* ಡಿಜಿಪಿಗೆ ಬರೆದ ಪತ್ರ, ವಾಟ್ಸಾಪ್‌ ಸ್ಕ್ರೀನ್‌ಶಾಟ್‌ ವೈರಲ್‌* ಎಸ್‌ಐ ಪರೀಕ್ಷೆಯಲ್ಲಿ ಲಂಚ ನೀಡಿದ ಅಭ್ಯರ್ಥಿಯಿಂದಲೇ ತನಿಖೆಗೆ ಅರ್ಜಿ

ಯಾದಗಿರಿ(ಮೇ.23): ಸಬ್‌ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆ ಅಕ್ರಮಗಳ ಬಗ್ಗೆ ಸಿಐಡಿ ತೀವ್ರ ತನಿಖೆ ನಡೆಸುತ್ತಿರುವುದರ ನಡುವೆಯೇ ಈ ಹಿಂದೆ ಅಕ್ರಮದಲ್ಲಿ ಭಾಗಿಯಾಗಿದ್ದರು ಎನ್ನಲಾದ ಕೆಲ ಅಭ್ಯರ್ಥಿಗಳೇ ದೂರು ನೀಡಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

ರಾಜ್ಯ ಸರ್ಕಾರ ಎಸ್‌ಐ ಆಯ್ಕೆ ಪಟ್ಟಿರದ್ದು ಮಾಡಿ ಮರುಪರೀಕ್ಷೆಗೆ ಆದೇಶಿಸಿದ ನಂತರ ಕಂಗಾಲಾದ ಕೆಲ ಅಭ್ಯರ್ಥಿಗಳು ಲಂಚದ ಹಣ ವಾಪಸ್‌ ಕೇಳಿದ್ದಾರೆ. ಆದರೆ ಅವರಿಗೆ ಹಣ ಮರಳಿ ಸಿಕ್ಕಿಲ್ಲ. ಹೀಗಾಗಿ ಈಗ ಹತಾಶರಾಗಿ ಅವರೇ ಇಲಾಖೆಗೆ ಪೂರಕ ಸಾಕ್ಷ್ಯಗಳನ್ನು ನೀಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಪೂರಕವಾಗಿ, ಅಕ್ರಮ ದಂಧೆಕೋರರಿಗೆ ಹಣ ನೀಡಿದ್ದಾನೆ ಎನ್ನಲಾದ ಅಭ್ಯರ್ಥಿಯೊಬ್ಬ ಡಿಜಿಪಿಗೆ ಬರೆದ ದೂರುಪತ್ರ ಮತ್ತು ಕಳೆದೊಂದು ವರ್ಷದಿಂದ ನಡೆದಿದೆ ಎನ್ನಲಾದ ಈ ಕುರಿತ ವಾಟ್ಸಾಪ್‌ ಚಾಟ್‌ ಸಂದೇಶಗಳ ಸ್ಕ್ರೀನ್‌ ಶಾಟ್‌ಗಳು ನೊಂದ ಅಭ್ಯರ್ಥಿಗಳ ಗುಂಪುಗಳಲ್ಲಿ ಹಂಚಿಕೆಯಾಗುತ್ತಿವೆ.

Scroll to load tweet…

ಪತ್ರದಲ್ಲೇನಿದೆ?:

ಸಿಐಡಿ ತನಿಖೆಗೆ ಪೂರಕ ಸಾಕ್ಷಿ ನೀಡಲಿರುವ ಅಸಹಾಯಕ ಅಭ್ಯರ್ಥಿ ಎಂಬ ಹೆಸರಿನಲ್ಲಿ ಡಿಜಿಪಿಗೆ ಬರೆದ ಪತ್ರದ ಒಕ್ಕಣೆ ಹೀಗಿದೆ.

‘545 ಪಿಎಸೈ ಪರೀಕ್ಷೆಯಲ್ಲಿ ಟಾಪ್‌ 20ರೊಳಗೆ ನಾನು ಆಯ್ಕೆಯಾಗಿದ್ದೆ. ನಾಲ್ಕು ವರ್ಷಗಳಿಂದ ಈ ಹುದ್ದೆಗೆ ಪ್ರಯತ್ನಿಸುತ್ತಿದ್ದೆ. ಆದರೆ ಆಯ್ಕೆಯಾಗಿರಲಿಲ್ಲ. ಈಗ ಅಕ್ರಮವಾಗಿ ಪ್ರವೇಶಿಸಲು ಎರಡು ಹಂತದಲ್ಲಿ ಒಟ್ಟು .75 ಲಕ್ಷ ನೀಡಿದ್ದೇನೆ. ಬೆಂಗಳೂರಿನ ವಿಜಯನಗರದಲ್ಲಿನ ಕಾಲೇಜೊಂದರ ಪ್ರಾಂಶುಪಾಲನಾಗಿದ್ದ ವ್ಯಕ್ತಿ ಇಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡುತ್ತಿದ್ದ. ಆತನ ಜೊತೆಗೆ ಜನವರಿ 2021ರಿಂದ ಸಂಪರ್ಕದಲ್ಲಿದ್ದೇನೆ.

ಹಣ ನೀಡಿದ ನಂತರ ಆತ ಬ್ಲೂಟೂತ್‌ ಉಪಕರಣ ನೀಡಿದ್ದ. ಪರೀಕ್ಷೆಯಲ್ಲಿ ನಾನು ಪಾಸಾಗಿದ್ದೆ. ಪಟ್ಟಿರದ್ದಾದ ಮೇಲೆ ನಾನು ಹಣ ವಾಪಸ್‌ ನೀಡುವಂತೆ ಕೇಳಿದಾಗ ಆತ ಈಗಾಗಲೇ ನಿಮ್ಮ ಹಣವನ್ನು ವಿಜಿ ಸರ್‌ಗೆ ಮತ್ತು ಪಾಟೀಲ್‌ ಸರ್‌ಗೆ ನೀಡಲಾಗಿದೆ. ಏನೂ ಮಾಡಲು ಆಗುವುದಿಲ್ಲ ಎಂದಿದ್ದಾರೆ. ನನ್ನಿಂದಾದ ತಪ್ಪಿನ ಬಗ್ಗೆ ಈಗ ಅರಿವಾಗಿದೆ. ಈ ಪತ್ರದ ಜೊತೆ ನಾನು ಮಧ್ಯವರ್ತಿಯೊಡನೆ ನಡೆಸಿದ ವಾಟ್ಸಾಪ್‌ ಸಂಭಾಷಣೆಯ ಸ್ಕ್ರೀನ್‌ ಶಾಟ್‌ಗಳನ್ನು ಲಗತ್ತಿಸಿದ್ದೇನೆ. ಗಮನಿಸಿ ಕ್ರಮ ಕೈಗೊಳ್ಳಿ.’ ಈ ವೈರಲ್‌ ಪತ್ರ ಮತ್ತು ಸ್ಕ್ರೀನ್‌ಶಾಟ್‌ಗಳ ಸತ್ಯಾಸತ್ಯ ಇನ್ನಷ್ಟೇ ಪರಿಶೀಲನೆಯಾಗಬೇಕಿದೆ.