗ ಸಂಯೋಜಿಸಿದ್ದಾರೆ ಹೊರತು ಅನಂತಸ್ವಾಮಿ ಅಲ್ಲವೆಂದು 2013ರ ಜೂ.12ರಂದು ವಸಂತ ಕನಕಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಜತೆಗೆ ಡಾ.ಸಿ. ಅಶ್ವಥ್ ಅವರ ರಾಗ ಸಂಯೋಜಿಸಿರುವ ನಾಡಗೀತೆಯನ್ನೇ ಮುಂದುವರಿಸುವುದಕ್ಕೆ ಸ್ವತಃ ಮೈಸೂರು ಅನಂತಸ್ವಾಮಿ ಅವರು ಒಪ್ಪಿಕೊಂಡಿದ್ದಾರೆ. ನಾಡಗೀತೆಗೆ ಮೈಸೂರು ಅನಂತಸ್ವಾಮಿ ಅವರು ಒಂದು ಪಲ್ಲವಿ ಮತ್ತು ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿದ್ದಾರೆ. ಇನ್ನುಳಿದಂತೆ ಇಡೀ ಹಾಡಿಗೆ ಸಿ.ಅಶ್ವಥ್ ರಾಗ ಸಂಯೋಜಿಸಿದ್ದಾರೆ. ಆದ್ದರಿಂದ ಸರ್ಕಾರದ ಆದೇಶ ಜಾರಿ ಮಾಡಲು ಪ್ರಯೋಗಿಕವಾಗಿ ಸಾಧ್ಯವಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಹಾಗೆಯೇ, ನಾಡಗೀತೆಯ ರಾಗ, ಧಾಟಿ ಮತ್ತು ಸಮಯದ ಮಿತಿ ಕುರಿತು ರಾಜ್ಯ ಸರ್ಕಾರ ತರಾತುರಿಯಲ್ಲಿ ಆದೇಶ ಹೊರಡಿಸಿದ್ದು, ಅದನ್ನು ರದ್ದುಪಡಿಸಬೇಕು ಎಂದು ಕೋರಿರುವ ಅರ್ಜಿದಾರರು, ಈ ಅರ್ಜಿ ಇತ್ಯರ್ಥವಾಗುವವರೆಗೂ ಸೆ.25ರ ಆದೇಶದ ಜಾರಿಗೆ ತಡೆ ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.